ನವದೆಹಲಿ, ಫೆಬ್ರುವರಿ 24: ಜೊಮಾಟೊ ಸಂಸ್ಥಾಪಕ ದೀಪಿಂದರ್ ಗೋಯಲ್ ಮಾಲಕತ್ವದ ಮತ್ತೊಂದು ಕಂಪನಿಯಾದ ಎಲ್ಎಟಿ ಏರೋಸ್ಪೇಸ್ ಇದೀಗ ಡಿಫೆನ್ಸ್ ಸೆಕ್ಟರ್ನ ಸ್ಟಾರ್ಟಪ್ವೊಂದನ್ನು ಖರೀದಿಸಿದೆ. ಗುರುಗ್ರಾಮ್ನಲ್ಲಿರುವ ಶಾರಂಗ್ ಶಕ್ತಿ ಎನ್ನುವ ಹೊಸ ಡಿಫೆನ್ಸ್ ರೋಬೋಟಿಕ್ಸ್ ಸ್ಟಾರ್ಟಪ್ ಅನ್ನು ಖರೀದಿ ಮಾಡಿದೆ. ಮುಂದಿನ ತಲೆಮಾರಿನ ನಾಗರಿಕ ವಿಮಾನಯಾನ ಪ್ಲಾಟ್ಫಾರ್ಮ್ಗಳನ್ನು ನಿರ್ಮಿಸುವ ದೂರಗಾಮಿ ಗುರಿ ಹೊಂದಿರುವ ಎಲ್ಎಟಿ ಏರೋಸ್ಪೇಸ್ಗೆ ಇದು ಮಹತ್ವದ ಹೆಜ್ಜೆ ಎನಿಸಿದೆ.
ಡಿಫೆನ್ಸ್ ಏವಿಯೇಶನ್ನಲ್ಲಿರುವ ಕಂಪನಿಗಳು ಸಿವಿಲ್ ಏವಿಯೇಶನ್ಗೆ ಬರುವುದು ಕಡಿಮೆ. ದೀಪಿಂದರ್ ಗೋಯಲ್ ಅವರ ಮಹತ್ವಾಕಾಂಕ್ಷೆಯ ಎಲ್ಎಟಿ ಏರೋಸ್ಪೇಸ್ ಇಂತಹದ್ದೊಂದು ರಿಸ್ಕ್ ತೆಗೆದುಕೊಂಡಿದೆ. ಗೋಯಲ್ ಪ್ರಕಾರ, ವಿಮಾನಯಾನದ ಪ್ರಮುಖ ತಂತ್ರಜ್ಞಾನಗಳು ಎರಡಕ್ಕೂ ಸಾಮಾನ್ಯವಾಗಿರುತ್ತವೆ.
ಶಾರಂಗ್ ಶಕ್ತಿ ಕಂಪನಿ 2023ರಲ್ಲಿ ಆರಂಭವಾಗಿದೆ. ಇದು ಇನ್ನೂ ಆರಂಭಿಕ ಹಂತದಲ್ಲಿದ್ದು, ಕೆಲ ಪ್ರಮುಖ ತಂತ್ರಜ್ಞಾನಗಳನ್ನು ಸ್ವಂತವಾಗಿ ಅಭಿವೃದ್ದಿಪಡಿಸಿದೆ. ಈ ಹಂತದಲ್ಲಿ ಎಲ್ಎಟಿ ಎರೋಸ್ಪೇಸ್ ಈ ಸ್ಟಾರ್ಟಪ್ ಅನ್ನು ಖರೀದಿ ಮಾಡಿರುವುದು ಗಮನಾರ್ಹ. ಈ ತಂತ್ರಜ್ಞಾನ ಸಾಮರ್ಥ್ಯವನ್ನು ಬಳಸಿ ಡಿಫೆನ್ಸ್ ಮತ್ತು ಸಿಲಿಲ್ ಏವಿಯೇಶನ್ ವಿಮಾನಗಳನ್ನು ತಯಾರಿಸುವ ಆಶಯದಲ್ಲಿದೆ.
ದೀಪಿಂದರ್ ಗೋಯಲ್ ಅವರು ಜೊಮಾಟೊದ ಸಂಸ್ಥಾಪಕರು. ಬ್ಲಿಂಕಿಟ್ ಇತ್ಯಾದಿ ಕಂಪನಿಗಳನ್ನೂ ಖರೀದಿಸಿದ್ದಾರೆ. ಎಟರ್ನಲ್ ಅಡಿಯಲ್ಲಿ ಈ ಕಂಪನಿಗಳಿವೆ. ದೀಪಿಂದರ್ ಅವರು ಎಟರ್ನಲ್ ಸಿಇಒ ಸ್ಥಾನಕ್ಕೆ ರಾಜೀನಾಮೆ ನೀಡಿ, ಎಲ್ಎಟಿ ಏರೋಸ್ಪೇಸ್ ಹಾಗು ಇತರ ಪ್ರಾಜೆಕ್ಟ್ಗಳಲ್ಲಿ ನಿರತರಾಗಿದ್ದಾರೆ.
ಸಣ್ಣ ಗಾತ್ರದ ಎಲೆಕ್ಟ್ರಿಕ್ ವಿಮಾನಗಳನ್ನು ನಿರ್ಮಿಸಿ, ಅಗ್ಗದ ದರಕ್ಕೆ ಪ್ರಯಾಣಾವಕಾಶ ಕಲ್ಪಿಸುವುದು ದೀಪಿಂದರ್ ಗೋಯಲ್ ಅವರಿಗಿರುವ ಮಹತ್ವಾಕಾಂಕ್ಷೆ. ಸಣ್ಣ ಪುಟ್ಟ ಪಟ್ಟಣಗಳ ನಡುವೆ ವಿಮಾನ ಹಾರಾಟ ಆರಂಭಿಸುವುದು ಅವರ ಗುರಿ. ಬಸ್ಸು, ಕ್ಯಾಬ್ಗಳಂತೆ ಸಾಮಾನ್ಯ ಜನರು ವಿಮಾನಗಳ ಬಳಸುವಂತಾಗಬೇಕು ಎಂಬುದು ಅವರ ಉದ್ದೇಶ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ