
ಧನುಶ್ (Dhanush), ತಮಿಳು ಚಿತ್ರರಂಗದ ಸ್ಟಾರ್ ನಟ, ತೆಲುಗು ರಾಜ್ಯಗಳಲ್ಲಿಯೂ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಧನುಶ್ ಅವರು ದಕ್ಷಿಣದಲ್ಲಿ ಮಾತ್ರವಲ್ಲ ಹಿಂದಿ ಭಾಷಿಕ ಪ್ರದೇಶದಲ್ಲೂ ದೊಡ್ಡ ಅಭಿಮಾನಿ ವರ್ಗ ಹೊಂದಿದ್ದಾರೆ. ಅದಕ್ಕೆ ಮುಖ್ಯ ಕಾರಣ ಅವರ ನಟನೆಯ ‘ರಾಂಝನಾ’ ಸಿನಿಮಾ. 2013 ರಲ್ಲಿ ಬಿಡುಗಡೆ ಆಗಿದ್ದ ಹಿಂದಿ ಸಿನಿಮಾ ‘ರಾಂಝನಾ’ ಹಿಂದಿಯ ಕಲ್ಟ್ ಕ್ಲಾಸಿಕ್ಗಳಲ್ಲಿ ಒಂದು. ಅದಾದ ಬಳಿಕ ಸತತವಾಗಿ ಧನುಶ್ ಹಿಂದಿ ಸಿನಿಮಾಗಳಲ್ಲಿ ನಟಿಸುತ್ತಲೇ ಬರುತ್ತಿದ್ದಾರೆ.
ಧನುಶ್ ಮತ್ತು ಬಾಲಿವುಡ್ ನಿರ್ದೇಶಕ ಆನಂದ್ ಎಲ್ ರಾಯ್ ಅವರದ್ದು ಜೋಡಿಯೇ ಆಗಿಬಿಟ್ಟಿದೆ. ಇತ್ತೀಚೆಗಷ್ಟೆ ಧನುಶ್, ಕೃತಿ ಸನೋನ್ ನಟಿಸಿದ್ದ ‘ತೇರೆ ಇಷ್ಕ್ ಮೇ’ ಸಿನಿಮಾವನ್ನು ಆನಂದ್ ಎಲ್ ರಾಯ್ ನಿರ್ದೇಶಿಸಿದ್ದು, ಸಿನಿಮಾ ಸಾಧಾರಣ ಹಿಟ್ ಅಷ್ಟೇ ಆಯ್ತಾದರೂ ಸಿನಿಮಾದ ಬಗ್ಗೆ ಒಳ್ಳೆಯ ಅಭಿಪ್ರಾಯಗಳೇ ವ್ಯಕ್ತವಾಗಿದ್ದವು. ಇದೀಗ ಧನುಶ್ ಅವರು ಮತ್ತೊಮ್ಮೆ ಹಿಂದಿ ಸಿನಿಮಾನಲ್ಲಿ ನಟಿಸಲು ಸಜ್ಜಾಗಿದ್ದಾರೆ. ಮತ್ತೊಮ್ಮೆ ಆನಂದ್ ಅವರೇ ಧನುಶ್ ಅವರ ಸಿನಿಮಾ ನಿರ್ದೇಶಿಸುತ್ತಿದ್ದಾರೆ.
ಈ ವರೆಗೆ ಆನಂದ್ ಅವರು, ಧನುಶ್ ಅನ್ನು ಸ್ಟ್ರೀಟ ಲವ್ವರ್, ಠಪೋರಿ ರೀತಿಯ ಪಾತ್ರಗಳಲ್ಲೇ ತೋರಿಸಿದ್ದರು. ಆದರೆ ಮೊದಲ ಬಾರಿಗೆ ಧನುಶ್ ಅವರಿಗಾಗಿ ಐತಿಹಾಸಿಕ ಕತೆಯನ್ನು ಆನಂದ್ ಅವರು ಹೆಣೆದಿದ್ದಾರೆ. ಆನಂದ್ ಅವರು ಪೀರಿಯಡ್ ಲವ್ ಸ್ಟೋರಿ ಒಂದನ್ನು ಹೆಣೆದಿದ್ದು, ಸಿನಿಮಾನಲ್ಲಿ ಧನುಶ್ ಜೊತೆಗೆ ಕೃತಿ ಸನೋನ್ ನಾಯಕಿಯಾಗಿ ನಟಿಸಲಿದ್ದಾರೆ. ‘ತೇರೆ ಇಷ್ಕ್ ಮೇ’ ಸಿನಿಮಾನಲ್ಲಿಯೂ ಕೃತಿ ಸನೋನ್ ನಾಯಕಿ ಆಗಿದ್ದರು. ಧನುಶ್ ಅಂಥಹಾ ನಟನ ಮುಂದೆ ಸಹ ಅದ್ಭುತವಾಗಿ ನಟಿಸಿ ಸೈ ಎನಿಸಿಕೊಂಡಿದ್ದರು. ಹಾಗಾಗಿ ಇದೇ ಜೋಡಿಯನ್ನು ಆನಂದ್ ಅವರು ತಮ್ಮ ಹೊಸ ಸಿನಿಮಾಕ್ಕೂ ಮುಂದುವರೆಸಿದ್ದಾರೆ.
ಇದನ್ನೂ ಓದಿ:ಒಟ್ಟಾಗಿ ಹೊಸ ಪ್ರಾಜೆಕ್ಟ್ ಘೋಷಣೆ ಮಾಡಿದ ಧನುಶ್ ಹಾಗೂ ಸ್ಪಂದನಾ
‘ರಾಂಝನಾ’, ‘ಅತರಂಗಿ ರೇ’, ‘ತೇರೆ ಇಷ್ಕ್ ಮೇ’ ಸಿನಿಮಾಗಳು ಧನುಶ್ ಮತ್ತು ಆನಂದ್ ಎಲ್ ರಾಯ್ ಅವರ ಕಾಂಬಿನೇಷನ್ನಲ್ಲಿ ಈ ವರೆಗೆ ಮೂಡಿ ಬಂದಿದ್ದು, ಈ ಮೂರು ಸಿನಿಮಾಗಳು ಅದ್ಭುತ ಪ್ರೇಮಕತೆಯನ್ನು ಒಳಗೊಂಡಿವೆ. ಇದೀಗ ಮೊದಲ ಬಾರಿಗೆ ಆನಂದ್ ಅವರು ಐತಿಹಾಸಿಕ ಹಿನ್ನೆಲೆಯುಳ್ಳ ಪ್ರೇಮಕತೆ ನಿರ್ದೇಶಿಸಲು ಕೈ ಹಾಕಿದ್ದಾರೆ. ಧನುಶ್ ಅವರೂ ಸಹ ಐತಿಹಾಸಿಕ ರೀತಿಯ ಪಾತ್ರಗಳಲ್ಲಿ ನಟಿಸಿರುವುದು ಕಡಿಮೆಯೇ. ಹಾಗಾಗಿ ಸಹಜವಾಗಿಯೇ ಈ ಸಿನಿಮಾದ ಬಗ್ಗೆ ಸಿನಿಮಾ ಪ್ರೇಮಿಗಳಿಗೆ ಕುತೂಹಲ ಇದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ