
ದಾವಣಗೆರೆ: ಜಿಲ್ಲೆಯ ಆನಗೋಡು ಗ್ರಾಮದ ಬಳಿ ರಂಜಾನ್ ಪ್ರಾರ್ಥನೆ ಸಲ್ಲಿಸುತ್ತಿದ್ದ ಜನರ ಮೇಲೆ ಹೆಜ್ಜೇನುಗಳು ಏಕಾಏಕಿ ದಾಳಿ ನಡೆಸಿದ್ದು, ಸುಮಾರು 25ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಈ ಪೈಕಿ ಐವರ ಸ್ಥಿತಿ ಗಂಭೀರವಾಗಿದ್ದು, ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆನಗೋಡು ಗ್ರಾಮದ ಬಳಿ ಜನರು ರಂಜಾನ್ ನಮಾಜ್ ಮಾಡುತ್ತಿದ್ದ ಸಂದರ್ಭದಲ್ಲಿ, ಕೆಲವು ಯುವಕರು ಅಲ್ಲಿದ್ದ ಹೆಜ್ಜೇನು ಗೂಡಿಗೆ ಕಲ್ಲೆಸೆದಿದ್ದಾರೆ ಎನ್ನಲಾಗಿದೆ. ಇದರಿಂದ ಕೆರಳಿದ ಹೆಜ್ಜೇನುಗಳ ಗುಂಪು ಪ್ರಾರ್ಥನೆಯಲ್ಲಿದ್ದ ಜನರ ಮೇಲೆ ಏಕಾಏಕಿ ಎರಗಿದೆ. ಹೆಜ್ಜೇನು ದಾಳಿ ಮಾಡುತ್ತಿದ್ದಂತೆ ಮಕ್ಕಳು, ಮಹಿಳೆಯರು ಸೇರಿದಂತೆ ಅಲ್ಲಿದ್ದ ನೂರಾರು ಜನರು ಜೀವ ಉಳಿಸಿಕೊಳ್ಳಲು ದಿಕ್ಕಾಪಾಲಾಗಿ ಓಡಿದ್ದಾರೆ. ಈ ಗದ್ದಲದಲ್ಲಿ ಸುಮಾರು 25 ಜನರು ಹೆಜ್ಜೇನು ಕಡಿತಕ್ಕೆ ಒಳಗಾಗಿದ್ದಾರೆ. ತೀವ್ರವಾಗಿ ಅಸ್ವಸ್ಥಗೊಂಡವರನ್ನು ತಕ್ಷಣವೇ ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಐವರ ಸ್ಥಿತಿ ಚಿಂತಾಜನಕವಾಗಿದ್ದು, ಅವರನ್ನು ಐಸಿಯು ವಿಭಾಗದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯ ವಿಷಯ ತಿಳಿಯುತ್ತಿದ್ದಂತೆ ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಅವರು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ. ಅಲ್ಲದೆ, ಸಂತ್ರಸ್ತರಿಗೆ ವೈಯಕ್ತಿಕವಾಗಿ ಚಿಕಿತ್ಸಾ ವೆಚ್ಚಕ್ಕೆ ಧನಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ