
ಮಂಗಳೂರು, ಮಾರ್ಚ್ 22: ಮೂಡಬಿದ್ರೆ ಇನ್ಸ್ಪೆಕ್ಟರ್ ಸಂದೇಶ್ ಕಾಮಕಾಂಡ ಪ್ರಕರಣ ಸಂಬಂಧ ಬೆಳ್ತಂಗಡಿ ತಾಲೂಕಿನ ವೇಣೂರು ಠಾಣೆಯಲ್ಲಿ ಅತ್ಯಾಚಾರ ದೂರು ದಾಖಲಿಸಿದ್ದ ಸಂತ್ರಸ್ತ ಶಿಕ್ಷಕಿಗೆ ಜೀವ ಬೆದರಿಕೆ ಹಾಕಿರುವ ಆರೋಪ ಕೇಳಿಬಂದಿದೆ. ಪ್ರಕರಣ ಬಯಲಾಗುತ್ತಲೇ ಸಂತ್ರಸ್ತೆಗೆ ಮಾ.19ರಂದು ಸ್ಮಿತಾ ಮತ್ತು ಸುನೀತಾ ಲೋಬೋ ಎಂಬುವವರ ಮೂಲಕ ಇನ್ಸ್ಪೆಕ್ಟರ್ ಸಂದೇಶ್ ಬೆದರಿಕೆ ಹಾಕಿರೋದಾಗಿ ದೂರಲಾಗಿದೆ. ಇಬ್ಬರು ಮಹಿಳೆಯರನ್ನ ಸಂತ್ರಸ್ತೆ ಮನೆಗೆ ಕಳಿಸಿ ಇಲ್ಲಿಯವರೆಗೂ ನಡೆದ ವಿಚಾರಗಳ ಬಗ್ಗೆ ಬಾಯಿ ಬಿಡಬಾರದು. ಬಾಯಿ ಬಿಟ್ಟರೆ ಕೇಸ್ ದಾಖಲಿಸುವುದಾಗಿ ಬೆದರಿಕೆ ಹಾಕಲಾಗಿದೆ. ಜೀವಂತವಾಗಿ ಬಿಡುವುದಿಲ್ಲ ಎಂದೂ ತಿಳಿಸಿರೋದಾಗಿ ಆರೋಪಿಸಲಾಗಿದೆ.
ಬೆಳ್ತಂಗಡಿ ತಾಲೂಕಿನ ವೇಣೂರು ಠಾಣೆಯಲ್ಲಿ ಸಂದೇಶ್ ವಿರುದ್ಧ ಸಂತ್ರಸ್ತೆ ಶಿಕ್ಷಕಿ ನೀಡಿದ ದೂರಿನ ಮೇರೆಗೆ ಅತ್ಯಾಚಾರ ಆರೋಪದಡಿ ಎಫ್ಐಆರ್ ದಾಖಲಾಗಿದ್ದು, 2018 ರಿಂದ 2023ರವರೆಗೆ ಶಿಕ್ಷಕಿ ಮನೆಗೆ ಹೋಗಿ ಬೆದರಿಸಿ ಅತ್ಯಾಚಾರ ಮಾಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ. 2020ರಲ್ಲಿ ಸಂದೇಶ್ ಬೆಳ್ತಂಗಡಿ ಸರ್ಕಲ್ ವ್ಯಾಪ್ತಿಯಲ್ಲಿರುವ ವೇಣೂರು ಪೊಲೀಸ್ ಠಾಣೆ ಸರ್ಕಲ್ ಇನ್ಸ್ಪೆಕ್ಟರ್ ಆಗಿದ್ದರು. ಹೀಗಾಗಿ ವೇಣೂರು ಠಾಣಾ ವ್ಯಾಪ್ತಿಯಲ್ಲೇ ಅತ್ಯಾಚಾರ ಆರೋಪದಡಿ ಸೆಕ್ಷನ್ 376(2)(a)(1), 376(2)(n), 384, 506ರಡಿ ಕೇಸ್ ದಾಖಲಾಗಿದೆ.
ಇದನ್ನೂ ಓದಿ: ಮೂಡಬಿದ್ರೆ ಇನ್ಸ್ಪೆಕ್ಟರ್ ಸಂದೇಶ್ಗೆ ಬಿಗ್ ಶಾಕ್; ಅತ್ಯಾಚಾರ ಪ್ರಕರಣ ದಾಖಲು
ಮತ್ತೊಂದೆಡೆ ಬಗೆದಷ್ಟೂ ಸಂದೇಶ್ ಕಾಮಕಾಂಡ ಬಯಲಾಗುತ್ತಿದ್ದು, ಉಂಡು ಹೋದ ಕೊಂಡು ಹೋದ ಎಂಬ ಮಾತಿಗೆ ಪ್ರಕರಣ ಹೇಳಿ ಮಾಡಿಸಿದಂತೆ ಭಾಸವಾಗುತ್ತಿದೆ. ಅತ್ಯಾಚಾರ ಸಂತ್ರಸ್ತೆ ಶಿಕ್ಷಕಿ ಬಳಿ ಇನ್ಸ್ಪೆಕ್ಟರ್ 16 ಲಕ್ಷ ರೂಪಾಯಿ ಹಣವನ್ನೂ ಲಪಟಾಯಿಸಿದ್ದ ಎನ್ನಲಾಗಿದ್ದು, 13 ಲಕ್ಷ ನಗದು ಮತ್ತು 3,62,000 ರೂಪಾಯಿ ಹಣವನ್ನು ಬ್ಯಾಂಕಿಗೆ ವರ್ಗಾವಣೆ ಮಾಡಲಾಗಿತ್ತು. ಈ ಬಗ್ಗೆ ವೇಣೂರು ಠಾಣೆಗೆ ಸಂತ್ರಸ್ತೆ ದಾಖಲೆಗಳನ್ನೂ ನೀಡಿದ್ದಾಳೆ ಎನ್ನಲಾಗಿದೆ. ಸಂದೇಶ್ ವಿರುದ್ಧ ಇಬ್ಬರು ಮಹಿಳೆಯರು ಮಾಡಿದ್ದ ಲೈಂಗಿಕ ಕಿರುಕುಳ ಆರೋಪ ಸುಳ್ಳು ಎಂದು ಪೊಲೀಸ್ ವರದಿ ಹೇಳಿದ್ದರೂ ಈಗ ಕೇಳಿಬಂದಿರುವ ಆರೋಪಗಳು ಪ್ರಕರಣದ ಗಂಭೀರತೆಯನ್ನು ಹೆಚ್ಚಿಸಿವೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.