Headlines

ಮನಿ ಡಬ್ಲಿಂಗ್ ಹೆಸರಿನಲ್ಲಿ ನೂರಾರು ಕುಟುಂಬಳಿಗೆ ವಂಚನೆ: ಕೋಟ್ಯಂತರ ರೂ. ಸಹಿತ ಆರೋಪಿ ಪರಾರಿ – Kannada News | Ballari Money Doubling Scam: Hundreds of Families Cheated as Venkatesh Absconds with Crores in Chit Fund Fraud

ಬಳ್ಳಾರಿಯ ಬ್ರೂಸ್​ಪೇಟೆ ಪೊಲೀಸ್ ಠಾಣೆImage Credit source: tv9

ಬಳ್ಳಾರಿ, ಫೆಬ್ರವರಿ 21: ಭಾರೀ ಚೀಟಿ ವಂಚನೆ ಪ್ರಕರಣವೊಂದರಲ್ಲಿ ಬಳ್ಳಾರಿಯ (Ballari) ನೂರಾರು ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿರುವ ವಿಚಾರ ಬೆಳಕಿಗೆ ಬಂದಿದೆ. ಕಡಿಮೆ ಅವಧಿಯಲ್ಲಿ ಹೆಚ್ಚು ಲಾಭ ದೊರೆಯುತ್ತದೆ ಎಂದು ನಂಬಿಸಿ ಜನರಿಂದ ಕೋಟ್ಯಂತರ ರೂಪಾಯಿ ಸಂಗ್ರಹಿಸಿ ವ್ಯಕ್ತಿಯೊಬ್ಬ ಪರಾರಿಯಾಗಿರುವ ಆರೋಪ ಕೇಳಿಬಂದಿದೆ. ಬಳ್ಳಾರಿಯ ದೇವಿನಗರ ನಿವಾಸಿ ವೆಂಕಟೇಶ ಎಂಬಾತ ಚೀಟಿ ವ್ಯವಹಾರದ ಹೆಸರಿನಲ್ಲಿ ಸುಮಾರು 800ಕ್ಕೂ ಹೆಚ್ಚು ಜನರಿಂದ ಹಣ ಸಂಗ್ರಹಿಸಿದ್ದಾನೆ ಎನ್ನಲಾಗಿದೆ. ಒಬ್ಬರಿಂದ 10 ಸಾವಿರ ರೂಪಾಯಿಯಿಂದ ಹಿಡಿದು 1 ಕೋಟಿ ರೂಪಾಯಿ ವರೆಗೆ ಹಣ ಪಡೆದುಕೊಂಡಿರುವುದಾಗಿ ದೂರಿನಲ್ಲಿ ಉಲ್ಲೇಖವಾಗಿದೆ. ಆತ ಸಂಗ್ರಹಿಸಿದ ಒಟ್ಟು ಮೊತ್ತ ನೂರಾರು ಕೋಟಿಗಳಿಗೆ ತಲುಪಿರಬಹುದೆಂದು ಅಂದಾಜಿಸಲಾಗಿದೆ.

ಹಣ ಕಳೆದುಕೊಂಡವರಲ್ಲಿ ಟೀ ಅಂಗಡಿ ನಡೆಸುವವರು, ಬೀದಿ ವ್ಯಾಪಾರಿಗಳು, ತರಕಾರಿ ಮಾರಾಟಗಾರರು ಸೇರಿದಂತೆ ಬಡ ಹಾಗೂ ಮಧ್ಯಮ ವರ್ಗದ ಜನರು ಹೆಚ್ಚಿದ್ದಾರೆ. ಮಕ್ಕಳ ಶಿಕ್ಷಣ, ಮಗಳ ಮದುವೆ, ಮನೆ ನಿರ್ಮಾಣ, ಹೋಟೆಲ್ ಆರಂಭಿಸುವ ಕನಸು ಸೇರಿದಂತೆ ವಿವಿಧ ಉದ್ದೇಶಗಳಿಗೆ ವರ್ಷಗಳ ಕಾಲ ದುಡಿದು ಕೂಡಿಸಿದ ಹಣವನ್ನು ಚೀಟಿ ರೂಪದಲ್ಲಿ ಹೂಡಿಕೆ ಮಾಡಿದ್ದರು. ಕಟ್ಟಿದ ಹಣಕ್ಕೆ ಹೆಚ್ಚಿನ ಬಡ್ಡಿ ಸಿಗುತ್ತದೆ ಎಂಬ ಭರವಸೆಯ ಮಾತುಗಳಿಗೆ ಮೋಸಹೋಗಿದ್ದಾರೆ.

200ಕ್ಕೂ ಹೆಚ್ಚು ಜನರಿಂದ ಪೊಲೀಸ್ ದೂರು

ಕೋಟ್ಯಂತರ ರೂಪಾಯಿ ಸಂಗ್ರಹಿಸಿದ ಬಳಿಕ ವೆಂಕಟೇಶ ಕಳೆದ ತಿಂಗಳು ಪರಾರಿಯಾಗಿದ್ದಾನೆ ಎನ್ನಲಾಗಿದ್ದು, ಇದುವರೆಗೆ ಆತನ ಸುಳಿವು ಪತ್ತೆಯಾಗಿಲ್ಲ. ಬಳ್ಳಾರಿ ಬ್ರೂಸ್‌ಪೇಟೆ ಪೊಲೀಸ್ ಠಾಣೆಯಲ್ಲಿ 200ಕ್ಕೂ ಹೆಚ್ಚು ಜನರು ದೂರು ದಾಖಲಿಸಿದ್ದಾರೆ. ಆರೋಪಿಯನ್ನು ಶೀಘ್ರ ಬಂಧಿಸಿ ನಮ್ಮ ಹಣ ವಾಪಸ್ ಕೊಡಿಸುವಂತೆ ವಂಚನೆಗೊಳಗಾದವರು ಪೊಲೀಸರನ್ನು ಆಗ್ರಹಿಸುತ್ತಿದ್ದಾರೆ.

ಈ ಪ್ರಕರಣ ಸಂಬಂಧ ಸ್ಥಳೀಯ ಶಾಸಕ ಭರತ್ ರೆಡ್ಡಿ ಕೂಡ ಪೊಲೀಸರೊಂದಿಗೆ ಮಾತನಾಡಿ, ಆರೋಪಿಯನ್ನು ಪತ್ತೆಹಚ್ಚಿ ಅಮಾಯಕರ ಹಣ ಮರಳಿಸುವಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.

ಮನೆಯವರಿಂದಲೇ ಮಿಸ್ಸಿಂಗ್ ಕೇಸ್!

ವಿಪರ್ಯಾಸವೆಂದರೆ, ವೆಂಕಟೇಶ ಕಾಣೆಯಾಗಿದ್ದಾನೆ ಎಂದು ಆತನ ಕುಟುಂಬಸ್ಥರು ಮಿಸ್ಸಿಂಗ್ ದೂರು ದಾಖಲಿಸಿರುವ ಮಾಹಿತಿ ಕೂಡ ಲಭ್ಯವಾಗಿದೆ. ಇದರಿಂದ ಪ್ರಕರಣ ಮತ್ತಷ್ಟು ಕುತೂಹಲ ಕೆರಳಿಸಿದೆ.

ಇದನ್ನೂ ಓದಿ: ಉಂಡ ಮನೆಗೇ ಕನ್ನ ಹಾಕಿದ BSNL ಅಧಿಕಾರಿಗಳು: 70 ಲಕ್ಷ ಮೌಲ್ಯದ ಕಾಪರ್ ಕೇಬಲ್ ಕಳವು

ಒಟ್ಟಿನಲ್ಲಿ ಹೆಚ್ಚು ಲಾಭದ ಆಸೆಗೆ ಬಿದ್ದು ದುಡಿದ ಹಣವನ್ನು ಹೂಡಿಕೆ ಮಾಡಿದ ನೂರಾರು ಕುಟುಂಬಗಳು ಇದೀಗ ಬೀದಿಗೆ ಬಂದಂತಾಗಿದ್ದು, ಕಂಗಾಲಾಗಿವೆ. ವಂಚಕನನ್ನು ಶೀಘ್ರ ಪತ್ತೆಹಚ್ಚಿ ಜನರ ಹಣ ಮರಳಿಸುವಲ್ಲಿ ಪೊಲೀಸರು ಯಶಸ್ವಿಯಾಗುತ್ತಾರೆಯೇ ಎಂಬುದು ಕಾದು ನೋಡಬೇಕಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 8:06 am, Sat, 21 February 26

Source link

Leave a Reply

Your email address will not be published. Required fields are marked *