ದೀರ್ಘ ಕಾಲದಿಂದ ಪರಸ್ಪರ ಪ್ರೀತಿಸುತ್ತಿದ್ದ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ವಿವಾಹವಾಗಿದ್ದಾರೆ. ದಕ್ಷಿಣ ಭಾರತದ ಈ ಸಿನಿಮಾ ತಾರೆಯರು ಉದಯಪುರದಲ್ಲಿ ಮದುವೆಯಾಗಿದ್ದಾರೆ. ಉದಯಪುರದ ಐಷಾರಾಮಿ ಹೋಟೆಲ್ ರೆಸಾರ್ಟ್ನಲ್ಲಿ ಅವರು ಸಪ್ತಪದಿ ತುಳಿದಿದ್ದಾರೆ. ಆ ರೆಸಾರ್ಟ್ ಹೇಗಿದೆ ಎಂಬ ನೋಟ ಇಲ್ಲಿದೆ.
ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಸಿನಿ ಜಗತ್ತಿನಲ್ಲಿ ಒಟ್ಟಿಗೆ ಕೆಲಸ ಮಾಡುವಾಗ ಹತ್ತಿರವಾಗಿ ನಂತರ ಪ್ರೀತಿಸಲಾರಂಭಿಸಿದ್ದರು. ಅವರು ಇಲ್ಲಿಯವರೆಗೆ ‘ಡಿಯರ್ ಕಾಮ್ರೇಡ್’ ಮತ್ತು ‘ಗೀತ ಗೋವಿಂದಂ’ ಚಿತ್ರದಲ್ಲಿ ತೆರೆಯ ಮೇಲೆ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.
ಅವರ ಮೊದಲ ಚಿತ್ರ ‘ಗೀತ ಗೋವಿಂದಂ’. ಈ ಚಿತ್ರದ ಸೆಟ್ನಲ್ಲೇ ಅವರ ಮಧ್ಯೆ ಪ್ರೀತಿ ಮೂಡಿತ್ತು ಎನ್ನಲಾಗಿದೆ. ಈಗ ಅವರು ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದಕ್ಕೆ ಅವರು ಆಯ್ದುಕೊಂಡಿದ್ದು ಉದಯಪುರ ನಗರದ ಹೊರವಲಯದಲ್ಲಿರುವ ಐಟಿಸಿ ರೆಸಾರ್ಟ್.
ಉದಯಪುರ ನಗರದ ಹೊರವಲಯದಲ್ಲಿರುವ ಈ ರೆಸಾರ್ಟ್ ಶಾಂತಿಯುತ ಮತ್ತು ಪ್ರಶಾಂತ ವಾತಾವರಣವನ್ನು ಹೊಂದಿದೆ. ತಾರಾ ಜೋಡಿಯ ವಿವಾಹ ಸಮಾರಂಭಕ್ಕಾಗಿ ರೆಸಾರ್ಟ್ನ ಪ್ರತಿಯೊಂದು ಮೂಲೆಯನ್ನೂ ಸುಂದರವಾಗಿ ವಿನ್ಯಾಸಗೊಳಿಸಲಾಗಿದ್ದು, ಐಷಾರಾಮಿ ಮತ್ತು ಶ್ರೇಷ್ಠ ಅನುಭವವನ್ನು ನೀಡುವಂತೆ ರೂಪಿಸಲಾಗಿದೆ.
ಈ ರೆಸಾರ್ಟ್ ಅರಾವಳಿ ಶ್ರೇಣಿಯಲ್ಲಿ ಬೆಟ್ಟದ ತುದಿಯಲ್ಲಿ ನೆಲೆಗೊಂಡಿದೆ. ನಗರ ಜೀವನದ ಜಂಜಾಟದಿಂದ ದೂರದಲ್ಲಿ, ಪ್ರಕೃತಿಯ ಮಡಿಲಲ್ಲಿ ಇದ್ದು ಆಕರ್ಷಣೀಯವಾಗಿದೆ. ಬೆಟ್ಟಗಳು ಮತ್ತು ಹಚ್ಚ ಹಸಿರಿನಿಂದ ಸುತ್ತುವರಿದಿದ್ದು ಮನಮೋಹಕವಾಗಿದೆ.
ಒಳಾಂಗಣ ಡಿನ್ನರ್ ಹಾಲ್, ತೆರೆದ ಹುಲ್ಲುಹಾಸು ಮತ್ತು ಹೊರಾಂಗಣ ಕಾರ್ಯಕ್ರಮಗಳ ಸ್ಥಳವನ್ನು ಸಹ ಆಕರ್ಷಕವಾಗಿ ಸಿಂಗರಿಸಲಾಗಿದೆ. ಗ್ರಾಹಕರು ತಮ್ಮ ಅಗತ್ಯತೆಗಳು ಮತ್ತು ವೇಳಾಪಟ್ಟಿಯ ಆಧಾರದ ಮೇಲೆ ಈ ಸ್ಥಳಗಳನ್ನು ಬಳಸಬಹುದು. ವರದಿಗಳ ಪ್ರಕಾರ, ರೆಸಾರ್ಟ್ ಹೋಟೆಲ್ ಸುಮಾರು 117 ಕೊಠಡಿಗಳನ್ನು ಹೊಂದಿದೆ.
ರೆಸಾರ್ಟ್ ಹೋಟೆಲ್ನ ಕೊಠಡಿಗಳಲ್ಲಿ ಪ್ರಕೃತಿಯ ಸೌಂದರ್ಯ ಆಸ್ವಾದಿಸುವ ನಿಟ್ಟಿನಲ್ಲಿ ದೊಡ್ಡ ಕಿಟಕಿಗಳನ್ನು ಅಳವಡಿಸಲಾಗಿದೆ. ಆರಾಮದಾಯಕವಾದ ಹಾಸಿಗೆಗಳು ಮತ್ತು ವಿವಿಧ ಐಷಾರಾಮಿ ಸೌಲಭ್ಯಗಳು ಲಭ್ಯವಿದೆ. ಈ ರೆಸಾರ್ಟ್ನಲ್ಲಿ ತಂಗಲು ಒಂದು ರಾತ್ರಿಗೆ 20,000 ರಿಂದ 70,000 ರೂಪಾಯಿಗಳವರೆಗೆ ದರ ಇದೆ.






