
ನವದೆಹಲಿ, ಏಪ್ರಿಲ್ 2: ಆಮ್ ಆದ್ಮಿ ಪಕ್ಷ (ಎಎಪಿ) ಸಂಸದ ರಾಘವ್ ಚಡ್ಡಾ (Raghav Chadha) ಅವರನ್ನು ರಾಜ್ಯಸಭೆಯಲ್ಲಿ ಪಕ್ಷದ ಉಪ ನಾಯಕನ ಹುದ್ದೆಯಿಂದ ವಜಾಗೊಳಿಸಿದೆ. ಅವರನ್ನು ತೆಗೆದುಹಾಕುವಂತೆ ಕೋರಿ ಎಎಪಿ ರಾಜ್ಯಸಭಾ ಸಚಿವಾಲಯಕ್ಕೆ ಪತ್ರ ಬರೆದಿದೆ. ಎಎಪಿಯ ವತಿಯಿಂದ ಅವರಿಗೆ ರಾಜ್ಯಸಭೆಯಲ್ಲಿ ಮಾತನಾಡುವ ಸಮಯವನ್ನು ನೀಡಬಾರದು ಎಂದು ಮನವಿ ಮಾಡಿದೆ. ಆದರೆ, ಈ ನಿರ್ಧಾರಕ್ಕೆ ಕಾರಣವೇನೆಂಬುದರ ಬಗ್ಗೆ ಪಕ್ಷ ಯಾವುದೇ ಮಾಹಿತಿ ನೀಡದಿರುವುದು ಕುತೂಹಲ ಮೂಡಿಸಿದೆ.
ಇನ್ನೊಂದೆಡೆ ರಾಘವ್ ಚಡ್ಡಾ ಕೂಡ ಈ ಸುದ್ದಿಯ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿಲ್ಲವಾದರೂ ಈ ಸುದ್ದಿಗಳು ಮಾಧ್ಯಮಗಳಲ್ಲಿ ಪ್ರಸಾರವಾದ ಕೆಲವೇ ಗಂಟೆಗಳಲ್ಲಿ ರಾಜ್ಯಸಭಾ ಅಧಿವೇಶನದಲ್ಲಿ ತಾವು ಮಾಡಿದ ಭಾಷಣದ, ಹೈಲೈಟ್ ಮಾಡಿದ ಸಮಸ್ಯೆಗಳ ಕುರಿತಾದ ವಿಡಿಯೋವನ್ನು ಬಿಡುಗಡೆ ಮಾಡಿದ್ದಾರೆ. ಈ ವಿಡಿಯೋ ಮೇಲೆ ಕೆಟ್ಟ ದೃಷ್ಟಿ ತಾಗದಿರಲಿ ಎಂಬ ಇಮೋಜಿ ಕೂಡ ಹಾಕಿದ್ದಾರೆ.
ರಾಘವ್ ಚಡ್ಡಾ ಅವರು ಸಂಸತ್ತಿನಲ್ಲಿ ಎತ್ತಿದ್ದ ಸಮಸ್ಯೆಗಳ ಕೊಲಾಜ್ ಹೊಂದಿರುವ ವೀಡಿಯೊವನ್ನು ಹಂಚಿಕೊಂಡಿದ್ದು, ಇದು ರಾಷ್ಟ್ರವ್ಯಾಪಿ ಗಮನ ಸೆಳೆದಿದೆ. ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳ ಡೆಲಿವರಿ ವ್ಯಕ್ತಿಗಳಿಗೆ ಸೌಲಭ್ಯಗಳು, ಪಿತೃತ್ವ ರಜೆ, ಆಹಾರ ಕಲಬೆರಕೆ, ಮೊಬೈಲ್ ಡೇಟಾ ಬಳಕೆ ಮತ್ತು ವಿಮಾನ ವಿಳಂಬದಂತಹ ಸಮಸ್ಯೆಗಳ ಬಗ್ಗೆ ಮಾತನಾಡಿರುವುದನ್ನು ಕಾಣಬಹುದು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ