‘ಟಾಕ್ಸಿಕ್’ ಸಿನಿಮಾ ರಿಲೀಸ್ಗೆ ಇನ್ನು ಒಂದು ತಿಂಗಳು ಕೂಡ ಬಾಕಿ ಉಳಿದಿಲ್ಲ. ಈ ಚಿತ್ರದ ಪ್ರಚಾರ ಕಾರ್ಯ ಇನ್ನೂ ಆರಂಭ ಆಗಿಲ್ಲ ಎಂಬ ಬೇಸರ ಯಶ್ ಅಭಿಮಾನಿಗಳಿಗೆ ಇದೆ. ಈ ಮಧ್ಯೆ ಸಿನಿಮಾದ ಕಥೆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿ ಒಂದಿ ಹರಿದಾಡುತ್ತಿದೆ. ಸಿನಿಮಾದ ಥೀಮ್ ಯಾವ ರೀತಿ ಇರಬಹುದು ಎಂಬ ಕುತೂಹಲಕ್ಕೆ ತೆರೆ ಬಿದ್ದಂತೆ ಆಗಿದೆ.
‘ಟಾಕ್ಸಿಕ್’ ಸಿನಿಮಾದ ಕಥೆಯ ಬಗ್ಗೆ ಫಾರ್ ಫಿಲ್ಮ್ಸ್ ಕೋ ಎಲ್ಎಲ್ಎಲ್ಸಿ ಎಂಬುವವರು ಮಾಹಿತಿ ಹಂಚಿಕೊಂಡಿದ್ದಾರೆ. ‘ಟಾಕ್ಸಿಕ್’ ಸಿನಿಮಾ 1940-70ರ ಅವಧಿಯಲ್ಲಿ ಗೋವಾದಲ್ಲಿ ನಡೆಯುವ ಕಥೆಯಂತೆ. ಕ್ರೈಮ್ ಲೋಕವನ್ನು ಹಿಂಸೆ, ಭಯ ಮೊದಲಾದ ವಿಷಯಗಳ ಮೂಲಕ ಕಟ್ಟುವ ಕಥೆಯನ್ನು ಈ ಸಿನಿಮಾ ಹೊಂದಿದೆ ಎಂದು ಹೇಳಲಾಗುತ್ತಾ ಇದೆ.
ಸಾಮಾನ್ಯವಾಗಿ ದೊಡ್ಡ ದೊಡ್ಡ ಸಿನಿಮಾಗಳು ರಿಲೀಸ್ ಆಗುತ್ತವೆ ಎಂದರೆ ಒಂದಷ್ಟು ಥಿಯರಿಗಳು ಹುಟ್ಟಿಕೊಳ್ಳೋದು ಸಾಮಾನ್ಯ. ಈಗ ‘ಟಾಕ್ಸಿಕ್’ ವಿಷಯದಲ್ಲೂ ಹೀಗೆಯೇ ಆಗಿರಬಹುದು ಎಂಬುದು ಕೆಲವರ ಊಹೆ. ‘ಟಾಕ್ಸಿಕ್’ ಟ್ರೇಲರ್ ರಿಲೀಸ್ ಆದ ಬಳಿಕವೇ ಈ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ. ಮಾರ್ಚ್ ಮೊದಲ ವಾರದಲ್ಲಿ ಟಾಕ್ಸಿಕ್ ಟ್ರೇಲರ್ ಬರಲಿದೆ.
ಮಾರ್ಚ್ 19ರಂದು ‘ಟಾಕ್ಸಿಕ್’ ಸಿನಿಮಾ ರಿಲೀಸ್ ಆಗುತ್ತಿದೆ. ಈ ಚಿತ್ರದ ಎದುರು ‘ಧುರಂಧರ್ 2’ ಸಿನಿಮಾ ರಿಲೀಸ್ ಆಗುತ್ತಿದೆ. ಯಶ್ ಎದುರು ರಿಲೀಸ್ ಆಗಿ ಗೆಲುವು ಸಾಧಿಸಿದವರೇ ಇಲ್ಲ ಎಂದರೂ ತಪ್ಪಾಗಲಾರದು. ಶಾರುಖ್ ಖಾನ್ (ಝೀರೋ), ದಳಪತಿ ವಿಜಯ್ (ಬೀಸ್ಟ್) ಈ ಮೊದಲು ಯಶ್ ಸಿನಿಮಾ ಎದುರು ಬಂದು ಮಂಡಿ ಊರಿದ್ದಾರೆ. ಇದೇ ಪರಿಸ್ಥಿತಿ ‘ಧುರಂಧರ್ 2’ ಚಿತ್ರಕ್ಕೂ ಬರಲಿದೆ ಎಂಬ ಮಾತು ಕೇಳಿ ಬಂದಿವೆ.
‘ಟಾಕ್ಸಿಕ್’ ಸಿನಿಮಾನ ಮಲಯಾಳಂ ಗೀತು ಮೋಹನ್ದಾಸ್ ನಿರ್ದೇಶನ ಮಾಡುತ್ತಿದ್ದಾರೆ. ಕಿಯಾರಾ ಅಡ್ವಾಣಿ,ರುಕ್ಮಿಣಿ ವಸಂತ್, ಹುಮಾ ಖುರೇಶಿ, ನಯನತಾರಾ, ತಾರಾ ಸುತಾರಿಯಾ ಮೊದಲಾದವರು ನಟಿಸಿದ್ದಾರೆ.