ಮದುವೆ ವಿಚಾರಕ್ಕೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯ: ಸಹೋದರರಿಂದಲೇ ಹಲ್ಲೆಗೊಳಗಾಗಿದ್ದ ವ್ಯಕ್ತಿ ಸಾವು

ಮದುವೆ ವಿಚಾರಕ್ಕೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯ: ಸಹೋದರರಿಂದಲೇ ಹಲ್ಲೆಗೊಳಗಾಗಿದ್ದ ವ್ಯಕ್ತಿ ಸಾವು

ಗದಗ, ಮಾರ್ಚ್​​ 15: ಮನೆ ಮಗಳ ಮದುವೆ ಅಂದ್ರೆ ದೊಡ್ಡಪ್ಪ-ಚಿಕ್ಕಪ್ಪಂದಿರ ಸಮೇತ ಕುಟುಂಬಸ್ಥರೆಲ್ಲ ಸಂಭ್ರಮಿಸ್ತಾರೆ. ಪ್ರತಿಯೊಂದು ಕೆಲಸವನ್ನು ಖುದ್ದಾಗಿ ತಾವೇ ನಿಂತು ನಿಭಾಯಿಸುತ್ತಾರೆ. ಮನೆ ಮಗಳು ಹೋದ ಮನೆಯಲ್ಲಿಯೂ ಚೆನ್ನಾಗಿರಬೇಕೆಂಬ ಕಾರಣಕ್ಕೆ ಯಾವ ತ್ಯಾಗಕ್ಕೂ ಸಿದ್ಧರಿರುತ್ತಾರೆ. ಆದರೆ ಗದಗದಲ್ಲಿ ಇವೆಲ್ಲದಕ್ಕೂ ತದ್ವಿರುದ್ಧ ಎಂಬ ಘಟನೆಯೊಂದು ನಡೆದಿದೆ. ಮಗಳ ಮದುವೆ ವಿಚಾರಕ್ಕೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ. ಸಹೋದರರಿಂದಲೇ ಮಾರಣಾಂತಿಕವಾಗಿ ಹಲ್ಲೆಗೊಳಗಾಗಿದ್ದ ವ್ಯಕ್ತಿ ಚಿಕಿತ್ಸೆ ಫಲಿಸದೆ ಪ್ರಾಣ ಬಿಟ್ಟಿದ್ದಾರೆ.

ಹೌದು, ಗಿರೀಶಪ್ಪ ಆಲೂರು(47) ಮೃತ ದುರ್ದೈವಿ. ಮಗಳ ಮದುವೆ ವಿಚಾರವಾಗಿ ಫೆ.27ರಂದು ಸಹೋದರರಿಂದಲೇ ಗಂಭೀರವಾಗಿ ಹಲ್ಲೆಗೊಳಗಾಗಿದ್ದ ಇವರು ಚಿಕಿತ್ಸೆ ಫಲಿಸದೆ ಗದಗದ ಜಿಮ್ಸ್​​ ಆಸ್ಪತ್ರೆಯಲ್ಲಿ ಮರಣ ಹೊಂದಿದ್ದಾರೆ. ಗಿರೀಶಪ್ಪ ಮತ್ತು ಲಕ್ಷ್ಮೀ ದಂಪತಿಯ ಮಗಳಾದ ಪವಿತ್ರಾಳನ್ನು ಇತ್ತೀಚೆಗಷ್ಟೇ ಸಂಬಂಧದಲ್ಲಿಯೇ ಹುಡುಗನ ನೋಡಿ ಮದುವೆ ಮಾಡಿಕೊಡಲಾಗಿತ್ತು. ಆದರೆ ಈ ಮದುವೆಗೆ ಗಿರೀಶಪ್ಪ ಸಹೋದರರು ವಿರೋಧ ವ್ಯಕ್ತಪಡಿಸಿದ್ದರು. ಆ ಬಳಿಕ ತಮ್ಮನ ಮನೆಯಲ್ಲಿದ್ದ ತಂದೆ ತಾಯಿ ಆಶೀರ್ವಾದ ಪಡೆದು ಬಾರಮ್ಮ ಎಂದು ಗಿರೀಶಪ್ಪ ಮಗಳನ್ನು ಕಳುಹಿಸಿದ್ದ. ಮದುವೆ ವಿಷಯವಾಗಿ ನಮ್ಮನ್ನ ಕೇಳದವರು ಈಗ ಯಾಕೆ ಬಂದಿದ್ದು ಎಂದು ಈ ವೇಳೆ ಸಹೋದರರಾದ ಈರಣ್ಣ ಮತ್ತು ಶಿವಕುಮಾರ್ ಗಲಾಟೆ ತೆಗೆದಿದ್ದರು ಎನ್ನಲಾಗಿದೆ.

ಇದನ್ನೂ ಓದಿ: ರೋಗಿಗಳ ರಕ್ಷಣೆಗೆ ಇರುವ ಆ್ಯಂಬುಲೆನ್ಸ್​ನಲ್ಲಿ ಜನರ ಸಾಗಾಟ! ಕುರಿಗಳಂತೆ ಜನ ತುಂಬಿ ಕರೆದೊಯ್ಯುತ್ತಿರುವ ವಿಡಿಯೋ ವೈರಲ್

ಗಲಾಟೆ ವಿಕೋಪಕ್ಕೆ ಹೋಗಿ ಆರೋಪಿಗಳು ಗಿರೀಶಪ್ಪ ಮತ್ತು ಅವರ ಪತ್ನಿ ಲಕ್ಷ್ಮೀ ಅವರ ಮೇಲೆ ಹಲ್ಲೆ ನಡೆಸಿದ್ದರು. ಗಿರೀಶಪ್ಪ ಮೇಲೆ ಬಾರುಕೋಲು, ದೊಣ್ಣೆಗಳಿಂದ ಮಾರಣಾಂತಿಕ ಹಲ್ಲೆ ನಡೆಸಲಾಗಿತ್ತು. ಹೊಡೆತ ಏಟಿಗೆ ತಲೆ, ಕೈ, ಎದೆ, ಹೊಟ್ಟೆ ಸೇರಿ ಮೈತುಂಬ ಬಾಸುಂಡೆ ಬಂದಿತ್ತು. ಶಿವಕುಮಾರ್ ಆಲೂರು, ರತ್ನವ್ವ ಆಲೂರು, ಈರಣ್ಣ ಆಲೂರು ಮತ್ತು ಗೀತಾ ಆಲೂರು ಹಲ್ಲೆ ನಡೆಸಿರುವ ಆರೋಪಿಗಳು ಎನ್ನಲಾಗಿದ್ದು, ಘಟನೆಯಲ್ಲಿ ಗಿರೀಶಪ್ಪ ಗಂಭೀರವಾಗಿ ಗಾಯಗೊಂಡಿದ್ದರು. ಸರ್ಕಾರಿ ಕೆಲಸ ಇರುವ ಹುಡುಗನಿಗೇ ಮಗಳನ್ನ ಕೊಟ್ಟು ಮದ್ವೆ ಮಾಡು‌ ಎಂದು ಶಿವಕುಮಾರ್ ತಿಳಿಸಿದ್ದರೂ, ಸರ್ಕಾರಿ ಕೆಲಸದ ಹುಡುಗನಾದ್ರೆ ನಮ್ಮನ್ನ ನೋಡಲು‌ಬರೋದಿಲ್ಲ ಎಂದು ಗಿರೀಶಪ್ಪ ವಾದಿಸಿದ್ದರು.  ಕೊನೆಗೆ ತನ್ನಾಸೆಯಂತೆ ಸಂಬಂಧಿಕರಲ್ಲೇ ಮಗಳನ್ನ ಕೊಟ್ಟು  ಮದುವೆ ಮಾಡಿದ್ದರು.  ಆದರೆ ಅಂತಿಮವಾಗಿ ಅಣ್ಣ ಮಾತು ಕೇಳಲಿಲ್ಲ ಎಂಬ ಸಹೋದರ ಸಿಟ್ಟಿಗೆ  ಗಿರೀಶಪ್ಪ ಅವರ ಪ್ರಾಣ ಪಕ್ಷಿಯೇ ಈಗ ಹಾರಿಹೋಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Leave a Reply

Your email address will not be published. Required fields are marked *