
ತೆಲುಗು ಚಿತ್ರರಂಗದಲ್ಲಿ ಹಳೆಯ ಬ್ಲಾಕ್ಬಸ್ಟರ್ ಸಿನಿಮಾಗಳನ್ನು ಮರು-ಬಿಡುಗಡೆ ಮಾಡುವ ಟ್ರೆಂಡ್ ಜೋರಾಗಿದೆ. ಸೂಪರ್ ಸ್ಟಾರ್ ಮಹೇಶ್ ಬಾಬು (Mahesh Babu) ಅವರ ಸಿನಿಮಾಗಳಿಗೆ ರೀ-ರಿಲೀಸ್ ಸಮಯದಲ್ಲಿ ಭಾರಿ ಬೇಡಿಕೆ ಇರುತ್ತದೆ. ಇದೇ ಕಾರಣಕ್ಕೆ ಮೇ ತಿಂಗಳಲ್ಲಿ ‘ಪೋಕಿರಿ’ (Pokiri) ಸಿನಿಮಾವನ್ನು ಮತ್ತೆ ಅದ್ದೂರಿಯಾಗಿ ಬಿಡುಗಡೆ ಮಾಡಲು ಸಿದ್ಧತೆ ನಡೆಸಲಾಗಿತ್ತು. ಆದರೆ, ಈಗ ಈ ಬಿಡುಗಡೆಗೆ ಅನಿರೀಕ್ಷಿತ ವಿಘ್ನ ಎದುರಾಗಿದೆ. ಅದಕ್ಕೆಲ್ಲ ಕಾರಣ ಆಗಿರುವುದು ನಿರ್ದೇಶಕ, ನಿರ್ಮಾಪಕ ಪುರಿ ಜಗನ್ನಾಥ್. ಮಹೇಶ್ ಬಾಬು ಸಿನಿಮಾ ಬಿಡುಗಡೆಗೂ ಪುರಿ ಜಗನ್ನಾಥ್ (Puri Jagannadh) ಅವರಿಗೂ ಏನು ಸಂಬಂಧ? ಇಲ್ಲಿದೆ ಉತ್ತರ..
‘ಪೋಕಿರಿ’ ಸಿನಿಮಾದ ಹಕ್ಕುಗಳು ನಿರ್ದೇಶಕ ಪುರಿ ಜಗನ್ನಾಥ್ ಅವರ ಬಳಿ ಇವೆ. ಮೂಲಗಳ ಪ್ರಕಾರ, ಈ ಚಿತ್ರದ ಓವರ್ಸೀಸ್ ಹಕ್ಕುಗಳನ್ನು ಅಮೆರಿಕದ ಸಂಸ್ಥೆಯೊಂದು ಭಾರಿ ಮೊತ್ತಕ್ಕೆ ಖರೀದಿಸಿತ್ತು. ಆದರೆ, ಪುರಿ ಜಗನ್ನಾಥ್ ನಿರ್ದೇಶನದ ‘ಲೈಗರ್’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಮಕಾಡೆ ಮಲಗಿದಾಗ ವಿತರಕರಿಗೆ ಭಾರಿ ನಷ್ಟವಾಗಿತ್ತು. ಆ ಸಮಯದಲ್ಲಿ ಬಾಕಿ ಉಳಿಸಿಕೊಂಡಿದ್ದ ಹಣವನ್ನು ಪುರಿ ಜಗನ್ನಾಥ್ ಇನ್ನೂ ಪೂರ್ಣವಾಗಿ ತೀರಿಸಿಲ್ಲ ಎನ್ನಲಾಗಿದೆ.
‘ಡಬಲ್ ಇಸ್ಮಾರ್ಟ್’ ಸಿನಿಮಾ ಬಿಡುಗಡೆಯ ಸಮಯದಲ್ಲಿ ಪುರಿ ಜಗನ್ನಾಥ್ ಸ್ವಲ್ಪ ಹಣವನ್ನು ಪಾವತಿಸಿ, ಉಳಿದ ಹಣವನ್ನು ನಂತರ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ ಆ ಭರವಸೆ ಈಡೇರದ ಕಾರಣ, ಸುನಿಲ್ ನಾರಂಗ್ ನೇತೃತ್ವದ ವಿತರಕರ ಸಂಘವು ಪುರಿ ಜಗನ್ನಾಥ್ ಅವರ ಯಾವುದೇ ಸಿನಿಮಾ ಅಥವಾ ಅವರ ಬಳಿ ಇರುವ ಹಕ್ಕುಗಳ ಸಿನಿಮಾಗಳನ್ನು ಬಿಡುಗಡೆ ಮಾಡಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ವಿತರಕರ ಈ ಕಠಿಣ ನಿರ್ಧಾರದಿಂದಾಗಿ ‘ಪೋಕಿರಿ’ ಸಿನಿಮಾದ ರೀ-ರಿಲೀಸ್ ಸದ್ಯಕ್ಕೆ ಸ್ಥಗಿತಗೊಂಡಿದೆ. ‘ಪೋಕಿರಿ’ ಬಿಡುಗಡೆ ಆಗಬೇಕಿದ್ದ ಜಾಗದಲ್ಲಿ ಈಗ ಮಹೇಶ್ ಬಾಬು ಅವರದ್ದೇ ಆದ ‘ಅತಿಥಿ’ ಸಿನಿಮಾವನ್ನು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಇತ್ತ ಹಣ ನೀಡಿ ಹಕ್ಕು ಖರೀದಿಸಿದ ಓವರ್ಸೀಸ್ ಸಂಸ್ಥೆಯು ಈ ಬಗ್ಗೆ ಚರ್ಚಿಸಲು ಚಾರ್ಮಿ ಕೌರ್ ಅವರಿಗೆ ಕರೆ ಮಾಡಿದರೆ, ಅವರು ಕರೆಗಳನ್ನು ಸ್ವೀಕರಿಸುತ್ತಿಲ್ಲ ಎಂಬ ಮಾಹಿತಿ ಹೊರಬಿದ್ದಿದೆ.
ಇದನ್ನೂ ಓದಿ: ಮಹೇಶ್ ಬಾಬು ಅಭಿಮಾನಿಗಳ ಬಳಿ ಕ್ಷಮೆ ಕೇಳಿದ ಪವನ್ ಕಲ್ಯಾಣ್ ಆಪ್ತ ನಿರ್ದೇಶಕ
ಈ ಹಣಕಾಸಿನ ವಿವಾದ ಹೀಗೆಯೇ ಮುಂದುವರಿದರೆ, ಪುರಿ ಜಗನ್ನಾಥ್ ನಿರ್ದೇಶನದ ಹಾಗೂ ವಿಜಯ್ ಸೇತುಪತಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ‘ಸ್ಲಮ್ಡಾಗ್’ ಚಿತ್ರದ ಬಿಡುಗಡೆಯೂ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ. ವಿತರಕರ ಬಾಕಿ ಹಣ ತೀರಿಸುವವರೆಗೂ ಅವರ ಮುಂದಿನ ಹಾದಿ ಸುಗಮವಾಗುವಂತೆ ಕಾಣುತ್ತಿಲ್ಲ. ಈ ವಿವಾದಕ್ಕೆ ಪುರಿ ಜಗನ್ನಾಥ್ ಅವರು ಪ್ರತಿಕ್ರಿಯೆ ನೀಡುವುದು ಬಾಕಿ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.