ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್ (Shah Rukh Khan) ಅಭಿನಯದ ಬಹುನಿರೀಕ್ಷಿತ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ ‘ಕಿಂಗ್’ ಅದ್ದೂರಿಯಾಗಿ ನಿರ್ಮಾಣ ಆಗುತ್ತಿದೆ. ಈ ಚಿತ್ರದ ಬಗ್ಗೆ ದಿನದಿಂದ ದಿನಕ್ಕೆ ಕುತೂಹಲ ಹೆಚ್ಚುತ್ತಿದೆ. ಈ ಚಿತ್ರವು ಭಾರತೀಯ ಚಿತ್ರರಂಗದ ಅತಿದೊಡ್ಡ ತಾರಾಗಣವನ್ನು ಹೊಂದಿರುವ ಸಿನಿಮಾ ಆಗಲಿದೆ ಎಂಬ ಸುಳಿವನ್ನು ಹಿರಿಯ ನಟ ಸೌರಭ್ ಶುಕ್ಲಾ ನೀಡಿದ್ದಾರೆ. ‘ಕಿಂಗ್’ (King) ಸಿನಿಮಾದಲ್ಲಿ ನಟಿಸುತ್ತಿರುವ ಸೌರಭ್ ಶುಕ್ಲಾ ಅವರು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿದ್ದಾರೆ.
ಸಿದ್ದಾರ್ಥ್ ಆನಂದ್ ಅವರು ಕಿಂಗ್’ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ‘ಈ ಸಿನಿಮಾದಲ್ಲಿ ನಾನು ಮಾತ್ರವಲ್ಲ, ಇಡೀ ಚಿತ್ರೋದ್ಯಮದ ಶೇಕಡ 70ರಷ್ಟು ಕಲಾವಿದರಿದ್ದಾರೆ. ಬಾಲಿವುಡ್‌ನ ಪ್ರತಿಯೊಬ್ಬ ದೊಡ್ಡ ನಟನೂ ಈ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ’ ಎಂದು ಹೇಳುವ ಮೂಲಕ ಚಿತ್ರದ ತಾರಾ ಬಳಗದ ಬಗ್ಗೆ ಸೌರಭ್ ಶುಕ್ಲಾ ಸುಳಿವು ನೀಡಿದ್ದಾರೆ.
ವರದಿಗಳ ಪ್ರಕಾರ, ‘ಕಿಂಗ್’ ಸಿನಿಮಾದಲ್ಲಿ ಶಾರುಖ್ ಖಾನ್ ಜೊತೆಗೆ ದೊಡ್ಡ ತಾರಾಗಣ ಇರಲಿದೆ. ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್ ಕೂಡ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಈಗಾಗಲೇ ತಿಳಿದಿರುವಂತೆ ದೀಪಿಕಾ ಪಡುಕೋಣೆ, ರಾಣಿ ಮುಖರ್ಜಿ, ಅಭಿಷೇಕ್ ಬಚ್ಚನ್, ಅನಿಲ್ ಕಪೂರ್, ಜಾಕಿ ಶ್ರಾಫ್, ಅರ್ಷದ್ ವಾರ್ಸಿ, ಜೈದೀಪ್ ಅಹಲಾವತ್, ರಾಘವ್ ಜುಯಲ್, ಸೌರಭ್ ಶುಕ್ಲಾ ನಟಿಸುತ್ತಿದ್ದಾರೆ.
ಈ ಸಿನಿಮಾದಲ್ಲಿ ಶಾರುಖ್ ಖಾನ್ ಅವರು ಶಕ್ತಿಶಾಲಿ ಮತ್ತು ರಗಡ್ ಆಂತಹ ಡಾನ್ ಪಾತ್ರ ಮಾಡುತ್ತಿದ್ದಾರೆ ಎನ್ನಲಾಗಿದೆ. ಅಪಾಯಕಾರಿ ಜಗತ್ತಿನಲ್ಲಿ ಮಗಳಿಗೆ ಎದುರಾಗುವ ಸವಾಲುಗಳನ್ನು ಎದುರಿಸಲು ಮಾರ್ಗದರ್ಶನ ನೀಡುವ ವ್ಯಕ್ತಿಯಾಗಿ ಅವರು ಕಾಣಿಸಿಕೊಳ್ಳಲಿದ್ದಾರೆ. ‘ದಿ ಆರ್ಚೀಸ್’ ನಂತರ ಸುಹಾನಾ ಖಾನ್ ಅವರಿಗೆ ಇದು ದೊಡ್ಡ ಪರದೆಯ ಮೊದಲ ಸಿನಿಮಾವಾಗಲಿದೆ.
ಇದನ್ನೂ ಓದಿ: ಶಾರುಖ್ ಖಾನ್ ಮಗಳ ವರ್ಕೌಟ್ ವಿಡಿಯೋ ವೈರಲ್
ಅದ್ದೂರಿ ಆ್ಯಕ್ಷನ್ ಜೊತೆಗೆ ಭಾವನಾತ್ಮಕ ಕಥೆಯನ್ನು ಹೊಂದಿರುವ ‘ಕಿಂಗ್’ ಸಿನಿಮಾ 2026ರ ಡಿಸೆಂಬರ್ 24ರಂದು ಕ್ರಿಸ್ಮಸ್ ಪ್ರಯುಕ್ತ ವಿಶ್ವಾದ್ಯಂತ ರಿಲೀಸ್ ಆಗಲಿದೆ. ಸಿದ್ದಾರ್ಥ್ ಆನಂದ್ ಅವರ ಮೇಕಿಂಗ್ ಮತ್ತು ಶಾರುಖ್ ಖಾನ್ ಅವರ ಸ್ಟಾರ್ ಇಮೇಜ್ ಕಾರಣದಿಂದ ಈ ಚಿತ್ರದ ಮೇಲಿನ ಹೈಪ್ ಹೆಚ್ಚಿದೆ. ಈಗ ತಾರಾಬಳಗದ ವಿವರದಿಂದ ಇನ್ನಷ್ಟು ನಿರೀಕ್ಷೆ ಮೂಡುವಂತಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.