
ರಣ್ಬೀರ್ ಕಪೂರ್ (Ranbir Kapoor), ಯಶ್ ಮತ್ತು ಸಾಯಿ ಪಲ್ಲವಿ ನಟಿಸಿರುವ ‘ರಾಮಾಯಣ’ ಸಿನಿಮಾದ ಟೀಸರ್ ಇತ್ತೀಚೆಗಷ್ಟೆ ಬಿಡುಗಡೆ ಆಗಿದೆ. ಭಾರಿ ಅದ್ಧೂರಿ ವಿಎಫ್ಎಕ್ಸ್, ಅದ್ಧೂರಿ ಸೆಟ್ಗಳಲ್ಲಿ ಸಿನಿಮಾವನ್ನು ಚಿತ್ರೀಕರಿಸಲಾಗಿದೆ. ಪೌರಾಣಿಕ ಕತೆಗೆ ಭವ್ಯತೆಯನ್ನು ಸೇರಿಸಿ ಪ್ರೇಕ್ಷಕರಿಗೆ ನೀಡಲಾಗುತ್ತಿದೆ ‘ರಾಮಾಯಣ’ ಸಿನಿಮಾನಲ್ಲಿ. ಹಲವು ಆಸ್ಕರ್ಗಳನ್ನು ಗೆದ್ದಿರುವ ಡಿಎನ್ಇಜಿ ಸಂಸ್ಥೆ ಈ ಸಿನಿಮಾಕ್ಕೆ ವಿಎಫ್ಎಕ್ಸ್ ಮಾಡಿದೆ. ಸಿನಿಮಾಕ್ಕೆ ಇಬ್ಬರು ಆಸ್ಕರ್ ವಿಜೇತ ಸಂಗೀತ ನಿರ್ದೇಶಕರು ಸಂಗೀತ ನೀಡಲಿದ್ದಾರೆ. ರಣ್ಬೀರ್, ಯಶ್ ಇನ್ನೂ ಹಲವು ಸ್ಟಾರ್ಗಳು ಸಿನಿಮಾನಲ್ಲಿ ನಟಿಸಲಿದ್ದಾರೆ. ಇಷ್ಟೆಲ್ಲ ಇದ್ದರೂ, ಸಿನಿಮಾದ ಮುಖ್ಯ ಹೈಲೆಟ್ ಪಾಯಿಂಟ್ ಬೇರೆ ಏನೋ ಇದೆಯಂತೆ. ಖುದ್ದು ಸಿನಿಮಾದ ನಿರ್ದೇಶಕ ನಿತೇಶ್ ತಿವಾರಿ ಈ ಬಗ್ಗೆ ಮಾತನಾಡಿದ್ದಾರೆ.
ನಿರ್ದೇಶಕ ನಿತೇಶ್ ತಿವಾರಿ ಅವರು ಹೇಳಿರುವಂತೆ ಅವರ ಪ್ರಕಾರ ಈ ವರ್ಷ ಬಿಡುಗಡೆ ಆಗಲಿರುವ ‘ರಾಮಾಯಣ’ ಸಿನಿಮಾದ ಮೊದಲ ಭಾಗದಲ್ಲಿ ಹೈಲೆಟ್ ದೃಶ್ಯವೆಂದರೆ ಅದು ರಾಮ ಅಯೋಧ್ಯೆ ಬಿಟ್ಟು ಹೋಗುವ ದೃಶ್ಯವಂತೆ. ನಿತೇಶ್ ತಿವಾರಿ ಅವರು ಹೇಳಿರುವಂತೆ ‘ಸಿನಿಮಾ ಬಿಡುಗಡೆ ಆದಾಗ ಜನ ಆ ದೃಶ್ಯಕ್ಕೆ ಹೇಗೆ ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ನೋಡಲು ಕಾತರನಾಗಿ ಕಾಯುತ್ತಿದ್ದೇನೆ. ಆ ಇಡೀ ಸನ್ನಿವೇಶ ನಮ್ಮ ಸಿನಿಮಾನಲ್ಲಿ ಅದ್ಭುತವಾಗಿ ಮೂಡಿ ಬಂದಿದೆ. ನಾನಂತೂ ಪ್ರತಿ ಬಾರಿ ಆ ದೃಶ್ಯವನ್ನು ನೋಡಿದಾಗಲೂ ಕಣ್ಣೀರಾಗುತ್ತೇನೆ. ಆ ದೃಶ್ಯ ನಮ್ಮ ಸಿನಿಮಾದ ಬಹಳ ಮುಖ್ಯವಾದ ದೃಶ್ಯ’ ಎಂದಿದ್ದಾರೆ ನಿತೇಶ್ ತಿವಾರಿ.
ಇದನ್ನೂ ಓದಿ:ರಾವಣನ ಪಾತ್ರ ಮಾಡಿದ ಯಶ್ನ ಹಾಡಿ ಹೊಗಳಿದ ರಣಬೀರ್ ಕಪೂರ್
ಇದೀಗ ಬಿಡುಗಡೆ ಆಗಿರುವ ‘ರಾಮಾಯಣ’ ಟೀಸರ್ನಲ್ಲಿ ಆ ಸನ್ನಿವೇಶದ ಎರಡು ಸಣ್ಣ ದೃಶ್ಯಗಳನ್ನು ಸೇರಿಸಲಾಗಿದೆ. ಆದರೆ ಸಿನಿಮಾದ ವೈಭವದ ದೃಶ್ಯಗಳು, ಕೆಲ ಆಕ್ಷನ್ ದೃಶ್ಯಗಳು, ಪುಷ್ಪಕ ವಿಮಾನ ಮತ್ತು ರಣ್ಬೀರ್ ಕಪೂರ್ ಅವರ ರಾಮನ ಪಾತ್ರದ ಮೇಲೆ ಟೀಸರ್ ಹೆಚ್ಚು ಪೋಕಸ್ ಆಗಿತ್ತು. ಸಿನಿಮಾದ ಟೀಸರ್ ಬಿಡುಗಡೆ ಆದ ಬಳಿಕ ಸಹಜವಾಗಿಯೇ ಕೆಲವರು ಮೆಚ್ಚಿಕೊಂಡರೆ ಇನ್ನು ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ.
‘ರಾಮಾಯಣ’ ಸಿನಿಮಾನಲ್ಲಿ ರಣ್ಬೀರ್ ಕಪೂರ್ ರಾಮನ ಪಾತ್ರದಲ್ಲಿ, ಯಶ್ ರಾವಣನ ಪಾತ್ರದಲ್ಲಿ ನಟಿಸಿದ್ದಾರೆ. ಸಾಯಿ ಪಲ್ಲವಿ ಸೀತೆ ಹಾಗೂ ಸನ್ನಿ ಡಿಯೋಲ್ ಹನುಮಂತನ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾಕ್ಕೆ ಆಸ್ಕರ್ ವಿಜೇತ ಎಆರ್ ರೆಹಮಾನ್ ಮತ್ತು ಹಾನ್ಸ್ ಜೀಮರ್ ಅವರು ಸಂಗೀತ ನೀಡಿದ್ದಾರೆ. ರಾಮಾಯಣ ಸಿನಿಮಾದ ಎರಡೂ ಭಾಗಗಳಿಗೆ 4000 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆಯಂತೆ. ಸಿನಿಮಾದ ಮೊದಲ ಭಾಗ ಇದೇ ದೀಪಾವಳಿ ಹಬ್ಬಕ್ಕೆ ಬಿಡುಗಡೆ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ