ಶಿವಮೊಗ್ಗ, (ಫೆಬ್ರವರಿ 24): ಶಿವಮೊಗ್ಗದ SSLC ವಿದ್ಯಾರ್ಥಿ ಸಂಕೇತ್ ಕೊಲೆ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದೆ. ಈ ಪ್ರಕರಣ ಸಂಬಂಧ ಬಿಜೆಪಿ ನಾಯಕರು ಸಹ ಪ್ರತಿಕ್ರಿಯಿಸಿದ್ದು, ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇನ್ನು ಕೇಸ್ ಬಗ್ಗೆ ಶಿವಮೊಗ್ಗ ಎಸ್.ಪಿ. ನಿಖಿಲ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಈಗಾಗಲೇ 7 ಜನ ಅಪ್ರಾಪ್ತರನ್ನು ಕೊಲೆ ಸಂಬಂಧ ಬಂಧಿಸಲಾಗಿದೆ. ಕ್ರಿಕೆಟ್ ಆಟದಲ್ಲಿ ನಡೆದಿದ್ದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ. ಗಿರೀಶ್ ಜೊತೆ ಆರೋಪಿಗಳು ಕ್ರಿಕೆಟ್ ಆಟವಾಡಿದ್ದ ಹಿನ್ನೆಲೆಯಲ್ಲಿ ಗಲಾಟೆ ಮಾಡುತ್ತಿದ್ದರು. ಈ ವೇಳೆ ಸಂಕೇತ್ ಗಲಾಟೆ ಬಿಡಿಸಲು ತೆರಳಿದ್ದ. ಆ ವೇಳೆ ಸಂಕೇತ್ ಮರ್ಡರ್ ಆಗಿದೆ. ಕೈಯಲ್ಲಿ ಗುದ್ದಿ ಹಲ್ಲೆ ಮಾಡಿರುವ ಹಿನ್ನೆಲೆಯಲ್ಲಿ ಸಾವಾಗಿದೆ. ಕಳೆದೆರೆಡು ದಿನಗಳ ಹಿಂದೆಯಷ್ಟೇ ಕ್ರಿಕೆಟ್ ಆಟ ಆಡಿದ್ದರು. ಈ ಹಿನ್ನೆಲೆಯಲ್ಲಿ ಗಲಾಟೆ ನಡೆದು ಕೊಲೆ ನಡೆದಿದೆ. ಕೊಲೆ ಮಾಡಿರುವ ಅಪ್ರಾಪ್ತ ಬಾಲಕರ ಗಾಂಜಾ ಸೇವನೆ ಬಗ್ಗೆ ಪರೀಕ್ಷೆ ನಡೆಸಲಾಗುವುದು. ಊರುಗಡೂರಿನಲ್ಲಿ ವಿಶೇಷ ಬೀಟ್ ವ್ಯವಸ್ಥೆ ಮಾಡಲಾಗುವುದು. ಔಟ್ ಪೊಸ್ಟ್ ತೆರೆಯಲು ಕೂಡ ಕ್ರಮ ವಹಿಸಲಾಗಿದೆ ಎಂದರು.