
ಬೆಂಗಳೂರು, ಮಾರ್ಚ್ 16: ಬೆಂಗಳೂರು ಕರಗ (Bengaluru Karaga) ಶಕ್ತ್ಯೋತ್ಸವಕ್ಕೆ ಕೇವಲ ಒಂಬತ್ತು ದಿನಗಳು ಮಾತ್ರ ಬಾಕಿಯಿದ್ದು, ಉತ್ಸವವನ್ನು ಈ ಬಾರಿ ವಿಶೇಷವಾಗಿ ಆಚರಿಸಲು ಸಕಲ ಸಿದ್ಧತೆಗಳು ಆರಂಭವಾಗಿವೆ. ಐತಿಹಾಸಿಕ ಧರ್ಮರಾಯಸ್ವಾಮಿ ದೇವಾಲಯದಲ್ಲಿ ನಡೆಯುವ ಕರಗ ಶಕ್ತ್ಯೋತ್ಸವ ಈ ಬಾರಿ ಮೈಸೂರು ದಸರಾ ಶೈಲಿಯಲ್ಲೇ ಅದ್ಧೂರಿಯಾಗಿ ನಡೆಯುವ ಸಾಧ್ಯತೆ ಇದೆ. ವಿಶೇಷವಾಗಿ ನಗರದ ಪ್ರಮುಖ ರಸ್ತೆಗಳನ್ನು ಮೈಸೂರು ದಸರಾ ಮಾದರಿಯಲ್ಲಿ ಲೈಟಿಂಗ್ ಮೂಲಕ ಅಲಂಕರಿಸಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಮುಂದಾಗಿದೆ.
ಲಕ್ಷಾಂತರ ರೂ. ವೆಚ್ಚದಲ್ಲಿ ಲೈಟಿಂಗ್!
ಕರಗ ಸಂಭ್ರಮಾಚರಣೆಯ ಹಿನ್ನೆಲೆಯಲ್ಲಿ ಒಟ್ಟು 39 ಲಕ್ಷ ರೂಪಾಯಿ ವೆಚ್ಚದಲ್ಲಿ ಲೈಟಿಂಗ್ ಅಳವಡಿಸಲು ಟೆಂಡರ್ ಆಹ್ವಾನಿಸಲಾಗಿದೆ. ಮೊದಲ ಹಂತದಲ್ಲಿ 10.14 ಲಕ್ಷ ರೂಪಾಯಿ ವೆಚ್ಚದಲ್ಲಿ ಧರ್ಮರಾಯಸ್ವಾಮಿ ದೇವಾಲಯ, ಸಂಪಂಗಿ ಕೆರೆ ಹಾಗೂ ಕರಗ ಸಾಗುವ ಪ್ರಮುಖ ಮಾರ್ಗಗಳಲ್ಲಿ ಲೈಟಿಂಗ್ ವ್ಯವಸ್ಥೆ ಮಾಡಲಾಗುತ್ತದೆ. ಎರಡನೇ ಹಂತದಲ್ಲಿ 28.92 ಲಕ್ಷ ರೂಪಾಯಿ ವೆಚ್ಚದಲ್ಲಿ ಜಿಬಿಎ ಪ್ರಧಾನ ಕಚೇರಿ, ಪ್ರಮುಖ ವೃತ್ತಗಳು ಹಾಗೂ ಕೆಲವು ಆಯ್ದ ಪ್ರಮುಖ ರಸ್ತೆಗಳನ್ನು ಬೆಳಗಿಸಲು ಯೋಜಿಸಲಾಗಿದೆ.
ಏಪ್ರಿಲ್ 1ಕ್ಕೆ ಕರಗ ಶಕ್ತ್ಯೋತ್ಸವ
ಮಾರ್ಚ್ 24ರಂದು ಧರ್ಮರಾಯಸ್ವಾಮಿ ದೇವಾಲಯದಲ್ಲಿ ಧ್ವಜಾರೋಹಣ ಮಾಡುವ ಮೂಲಕ ಕರಗ ಉತ್ಸವಕ್ಕೆ ಅಧಿಕೃತ ಚಾಲನೆ ಸಿಗಲಿದೆ. ಮಾರ್ಚ್ 30ರಂದು ಹಸಿ ಕರಗ ನಡೆಯಲಿದ್ದು, ಏಪ್ರಿಲ್ 1ರಂದು ಮುಖ್ಯ ಕರಗ ಶಕ್ತ್ಯೋತ್ಸವ ನಡೆಯಲಿದೆ. ಇದರ ಜೊತೆಗೆ ಭಕ್ತರಿಗೆ ಮನರಂಜನೆ ಕಾರ್ಯಕ್ರಮಗಳನ್ನೂ ಆಯೋಜಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ.
ಇದನ್ನೂ ಓದಿ ಬನ್ನೇರುಘಟ್ಟ ಝೂಗೆ ಹೊಸ ಅತಿಥಿಗಳ ಆಗಮನ: ಇಲ್ಲಿದೆ ವಿಡಿಯೋ
ಕಳೆದ ವರ್ಷ ಸುಮಾರು 40 ಲಕ್ಷ ರೂಪಾಯಿಯಲ್ಲಿ ಕರಗ ಉತ್ಸವ ನಡೆಸಲಾಗಿತ್ತು. ಆದರೆ ಈ ಬಾರಿ ಕೇವಲ ಲೈಟಿಂಗ್ಗಾಗಿಯೇ 39 ಲಕ್ಷ ರೂಪಾಯಿ ವೆಚ್ಚ ಮಾಡಲಾಗುತ್ತಿರುವುದು, ಈ ಬಾರಿ ಕರಗ ಉತ್ಸವ ಮೈಸೂರು ದಸರಾ ಶೈಲಿಯಲ್ಲಿ ಭರ್ಜರಿಯಾಗಿ ನಡೆಯಲಿದೆ ಎಂಬ ನಿರೀಕ್ಷೆಯನ್ನು ಹೆಚ್ಚಿಸಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.