
ಬೆಂಗಳೂರು, ಏಪ್ರಿಲ್ 4: ಗಲ್ಫ್ ಯುದ್ಧವು ಭಾರತದ ವೈದ್ಯಕೀಯ ಕ್ಷೇತ್ರದ ಮೇಲೂ ಗಂಭೀರ ಪರಿಣಾಮ ಬೀರಿದೆ. ಔಷಧಿಗಳ ಕಚ್ಚಾ ವಸ್ತುಗಳ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದು, ಮುಂದಿನ ದಿನಗಳಲ್ಲಿ ಔಷಧಿಗಳ ಬೆಲೆ ಶೇಕಡಾ 10 ರಿಂದ 15ರಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ಈ ಬೆಲೆ ಏರಿಕೆಯು ಭವಿಷ್ಯದಲ್ಲಿ ರೋಗಿಗಳಿಗೆ ಆರ್ಥಿಕ ಸಂಕಷ್ಟವನ್ನು ತಂದೊಡ್ಡಲಿದೆ. ಫಾರ್ಮ ರಿಟೈಲರ್ಸ್ ಮತ್ತು ಡಿಸ್ಟ್ರಿಬ್ಯೂಟರ್ಸ್ ಆರ್ಗನೈಸೇಶನ್ನ ಅಧ್ಯಕ್ಷ ಸಿ ಜಯರಾಮ್ ಮತ್ತು ಸದಸ್ಯ ಮಹೇಶ್ ಅವರು ಈ ಕುರಿತು ಕಳವಳ ವ್ಯಕ್ತಪಡಿಸಿದ್ದು, ತುರ್ತು ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಸದ್ಯಕ್ಕೆ ಔಷಧಿಗಳ ಪೂರೈಕೆಯಲ್ಲಿ ಯಾವುದೇ ತೊಂದರೆ ಇಲ್ಲವಾದರೂ, ಕಚ್ಚಾ ವಸ್ತುಗಳ ಬೆಲೆ ಏರಿಕೆ ಮುಂದಿನ ದಿನಗಳಲ್ಲಿ ಸಮಸ್ಯೆ ಸೃಷ್ಟಿಸಲಿದೆ ಎಂದು ಅವರು ತಿಳಿಸಿದ್ದಾರೆ. ಪೆಟ್ರೋಕೆಮಿಕಲ್ಸ್ ಮತ್ತು ಎಕ್ಸಿಪಿಯೆಂಟ್ಸ್ (ಬೈಂಡಿಂಗ್ ಏಜೆಂಟ್, ಸ್ಟಾರ್ಚ್ ಪೌಡರ್) ಬೆಲೆಗಳು ಈಗಾಗಲೇ ಹೆಚ್ಚಾಗಿವೆ. ಎರಡು-ಮೂರು ತಿಂಗಳ ನಂತರ ಮಾರುಕಟ್ಟೆಗೆ ಬರುವ ಹೊಸ ಔಷಧಿಗಳ ಬೆಲೆ ಏರಿಕೆಯಾಗಲಿದೆ ಎಂದು ಅವರು ಹೇಳಿದ್ದಾರೆ.