
ಬೆಂಗಳೂರು, ಮಾರ್ಚ್ 10: ಸರ್ಕಾರಿ ಸ್ವಾಮ್ಯದ ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ (KSIC) ತಯಾರಿಸುವ ಪ್ರಸಿದ್ಧ ಮೈಸೂರು ಸಿಲ್ಕ್ ಸೀರೆಗಳಿಗೆ (Mysore Silk Sarees) ಇತ್ತೀಚಿನ ದಿನಗಳಲ್ಲಿ ಭಾರೀ ಬೇಡಿಕೆ ವ್ಯಕ್ತವಾಗುತ್ತಿದೆ. ಇದರಿಂದಾಗಿ ಪೂರೈಕೆಯೇ ಸವಾಲಾಗಿ ಪರಿಣಮಿಸಿದ್ದು, ಸೀರೆಗಳ ಆನ್ಲೈನ್ ಮಾರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ನಿಗಮ ಚಿಂತನೆ ನಡೆಸಿದೆ. ಕೆಎಸ್ಐಸಿ ಸೀರೆ ಮಳಿಗೆಗಳ ಹೊರಗೆ ಜನರು ಉದ್ದನೆಯ ಸಾಲಿನಲ್ಲಿ ನಿಂತಿದ್ದ ದೃಶ್ಯಗಳು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು.
ಈ ಕುರಿತು ರೇಷ್ಮೆ ಸಚಿವ ಕೆ. ವೆಂಕಟೇಶ್ ವಿಧಾನಸಭೆಯಲ್ಲಿ ಮಾಹಿತಿ ನೀಡಿದ್ದು, ಕೆಎಸ್ಐಸಿ ಪ್ರತಿದಿನ ಸರಾಸರಿ 350 ರಿಂದ 400 ಸೀರೆಗಳನ್ನು ತಯಾರಿಸುತ್ತಿದೆ ಎಂದು ತಿಳಿಸಿದ್ದಾರೆ. ಆನ್ಲೈನ್ ಮಾರಾಟ ಆರಂಭವಾದ ನಂತರ ದೇಶದ ವಿವಿಧ ಭಾಗಗಳ ಗ್ರಾಹಕರು ಸುಲಭವಾಗಿ ಮೈಸೂರು ಸಿಲ್ಕ್ ಸೀರೆಗಳನ್ನು ಖರೀದಿಸುವುದು ಸಾಧ್ಯವಾಯಿತು. ಆದರೆ ಈಗ ರಾಜ್ಯದ ಜನರು, ವಿಶೇಷವಾಗಿ ಸ್ಥಳೀಯ ಗ್ರಾಹಕರು, ಹೆಚ್ಚಿನ ಸಂಖ್ಯೆಯಲ್ಲಿ ಅಂಗಡಿಗಳಿಗೆ ಭೇಟಿ ನೀಡುತ್ತಿರುವುದರಿಂದ ಪೂರೈಕೆಯನ್ನು ಸಮರ್ಪಕವಾಗಿ ನಿರ್ವಹಿಸುವುದು ಸವಾಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಈ ಕಾರಣದಿಂದಾಗಿ, ಕೆಲವು ಸಮಯದವರೆಗೆ ಆನ್ಲೈನ್ ಆರ್ಡರ್ಗಳನ್ನು ಸ್ಥಗಿತಗೊಳಿಸುವುದು ಅಥವಾ ಮಿತಿಗೊಳಿಸಲು ಚಿಂತನೆ ನಡೆಸಲಾಗುತ್ತಿದೆ. ನೇರವಾಗಿ ಮಳಿಗೆಗಳಿಗೆ ಬರುವ ಗ್ರಾಹಕರಿಗೆ ಆದ್ಯತೆ ನೀಡುವುದಕ್ಕಾಗಿ ಈ ಕ್ರಮದ ಬಗ್ಗೆ ಕೆಎಸ್ಐಸಿ ಚಿಂತನೆ ನಡೆಸುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ.
ರೇಷ್ಮೆ ಸೀರೆಗಳಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು!
ಕಳೆದ ಮೂರು ಹಣಕಾಸು ವರ್ಷಗಳಲ್ಲಿ ಕೆಎಸ್ಐಸಿ ಉತ್ತಮ ವ್ಯವಹಾರ ಸಾಧನೆ ಮಾಡಿದೆ. ಈ ಅವಧಿಯಲ್ಲಿ 3.1 ಲಕ್ಷಕ್ಕೂ ಹೆಚ್ಚು ಸೀರೆಗಳನ್ನು ತಯಾರಿಸಿದ್ದು, ಅವುಗಳಲ್ಲಿ ಸುಮಾರು 3.09 ಲಕ್ಷ ಸೀರೆಗಳನ್ನು ಮಾರಾಟ ಮಾಡಲಾಗಿದೆ.
ರೇಷ್ಮೆ ಸೀರೆ ಉತ್ಪಾದನೆ ಹೆಚ್ಚಳಕ್ಕೆ ಕ್ರಮ
ರೇಷ್ಮೆ ಸೀರೆ ಉತ್ಪಾದನೆ ಹೆಚ್ಚಿಸಲು ಕೆಎಸ್ಐಸಿ ಈಗಾಗಲೇ 30 ಹೊಸ ಎಲೆಕ್ಟ್ರಾನಿಕ್ ಜಾಕ್ವಾರ್ಡ್ ಲೂಮ್ಗಳನ್ನು ಸೇರಿಸಿದ್ದು, ಇದರಿಂದ ಸೀರೆಗಳ ಉತ್ಪಾದನೆ ಸ್ವಲ್ಪ ಮಟ್ಟಿಗೆ ಹೆಚ್ಚುವ ನಿರೀಕ್ಷೆಯಿದೆ.
ಮೈಸೂರು ರೇಷ್ಮೆ ಸೀರೆಗಳನ್ನು ಖರೀದಿಸಲು ಗ್ರಾಹಕರು ಮುಂಜಾನೆಯೇ ಕೆಎಸ್ಐಸಿ ಅಂಗಡಿಗಳ ಮುಂದೆ ಸರದಿ ಸಾಲಿನಲ್ಲಿ ನಿಲ್ಲುತ್ತಿರುವ ಬಗ್ಗೆ ಇತ್ತೀಚೆಗೆ ವರದಿಯಾಗಿತ್ತು. ಅದಕ್ಕೆ ಸಂಬಂಧಿಸಿದ ವಿಡಿಯೋಗಳೂ ವೈರಲ್ ಆಗಿದ್ದವು.
ಒಟ್ಟಾರೆಯಾಗಿ, ಮೈಸೂರು ಸಿಲ್ಕ್ ಸೀರೆಗಳಿಗೆ ಹೆಚ್ಚುತ್ತಿರುವ ಬೇಡಿಕೆಯ ನಡುವೆಯೇ ಪೂರೈಕೆಯನ್ನು ಸಮತೋಲನಗೊಳಿಸಲು ಕೆಎಸ್ಐಸಿ ಹೊಸ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ.