
ಬೆಳಗಾವಿ, ಹಾವೇರಿ, ಮಾರ್ಚ್ 25: ಬೆಳಗಾವಿ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಮಂಗಳವಾರ ರಾತ್ರಿ ಧಾರಾಕಾರ ಮಳೆ ಸುರಿದಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಬೆಳಗಾವಿಯಲ್ಲಿ ಸುರಿದ ಭಾರೀ ಮಳೆಯಿಂದಾಗಿ ಕಡೇಬಜಾರ್ ಮಾರುಕಟ್ಟೆ ಸಂಪೂರ್ಣವಾಗಿ ಜಲಾವೃತಗೊಂಡಿದೆ. ಏಕಾಏಕಿ ಬಂದ ಮಳೆಯಿಂದಾಗಿ ರಸ್ತೆಬದಿ ವ್ಯಾಪಾರ ಮಾಡುತ್ತಿದ್ದ ತರಕಾರಿ ವ್ಯಾಪಾರಸ್ಥರು ತರಕಾರಿಗಳನ್ನು ಬಿಟ್ಟು ಮನೆಗೆ ತೆರಳಬೇಕಾಯಿತು. ಪೋರ್ಟ್ ರಸ್ತೆಯಲ್ಲಿನ ಅಂಗಡಿಗಳಿಗೂ ಚರಂಡಿ ನೀರು ನುಗ್ಗಿದ್ದು, ವ್ಯಾಪಾರಸ್ಥರು ಪರದಾಡಿದ್ದಾರೆ. ನಗರದ ರಸ್ತೆಗಳು ನದಿಯಂತೆ ಮಾರ್ಪಟ್ಟಿದ್ದು, ಹಲವು ಬೈಕ್ಗಳು ಮುಳುಗಡೆಯಾಗಿವೆ. ಅಕಾಲಿಕ ಮಳೆಯಿಂದ ಬೆಳಗಾವಿ ನಗರ ನಿವಾಸಿಗಳು ತೀವ್ರ ತೊಂದರೆಗೊಳಗಾಗಿದ್ದಾರೆ.
ಇದೇ ರೀತಿ, ಹಾವೇರಿ ಜಿಲ್ಲೆಯ ಹಲವೆಡೆ ಬಿರುಗಾಳಿ ಸಹಿತ ಭಾರಿ ಮಳೆಯಾಗಿದ್ದು, ಭಾರಿ ಅನಾಹುತಕ್ಕೆ ಕಾರಣವಾಗಿದೆ. ಹಾವೇರಿ ತಾಲೂಕಿನ ಕರ್ಜಗಿ ಗ್ರಾಮದಲ್ಲಿ ಮಳೆಯ ರಭಸಕ್ಕೆ ಸಂತೆಯಲ್ಲಿದ್ದ ಬದನೆಕಾಯಿ, ಟೊಮ್ಯಾಟೊ ಸೇರಿದಂತೆ ಹಲವು ತರಕಾರಿಗಳು ಕೊಚ್ಚಿ ಹೋಗಿ ನಾಶವಾಗಿವೆ. ರಸ್ತೆಗಳಲ್ಲಿ ನೀರು ತುಂಬಿಕೊಂಡ ಕಾರಣ ವಾಹನ ಸವಾರರು ಮತ್ತು ತರಕಾರಿ ವ್ಯಾಪಾರಸ್ಥರು ತಮ್ಮ ಸರಕುಗಳನ್ನು ರಕ್ಷಿಸಲು ಪರದಾಡಬೇಕಾಯಿತು. ಮಳೆಯಿಂದಾಗಿ ಹಾವೇರಿಯಲ್ಲಿಯೂ ಜನಜೀವನಕ್ಕೆ ಅಡ್ಡಿಯಾಗಿದೆ.