ಮಾರ್ಚ್ 9ಕ್ಕೆ ನಿರ್ಧಾರವಾಗಲಿದೆ ‘ಜನ ನಾಯಗನ್’ ಭವಿಷ್ಯ: ಆತಂಕದಲ್ಲಿ ಕೆವಿಎನ್

ಮಾರ್ಚ್ 9ಕ್ಕೆ ನಿರ್ಧಾರವಾಗಲಿದೆ ‘ಜನ ನಾಯಗನ್’ ಭವಿಷ್ಯ: ಆತಂಕದಲ್ಲಿ ಕೆವಿಎನ್

ಕೆವಿಎನ್ (KVN) ನಿರ್ಮಾಣ ಸಂಸ್ಥೆ ಇಕ್ಕಟ್ಟಿಗೆ ಸಿಲುಕಿದೆ. ಕೆವಿಎನ್ ನಿರ್ಮಾಣ ಮಾಡಿರುವ ಎರಡು ದೊಡ್ಡ ಸಿನಿಮಾಗಳು ಒಂದರ ಹಿಂದೊಂದರಂತೆ ಬಿಡುಗಡೆ ಮುಂದೂಡಲಾಗಿದೆ. ಕೆವಿಎನ್ ಮತ್ತು ಯಶ್ ಅವರ ಮಾನ್​​ಸ್ಟರ್ ಮೈಂಡ್ಸ್ ಒಟ್ಟಿಗೆ ನಿರ್ಮಾಣ ಮಾಡಿರುವ ‘ಟಾಕ್ಸಿಕ್’ ಸಿನಿಮಾ ಮಾರ್ಚ್ 19ರಿಂದ ಜೂನ್ 4ಕ್ಕೆ ಮುಂದೂಡಲ್ಪಟ್ಟಿದೆ. ಅದಕ್ಕೆ ಮುಂಚೆಯೇ ಕೆವಿಎನ್ ಅವರೇ ನಿರ್ಮಿಸಿರುವ ದಳಪತಿ ವಿಜಯ್ ನಟನೆಯ ‘ಜನ ನಾಯಗನ್’ ಸಿನಿಮಾ ರಾಜಕೀಯ ಕಾರಣಗಳಿಂದಾಗಿ ಬಿಡುಗಡೆ ಆಗದೆ ಡಬ್ಬದಲ್ಲೇ ಕುಳಿತಿದೆ. ಆದರೆ ಇದೀಗ ಮಾರ್ಚ್ 9ಕ್ಕೆ ‘ಜನ ನಾಯಗನ್’ ಸಿನಿಮಾದ ಭವಿಷ್ಯ ನಿರ್ಧಾರ ಆಗಲಿದೆ.

ಜನವರಿ 23ಕ್ಕೆ ಬಿಡುಗಡೆ ಆಗಬೇಕಿದ್ದ ‘ಜನ ನಾಯಗನ್’ ಸಿನಿಮಾಕ್ಕೆ ಸೆನ್ಸಾರ್ ಸಮಸ್ಯೆ ಎದುರಾಗಿತ್ತು. ಸಿನಿಮಾವನ್ನು ಸೆನ್ಸಾರ್​ ನವರು ರಿವಿಷನ್ ಕಮಿಟಿಗೆ ಕಳಿಸಲು ಮುಂದಾಗಿದ್ದರು. ಅದರ ವಿರುದ್ಧ ಕೆವಿಎನ್ ನ್ಯಾಯಾಲಯದ ಮೆಟ್ಟಿಲೇರಿತ್ತು. ಆದರೆ ಅಲ್ಲಿಯೂ ಸಹ ನ್ಯಾಯ ವಿಳಂಬ ಆದ ಕಾರಣಕ್ಕೆ ಸಿನಿಮಾವನ್ನು ಸೆನ್ಸಾರ್​​ನ ರಿವಿಷನ್ ಕಮಿಟಿಗೆ ಕಳಿಸಲು ಕೆವಿಎನ್ ಒಪ್ಪಿಕೊಂಡಿತ್ತು. ಅದರಂತೆ ಮಾರ್ಚ್ 09ರಂದು ರಿವಿಷನ್ ಕಮಿಟಿಯವರು ‘ಜನ ನಾಯಗನ್’ ಸಿನಿಮಾವನ್ನು ವೀಕ್ಷಿಸಲಿದ್ದು, ಸೆನ್ಸಾರ್ ಪ್ರಮಾಣ ಪತ್ರ ನೀಡಲಿದ್ದಾರೆ ಎನ್ನಲಾಗುತ್ತಿದೆ.

ಮಾರ್ಚ್ 09ರಂದು ಎರಡು ಗಂಟೆಗೆ ಸೆನ್ಸಾರ್​ ನಲ್ಲಿ ‘ಜನ ನಾಯಗನ್’ ಸಿನಿಮಾ ಪ್ರದರ್ಶನ ಆಗಲಿದ್ದು, ಸಿನಿಮಾ ನೋಡಿದ ಸೆನ್ಸಾರ್ ಸದಸ್ಯರು ಸಿನಿಮಾದ ಯಾವ ದೃಶ್ಯಗಳಿಗೆ ಕತ್ತರಿ ಹಾಕಿಸಲಿದ್ದಾರೆ. ಸಿನಿಮಾಕ್ಕೆ ಯಾವ ಪ್ರಮಾಣ ಪತ್ರ ನೀಡಲಿದ್ದಾರೆ ಎಂಬುದು ಸಹಜವಾಗಿಯೇ ಕುತೂಹಲ ಮೂಡಿಸಿದೆ. ಒಂದೊಮ್ಮೆ ಸೆನ್ಸಾರ್ ಪ್ರಮಾಣ ಪತ್ರ ದೊರೆತಲ್ಲಿ ಒಂದೆರಡು ವಾರಗಳಲ್ಲಿಯೇ ‘ಜನ ನಾಯಗನ್’ ಸಿನಿಮಾವನ್ನು ಬಿಡುಗಡೆ ಮಾಡಲಿದೆ ಕೆವಿಎನ್. ಆದರೆ ಸೆನ್ಸಾರ್​​ನವರು ಮಾರ್ಚ್ 09ರಂದು ಇನ್ನೇನು ಕಿರಿಕ್ ಮಾಡುತ್ತಾರೋ ಎಂಬ ಭಯವೂ ಕೆವಿಎನ್​​ ಗೆ ಇದೆ.

ಇದನ್ನೂ ಓದಿ:‘ಜನ ನಾಯಗನ್’ ಸಿನಿಮಾ ಬಿಡುಗಡೆಗೆ ಹೊಸ ದಿನಾಂಕ ಲಾಕ್?

‘ಜನ ನಾಯಗನ್’ ಸಿನಿಮಾವು ತೆಲುಗಿನ ‘ಭಗವಂತ್ ಕೇಸರಿ’ ಸಿನಿಮಾದ ರೀಮೇಕ್ ಆಗಿದೆ. ಆದರೆ ದಳಪತಿ ವಿಜಯ್ ಅವರು ತಮ್ಮ ರಾಜಕೀಯ ಪಕ್ಷದ ಅಜೆಂಡವನ್ನು ಸಹ ಈ ಸಿನಿಮಾನಲ್ಲಿ ಸೇರಿಸಿದ್ದಾರೆ. ವಿಪಕ್ಷಗಳನ್ನು ಟೀಕೆ ಮಾಡುವ ಸಂಭಾಷಣೆಗಳು, ತಮ್ಮ ಪಕ್ಷವನ್ನು ಕೊಂಡಾಡುವ ಸಂಭಾಷಣೆ, ದೃಶ್ಯಗಳು ‘ಜನ ನಾಯಗನ್’ ಸಿನಿಮಾದಲ್ಲಿರುವ ಕಾರಣ ಸಿನಿಮಾ ಬಿಡುಗಡೆ ಆಗದಂತೆ ಇತರೆ ರಾಜಕೀಯ ಪಕ್ಷಗಳು ಪ್ರಭಾವ ಬೀರಿವೆ ಎನ್ನಲಾಗುತ್ತಿದೆ.

‘ಜನ ನಾಯಗನ್’ ಸಿನಿಮಾವನ್ನು ಎಚ್ ವಿನೋದ್ ನಿರ್ದೇಶನ ಮಾಡಿದ್ದಾರೆ. ಸಿನಿಮಾನಲ್ಲಿ ಪೂಜಾ ಹೆಗ್ಡೆ ನಾಯಕಿ. ಮಲಯಾಳಂ ನಟಿ ಮಮಿತಾ ಬಿಜು ಸಹ ಸಿನಿಮಾನಲ್ಲಿದ್ದಾರೆ. ಸಿನಿಮಾಕ್ಕೆ ಅನಿರುದ್ಧ್ ರವಿಚಂದ್ರನ್ ಸಂಗೀತ ನೀಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *