ಕರ್ನಾಟಕದಲ್ಲಿ ಸಫಾರಿ ಬಂದ್ನಿಂದ ದಿನಕ್ಕೆ 3 ಕೋಟಿ ನಷ್ಟ!
ಬೆಂಗಳೂರು, ಫೆಬ್ರವರಿ 16: ರಾಜ್ಯದಲ್ಲಿ ಸಫಾರಿಗೆ (Safari) ತಾತ್ಕಾಲಿಕ ನಿಷೇಧ ಹೇರಿರುವ ಸರ್ಕಾರದ ಕ್ರಮ ಇದೀಗ ಚರ್ಚೆಗೆ ಕಾರಣವಾಗಿದೆ. ವಿಶೇಷವಾಗಿ ಬಂಡೀಪುರ ರಾಷ್ಟ್ರೀಯ ಉದ್ಯಾನವನ ಮತ್ತು ನಾಗರಹೊಳ ರಾಷ್ಟ್ರೀಯ ಉದ್ಯಾನವನಗಳಲ್ಲಿ ಸಫಾರಿ ಬಂದ್ ಮಾಡಿರುವುದರಿಂದ ಸ್ಥಳೀಯರ ಜೀವನೋಪಾಯಕ್ಕೆ ದೊಡ್ಡ ಹೊಡೆತ ಬಿದ್ದಿದೆ ಎಂಬ ಆಕ್ರೋಶ ವ್ಯಕ್ತವಾಗಿದೆ.
ಸಫಾರಿ ಬಂದ್ನಿಂದ ಕೇರಳ, ತಮಿಳುನಾಡಿಗೆ ಲಾಭ!
ಹುಲಿ ಹಾಗೂ ಚಿರತೆ ದಾಳಿಯಿಂದ ರಾಜ್ಯದ ಹಲವೆಡೆ ಸಾವು ನೋವುಗಳು ಹೆಚ್ಚಾದ ಹಿನ್ನೆಲೆ ಸರ್ಕಾರ ಸಫಾರಿಯನ್ನು ತಾತ್ಕಾಲಿಕವಾಗಿ ಬಂದ್ ಮಾಡುವ ಕ್ರಮ ಕೈಗೊಂಡಿತ್ತು. ಡಿಸೆಂಬರ್‌ನಲ್ಲಿ ಹಂತ ಹಂತವಾಗಿ ಸಫಾರಿ ಪುನರಾರಂಭ ಮಾಡುವುದಾಗಿ ತಿಳಿಸಿದರೂ, ಅಂತಿಮ ತೀರ್ಮಾನ ಇನ್ನೂ ಹೊರಬಿದ್ದಿಲ್ಲ. ಕರ್ನಾಟಕ ಇಕೋ-ಟೂರಿಸಂ ರಿಸಾರ್ಟ್ಸ್ ಅಸೋಸಿಯೇಶನ್ (KETRA) ಸದಸ್ಯರ ಪ್ರಕಾರ, ರಾಜ್ಯದಲ್ಲಿ ಸಫಾರಿ ಸ್ಥಗಿತದಿಂದ ಪಕ್ಕದ ಕೇರಳ ಮತ್ತು ತಮಿಳುನಾಡು ರಾಜ್ಯಗಳಿಗೆ ಲಾಭವಾಗಿದೆ. ರಣಥಂಬೋರ್ ಹಾಗೂ ಕಾರ್ಬೆಟ್ ಸೇರಿದಂತೆ ಇತರ ರಾಜ್ಯಗಳ ಉದ್ಯಾನವನಗಳಲ್ಲಿ ಸಫಾರಿ ಬುಕ್ಕಿಂಗ್ ಹೆಚ್ಚಾಗಿದೆ ಎಂದು ತಿಳಿದು ಬಂದಿದೆ.
ಪ್ರವಾಸೋದ್ಯಮದ ಮೇಲೆ ಅವಲಂಬಿತರಾಗಿದ್ದವರ ಜೀವನಕ್ಕೆ ಹೊಡೆತ
ಬಂಡೀಪುರ-ನಾಗರಹೊಳ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು 35 ರಿಸಾರ್ಟ್ಗಳು KETRAಗೆ ನೋಂದಾಯಿತವಾಗಿದ್ದು, ದಿನಕ್ಕೆ ಸರಾಸರಿ 3 ಕೋಟಿ ರೂಪಾಯಿ ನಷ್ಟವಾಗುತ್ತಿದೆ ಎಂದು ಸಂಘದ ಸದಸ್ಯ ಥಾಮಸ್ ಇಮ್ಮಾನುಯೇಲ್ ರಾಮಾಪುರಂ ‘ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ಗೆ’ ತಿಳಿಸಿದ್ದಾರೆ. ಈ ವರ್ಷ ಅನೇಕ ರಿಸಾರ್ಟ್ಗಳಲ್ಲಿ ಶೇ 50ರಿಂದ 80ರವರೆಗೆ ವಾಸ್ತವ್ಯ ಪ್ರಮಾಣ ಕುಸಿದಿದೆ ಎನ್ನಲಾಗಿದೆ. ಸುಮಾರು 8,000 ಜನರು ಪರಿಸರ ಪ್ರವಾಸೋದ್ಯಮದ ಮೇಲೆ ಅವಲಂಬಿತರಾಗಿದ್ದು, ಸಫಾರಿಗೆ ಬ್ರೇಕ್ ಬಿದ್ದಿರುವುದು ಇವರ ಜೀವನದ ಮೇಲೆ ಪರಿಣಾಮ ಬಿದ್ದಿದೆ.
ಇದನ್ನೂ ಓದಿ ವನ್ಯಜೀವಿ ಸಫಾರಿ ಬಂದ್ ಎಫೆಕ್ಟ್: ಕೋಟಿ ಕೋಟಿ ಆದಾಯ ನಷ್ಟ; KETRA ಆತಂಕ
ಪ್ರವಾಸೋದ್ಯಮ ಸಚಿವರಿಗೆ KETRA ಪತ್ರ
ಬಂಡೀಪುರ ಮತ್ತು ನಾಗರಹೊಳೆಗಳಲ್ಲಿ ಸಫಾರಿಗಳ ಪುನರಾರಂಭಕ್ಕೆ ಒತ್ತಾಯಿಸಿ ಕರ್ನಾಟಕ ಇಕೋ-ಟೂರಿಸಂ ರೆಸಾರ್ಟ್ಸ್ ಅಸೋಸಿಯೇಷನ್ (KETRA) ಪ್ರವಾಸೋದ್ಯಮ ಸಚಿವರಿಗೆ ಪತ್ರ ಬರೆದಿತ್ತು. ಡಿಸೆಂಬರ್‌ನಿಂದ ಫೆಬ್ರವರಿವರೆಗೆ ಇರುವ ಪ್ರವಾಸೋದ್ಯಮದ ಉಚ್ಚ ಕಾಲಾವಧಿಯಲ್ಲಿ ಈ ಕ್ಷೇತ್ರವು ಕೋವಿಡ್-19 ಸಂದರ್ಭ ಉಂಟಾಗಿದ್ದ ಸ್ಥಿತಿಯನ್ನೇ ಅನುಭವಿಸುತ್ತಿದೆ. ಪ್ರಸ್ತುತವಾಗಿ ಸಫಾರಿ ಸ್ಥಗಿತಕ್ಕೆ ನೀಡಲಾಗುತ್ತಿರುವ ಕಾರಣಗಳು ವೈಜ್ಞಾನಿಕ ಅಥವಾ ಪ್ರಾಯೋಗಿಕವಾಗಿಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿತ್ತು. ಸಫಾರಿ ಸ್ಥಗಿತವಾಗಿರುವುದರಿಂದ ಉಂಟಾಗುತ್ತಿರುವ ಆರ್ಥಿಕ ಹಾನಿ ಮತ್ತು ಉದ್ಯೋಗ ಸಮಸ್ಯೆಗಳನ್ನು ಮನಗಂಡ ಸರ್ಕಾರ ಅಗತ್ಯವಿರುವ ಹೆಚ್ಚುವರಿ ಸುರಕ್ಷತಾ ಕ್ರಮಗಳೊಂದಿಗೆ ಸಫಾರಿಯನ್ನ ಮತ್ತೆ ಆರಂಭಿಸಬೇಕೆಂದು ಆಗ್ರಹಿಸಿತ್ತು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.