
ಬೆಂಗಳೂರು, ಮಾರ್ಚ್ 24: ಐಪಿಎಲ್ 2026 (IPL 2026) ಸೀಸನ್ ಆರಂಭದ ಹಿನ್ನಲೆಯಲ್ಲಿ ಆರ್ಸಿಬಿ (Royal Challengers Bengaluru) ಆಡಳಿತ ಮಂಡಳಿ ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಮಹತ್ವದ ಸುದ್ದಿಗೋಷ್ಠಿ ನಡೆಸಿತು. ಈ ವೇಳೆ ತಂಡದ ಉಪಾಧ್ಯಕ್ಷ ರಾಜೇಶ್ ಮೆನನ್ ಹಾಗೂ ಕ್ರಿಕೆಟ್ ಡೈರೆಕ್ಟರ್ ಮೋ ಬೋಬಾಟ್ ಹಲವು ಪ್ರಮುಖ ಮಾಹಿತಿಗಳನ್ನು ಹಂಚಿಕೊಂಡರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜೇಶ್ ಮೆನನ್, ರಾಜ್ಯ ಸರ್ಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಗೃಹ ಸಚಿವ ಡಾ. ಜಿ. ಪರಮೇಶ್ವರ ಸೇರಿದಂತೆ ಎಲ್ಲಾ ಅಧಿಕಾರಿಗಳಿಗೆ ಧನ್ಯವಾದ ಸಲ್ಲಿಸಿದರು. ಸರ್ಕಾರ ನೀಡಿದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ ಎಂದು ತಿಳಿಸಿದರು.
ಐಪಿಎಲ್ ಪಂದ್ಯಕ್ಕೆ ಕಠಿಣ ಭದ್ರತಾ ಕ್ರಮಗಳು
ಈ ಬಾರಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭದ್ರತೆಗೆ ವಿಶೇಷ ಆದ್ಯತೆ ನೀಡಲಾಗಿದೆ. ಗ್ರೌಂಡ್ ಒಳಗೆ ಮತ್ತು ಹೊರಗೆ ಸಿಸಿಟಿವಿ ಕ್ಯಾಮರಾಗಳ ಜೊತೆಗೆ ಎಐ ಆಧಾರಿತ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಜನಸಂದಣಿ ಹೆಚ್ಚಾದ ಸ್ಥಳಗಳನ್ನು ಗುರುತಿಸಿ ತಕ್ಷಣ ಎಚ್ಚರಿಕೆ ನೀಡುವ ವ್ಯವಸ್ಥೆ ಮಾಡಲಾಗಿದೆ. ಮೂರು ಕಮಾಂಡ್ ಸೆಂಟರ್ಗಳನ್ನು ಸ್ಥಾಪಿಸಲಾಗಿದ್ದು, ಎರಡು ಕ್ರೀಡಾಂಗಣದಲ್ಲಿ ಮತ್ತು ಒಂದು ಕಮಿಷನರ್ ಕಚೇರಿಯಲ್ಲಿ ಕಾರ್ಯನಿರ್ವಹಿಸಲಿದೆ ಎಂದು ಆರ್ಸಿಬಿ ಆಡಳಿತಮಂಡಳಿ ತಿಳಿಸಿದೆ.
ಟಿಕೆಟ್ ಬುಕಿಂಗ್, ಪ್ರವೇಶ ಮತ್ತು ಪಾರ್ಕಿಂಗ್ ವ್ಯವಸ್ಥೆ ಹೇಗಿರಲಿದೆ?
ಇಂದು ಸಂಜೆ 4 ಗಂಟೆಯಿಂದ ಟಿಕೆಟ್ ಮಾರಾಟ ಆರಂಭವಾಗಲಿದೆ. ಮೆಟ್ರೋ ಟಿಕೆಟ್ ಲಿಂಕ್ ಮಾಡುವ ವ್ಯವಸ್ಥೆ ಜಾರಿಗೆ ತರುವ ಹಿನ್ನೆಲೆಯಲ್ಲಿ ಟಿಕೆಟ್ ಮಾರಾಟ ಸ್ವಲ್ಪ ತಡವಾಗಿದೆ. ಟಿಕೆಟ್ ಜೊತೆ ಪಾರ್ಕಿಂಗ್ ಬುಕ್ಕಿಂಗ್ ಮಾಡುವ ವ್ಯವಸ್ಥೆಯೂ ಇದೆ. ಪಂದ್ಯ ಆರಂಭಕ್ಕೆ ನಾಲ್ಕು ಗಂಟೆಗಳ ಮುಂಚೆಯೇ ಪ್ರೇಕ್ಷಕರಿಗೆ ಪ್ರವೇಶ ನೀಡಲಾಗುತ್ತದೆ. ಕ್ರೀಡಾಂಗಣದ ಸುತ್ತಮುತ್ತ ಕಾರುಗಳಿಗೆ ಎಂಟ್ರಿ ಇರುವುದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಏತನ್ಮಧ್ಯೆ, ಮೋಸದ ವೆಬ್ಸೈಟ್ಗಳ ಮೂಲಕ ಟಿಕೆಟ್ ಖರೀದಿಸಬಾರದು ಎಂದು ಆರ್ಸಿಬಿ ಮನವಿ ಮಾಡಿದೆ. ಅಧಿಕೃತ ತಾಣಗಳಲ್ಲಿಯೇ ಟಿಕೆಟ್ ಖರೀದಿಸಲು ಸೂಚಿಸಿದೆ.
11 ನಂಬರ್ ಜೆರ್ಸಿ, 11 ಸೀಟ್ ಖಾಲಿ ಬಿಟ್ಟು ಕಾಲ್ತುಳಿತದಲ್ಲಿ ಮೃತಪಟ್ಟವರಿಗೆ ಗೌರವ
ಕಳೆದ ವರ್ಷದ ಕಾಲ್ತುಳಿತ ಘಟನೆಯಲ್ಲಿ ಮೃತಪಟ್ಟ 11 ಅಭಿಮಾನಿಗಳ ಸ್ಮರಣಾರ್ಥ, ಆಟಗಾರರು 11 ನಂಬರ್ ಜರ್ಸಿಯಲ್ಲಿ ಅಭ್ಯಾಸ ನಡೆಸಲಿದ್ದಾರೆ. ಜೊತೆಗೆ ಕ್ರೀಡಾಂಗಣದಲ್ಲಿ 11 ಸೀಟ್ಗಳನ್ನು ಖಾಲಿ ಬಿಡುವ ಮೂಲಕ ಗೌರವ ಸಲ್ಲಿಸಲಾಗುತ್ತದೆ ಎಂದು ತಂಡದ ಮ್ಯಾನೇಜ್ಮೆಂಟ್ ತಿಳಿಸಿದೆ.
ಯಶ್ ದಯಾಳ್ ಆಡಲ್ಲ
ಯಶ್ ದಯಾಳ್ ಈ ಬಾರಿ ಪ್ಲೇಯಿಂಗ್ ಸ್ಕ್ವಾಡ್ನಲ್ಲಿ ಇರುವುದಿಲ್ಲ ಎಂದು ಮೋ ಬೋಬಾಟ್ ಸ್ಪಷ್ಟಪಡಿಸಿದರು. ಆದರೆ ಅವರು ತಂಡದ ಜೊತೆ ಮುಂದುವರೆಯಲಿದ್ದಾರೆ ಎಂದರು. ಜೋಶ್ ಹೇಜಲ್ವುಡ್ ಶೀಘ್ರದಲ್ಲೇ ತಂಡ ಸೇರಿಕೊಳ್ಳಲಿದ್ದಾರೆ.
ರಾಯಪುರದಲ್ಲೂ ಪಂದ್ಯ
ಈ ಸೀಸನ್ನಲ್ಲಿ ರಾಯಪುರದಲ್ಲೂ ಆರ್ಸಿಬಿ ಪಂದ್ಯಗಳು ನಡೆಯಲಿವೆ. ಅಲ್ಲಿನ ರಾಜ್ಯ ಸರ್ಕಾರ ಜಿಎಸ್ಟಿ ಸಡಿಲಿಕೆ ನೀಡಿರುವುದಾಗಿ ಮಾಹಿತಿ ನೀಡಲಾಗಿದೆ.
ಇದನ್ನೂ ಓದಿ: RCB ಪಂದ್ಯಗಳ ಟಿಕೆಟ್ ಸಿಗಲೇಬೇಕು ಅಂದ್ರೆ ಬುಕ್ ಮಾಡುವಾಗ ಈ ಕ್ರಮ ಅನುಸರಿಸಿ
ಮತ್ತೊಂದೆಡೆ, ಆರ್ಸಿಬಿ ತಂಡದ ಮಾಲೀಕತ್ವ ಬದಲಾವಣೆ ಸಾಧ್ಯತೆ ಬಗ್ಗೆ ಮೂಲಗಳಿಂದ ಮಾಹಿತಿ ದೊರೆತಿದ್ದು, ಇಂದ (ಮಾರ್ಚ್ 24) ಸಂಜೆ. ಅಧಿಕೃತ ಘೋಷಣೆಯಾಗುವ ಸಾಧ್ಯತೆ ಇದೆ. ಸುಮಾರು 15-16 ಸಾವಿರ ಕೋಟಿ ರೂಪಾಯಿಗೆ ತಂಡ ಮಾರಾಟವಾಗುವ ಸಾಧ್ಯತೆ ಇದೆ.
ಇನ್ನಷ್ಟು ಕ್ರಿಕೆಟ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ