Headlines

ಭಾರತದ ವಿರುದ್ಧ ಪಂದ್ಯವಾಡಲು 3 ಬೇಡಿಕೆ ಮುಂದಿಟ್ಟ ಪಾಕಿಸ್ತಾನ್! – Kannada News | Pakistan’s Conditions To Play The Match Against India

ಟಿ20 ವಿಶ್ವಕಪ್ 2026 ರಲ್ಲಿ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಮುಖಾಮುಖಿಯಾಗಲಿದೆಯಾ? ಈ ಪ್ರಶ್ನೆಗೆ ಇನ್ನೂ ಸಹ ಸ್ಪಷ್ಟ ಉತ್ತರ ಸಿಕ್ಕಿಲ್ಲ. ಏಕೆಂದರೆ ಭಾರತದ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವುದಾಗಿ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಘೋಷಿಸಿದೆ. ಇದರ ಬೆನ್ನಲ್ಲೇ ಐಸಿಸಿ, ಪಾಕ್ ಕ್ರಿಕೆಟ್ ಬೋರ್ಡ್​ನ ಮನವೊಲಿಸುವ ಪ್ರಯತ್ನಕ್ಕೆ ಕೈ ಹಾಕಿದೆ.

ಅತ್ತ ಐಸಿಸಿ ಅಧಿಕಾರಿಗಳು ಪಾಕಿಸ್ತಾನದಲ್ಲಿದ್ದು, ಈ ಮೂಲಕ ಪಿಸಿಬಿ ಜೊತೆ ಚರ್ಚೆ ಮುಂದುವರೆಸಿದ್ದಾರೆ. ಈ ಚರ್ಚೆಯ ನಡುವೆ ಪಾಕಿಸ್ತಾನ್ ಕ್ರಿಕೆಟ್ ಮಂಡಳಿಯು ಕೆಲ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಆ ಬೇಡಿಕೆಗಳಾವುವು ಎಂದು ನೋಡುವುದಾದರೆ…

  1. ಆದಾಯ ಹೆಚ್ಚಳ: ಐಸಿಸಿಯಿಂದ ಪಾಕಿಸ್ತಾನ್ ಕ್ರಿಕೆಟ್ ಮಂಡಳಿಯ ಆದಾಯವನ್ನು ಹೆಚ್ಚಿಸಬೇಕೆಂದು ಪಿಸಿಬಿ ಬೇಡಿಕೆಯಿಟ್ಟಿದೆ. ಈ ಬೇಡಿಕೆಗೆ ಸಮ್ಮತಿಸುವುದಾದರೆ ಮಾತ್ರ ಭಾರತದ ವಿರುದ್ಧ ಕಣಕ್ಕಿಳಿಯುವುದಾಗಿ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ತಿಳಿಸಿದೆ.
  2. ದ್ವಿಪಕ್ಷೀಯ ಸರಣಿ: ಭಾರತ ಮತ್ತು ಪಾಕಿಸ್ತಾನ್ ನಡುವಣ ದ್ವಿಪಕ್ಷೀಯ ಸರಣಿಯನ್ನು ಮತ್ತೆ ಆರಂಭಿಸಬೇಕೆಂದು ಪಿಸಿಬಿ ಆಗ್ರಹಿಸಿದೆ. ಇದಕ್ಕಾಗಿ ಐಸಿಸಿ ಮುಖ್ಯ ಪಾತ್ರವಹಿಸಬೇಕು. ಈ ಮೂಲಕ ಭಾರತ ಮತ್ತು ಪಾಕಿಸ್ತಾನ್ ನಡುವಣ ಸರಣಿಯನ್ನು ಪುನಃಸ್ಥಾಪಿಸುವ ಭರವಸೆ ನೀಡಬೇಕೆಂದು ಪಿಸಿಬಿ ಆಗ್ರಹಿಸಿದೆ.
  3. ಹ್ಯಾಂಡ್​ಶೇಕ್: ಕ್ರೀಡಾ ಕ್ಷೇತ್ರದಲ್ಲಿ ರಾಜಕೀಯ ಮಾಡಬಾರದು. ಪಂದ್ಯಗಳ ವೇಳೆ ಹ್ಯಾಂಡ್​ಶೇಕ್ ಪ್ರೋಟೋಕಾಲ್​ ಜಾರಿ ಮಾಡಬೇಕು. ಈ ಪ್ರೊಟೋಕಾಲ್​ ಪ್ರಕಾರ ಭಾರತ ಮತ್ತು ಪಾಕಿಸ್ತಾನ್ ಆಟಗಾರರು ಹ್ಯಾಂಡ್​ಶೇಕ್ ಮಾಡುವುದನ್ನು ಕಡ್ಡಾಯ ಮಾಡಬೇಕೆಂದು ಪಿಸಿಬಿ ಬೇಡಿಕೆಯಿಟ್ಟಿದೆ.

ಸದ್ಯ ಈ ಮೂರು ಬೇಡಿಕೆಗಳೊಂದಿಗೆ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಹಾಗೂ ಐಸಿಸಿ ಅಧಿಕಾರಿಗಳ ನಡುವೆ ಚರ್ಚೆ ಮುಂದುವರೆದಿದೆ. ಅಲ್ಲದೆ ಇಂದು (ಫೆ.9) ಐಸಿಸಿ-ಪಿಸಿಬಿ ಅಧಿಕಾರಿಗಳ ನಡುವೆ ಲಾಹೋರ್​ನಲ್ಲಿ ಈ ಕುರಿತಾದ ವಿಶೇಷ ಸಭೆ ನಡೆಯಲಿದ್ದು, ಈ ವೇಳೆ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ.

ಪಾಕಿಸ್ತಾನ್ ಪಂದ್ಯವನ್ನು ಬಹಿಷ್ಕರಿಸುತ್ತಿರುವುದೇಕೆ?

ಟಿ20 ವಿಶ್ವಕಪ್​ನಿಂದ ಬಾಂಗ್ಲಾದೇಶ್ ತಂಡವನ್ನು ಕೈ ಬಿಟ್ಟಿರುವುದನ್ನು ಖಂಡಿಸಲು ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಭಾರತದ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸಲು ನಿರ್ಧರಿಸಿದೆ. ಆಟಗಾರರ ಸುರಕ್ಷತೆಯ ದೃಷ್ಟಿಯಿಂದ ಬಾಂಗ್ಲಾದೇಶ್ ತಂಡದ ಪಂದ್ಯಗಳನ್ನು ಭಾರತದಿಂದ ಶ್ರೀಲಂಕಾಗೆ ಸ್ಥಳಾಂತರ ಮಾಡಬೇಕೆಂದು ಬಾಂಗ್ಲಾದೇಶ್ ಕ್ರಿಕೆಟ್ ಬೋರ್ಡ್ ಆಗ್ರಹಿಸಿತ್ತು.

ಆದರೆ ಬಾಂಗ್ಲಾದೇಶ್ ಕ್ರಿಕೆಟ್ ಬೋರ್ಡ್​ನ ಈ ಮನವಿಯನ್ನು ಐಸಿಸಿ ತಿರಸ್ಕರಿಸಿತ್ತು. ಅಲ್ಲದೆ ಬಾಂಗ್ಲಾ ತಂಡವು ಭಾರತದಲ್ಲೇ ಆಡಬೇಕೆಂದು ಸೂಚಿಸಿದ್ದರು. ಐಸಿಸಿಯ ಈ ಸೂಚನೆಯನ್ನು ತಿರಸ್ಕರಿಸಿದ್ದರಿಂದ ಬಾಂಗ್ಲಾದೇಶ್ ತಂಡವನ್ನು ಟಿ20 ವಿಶ್ವಕಪ್​ನಿಂದ ಕೈ ಬಿಡಲಾಯಿತು.

ಇತ್ತ ಬಾಂಗ್ಲಾದೇಶ್ ತಂಡವನ್ನು ಕೈ ಬಿಟ್ಟಿರುವ ಐಸಿಸಿ ಹಾಗೂ ಬಿಸಿಸಿಐ ಕ್ರಮವನ್ನು ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಖಂಡಿಸಿದೆ. ಇದೇ ಕಾರಣಕ್ಕೆ ಭಾರತದ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸಲು ನಿರ್ಧರಿಸಿದೆ.

ಅದರಂತೆ ಫೆಬ್ರವರಿ 15 ಕ್ಕೆ ನಿಗದಿಯಾಗಿರುವ ಭಾರತದ ವಿರುದ್ಧದ ಪಂದ್ಯದಲ್ಲಿ ಪಾಕ್ ತಂಡ ಕಣಕ್ಕಿಳಿಯುವುದಿಲ್ಲ ಎಂದು ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ತಿಳಿಸಿದೆ. ಇತ್ತ ಭಾರತ ಮತ್ತು ಪಾಕಿಸ್ತಾನ್ ನಡುವಣ ಪಂದ್ಯ ನಡೆಯದೇ ಇದ್ದರೆ ಐಸಿಸಿ ಆದಾಯಕ್ಕೆ ಆರ್ಥಿಕ ಹೊಡೆತ ಬೀಳಲಿದೆ. ಹೀಗಾಗಿ ಇದೀಗ ಐಸಿಸಿ ಅಧಿಕಾರಿಗಳು ಪಾಕಿಸ್ತಾನ್ ಕ್ರಿಕೆಟ್ ಮಂಡಳಿಯ ಮನವೊಲಿಸುವ ಕಾಯಕಕ್ಕೆ ಕೈ ಹಾಕಿದ್ದಾರೆ.

ಇದನ್ನೂ ಓದಿ: ಮುಂದಿನ ವಿಶ್ವಕಪ್‌ನಲ್ಲಿ ವೈಭವ್ ಸೂರ್ಯವಂಶಿಗೆ ಇಲ್ಲ ಅವಕಾಶ..!

ಇದೇ ವೇಳೆ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಕೂಡ ತನ್ನ ಬೇಡಿಕೆಗಳನ್ನು ಐಸಿಸಿಯ ಮುಂದಿಟ್ಟಿದ್ದು, ಈ ಬೇಡಿಕೆಗಳನ್ನು ಪೂರೈಸಿದರೆ ಮಾತ್ರ ಭಾರತದ ವಿರುದ್ಧ ಕಣಕ್ಕಿಳಿಯುವುದಾಗಿ ತಿಳಿಸಿದೆ. ಅದರಂತೆ ಪಿಸಿಬಿಯ ಬೇಡಿಕೆಗೆ ಐಸಿಸಿ ಒಪ್ಪಿಗೆ ಸೂಚಿಸಲಿದೆಯಾ ಕಾದು ನೋಡಬೇಕಿದೆ.

Source link

Leave a Reply

Your email address will not be published. Required fields are marked *