2026 ರ ಟಿ20 ವಿಶ್ವಕಪ್ ಫೈನಲ್ನಲ್ಲಿ ಭಾರತ ತಂಡವು ನ್ಯೂಜಿಲೆಂಡ್ ತಂಡವನ್ನು 96 ರನ್ಗಳಿಂದ ಸೋಲಿಸಿ ಚಾಂಪಿಯನ್ ಆಯಿತು. ಕೊನೆಯ ಮೂರು ಪಂದ್ಯಗಳಲ್ಲಿ ಹ್ಯಾಟ್ರಿಕ್ ಅರ್ಧಶತಕ ಬಾರಿಸಿದ್ದ ಸಂಜು ಸ್ಯಾಮ್ಸನ್ ತಂಡವನ್ನು ಚಾಂಪಿಯನ್ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಹೀಗಾಗಿ ಅವರಿಗೆ ಟೂರ್ನಮೆಂಟ್ ಆಟಗಾರ ಪ್ರಶಸ್ತಿಯೂ ಲಭಿಸಿತು. ಆದರೆ ಜಸ್ಪ್ರೀತ್ ಬುಮ್ರಾ ಈ ಪ್ರಶಸ್ತಿಗೆ ಅರ್ಹರಾಗಿದ್ದರು ಎಂದು ಎಬಿ ಡಿವಿಲಿಯರ್ಸ್ ಅಭಿಪ್ರಾಯ ಪಟ್ಟಿದ್ದಾರೆ.
ಈ ಬಗ್ಗೆ ಅಭಿಪ್ರಾಯ ಹಂಚಿಕೊಂಡಿರುವ ಎಬಿ ಡಿವಿಲಿಯರ್ಸ್, ‘ಈ ಪ್ರಶಸ್ತಿಗಾಗಿ ಸಂಜು ಸ್ಯಾಮ್ಸನ್ ಮತ್ತು ಜಸ್ಪ್ರೀತ್ ಬುಮ್ರಾ ನಡುವೆ ತೀವ್ರ ಪೈಪೋಟಿ ಇತ್ತು. ಈ ಪಂದ್ಯಾವಳಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದಿದ್ದ ಬುಮ್ರಾ, ಟೂರ್ನಮೆಂಟ್ ಆಟಗಾರ ಪ್ರಶಸ್ತಿ ರೇಸ್ನಲ್ಲಿದ್ದರು. ಆದರೆ ನನ್ನ ಅಭಿಪ್ರಾಯದಲ್ಲಿ, ಅವರು ನಿರ್ಣಾಯಕ ಮತ್ತು ಕಠಿಣ ಸಂದರ್ಭಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಹೀಗಾಗಿ ಈ ಪ್ರಶಸ್ತಿಗೆ ಬುಮ್ರಾ ಅರ್ಹರು ಎಂದಿದ್ದಾರೆ.
ಮುಂದುವರೆದು ಮಾತನಾಡಿರುವ ಅವರು, ‘ಭಾರತೀಯ ಪಿಚ್ಗಳಲ್ಲಿ ವೇಗವಾಗಿ ಬೌಲಿಂಗ್ ಮಾಡುವುದು ಸುಲಭವಲ್ಲ. ಆದಾಗ್ಯೂ ಟೂರ್ನಮೆಂಟ್ನಲ್ಲಿ ಕೆಲವು ಓವರ್ಗಳಲ್ಲಿ ಬುಮ್ರಾ ಕೊಂಚ ದುಬಾರಿಯಾಗಿದ್ದರು. ಆದರೆ ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳು ಬಂದಾಗ, ಅವರು ಅದ್ಭುತವಾಗಿ ಬೌಲಿಂಗ್ ಮಾಡಿದರು. ನಾನು ಬುಮ್ರಾರಂತಹ ಬೌಲರ್ನ ಹಿಂದೆಂದೂ ನೋಡಿಲ್ಲ. ಬುಮ್ರಾ ಬೇರೆ ಗ್ರಹದಿಂದ ಬಂದ ಆಟಗಾರನಂತೆ ಕಾಣುತ್ತಾರೆ. ಅವರು ಭಾರತಕ್ಕೆ ಸಿಕ್ಕಿರುವ ಅಮೂಲ್ಯ ರತ್ನ ಎಂದು ಎಬಿಡಿ ಬಣ್ಣಿಸಿದ್ದಾರೆ.
ಟಿ20 ವಿಶ್ವಕಪ್ನಲ್ಲಿ ಸಂಜು ಸ್ಯಾಮ್ಸನ್ ಪ್ರದರ್ಶನದ ಬಗ್ಗೆ ಹೇಳುವುದಾದರೆ.. ಈ ಪಂದ್ಯಾವಳಿಯಲ್ಲಿ ಕೇವಲ 5 ಪಂದ್ಯಗಳಲ್ಲಿ ಆಡುವ ಅವಕಾಶ ಪಡೆದಿದ್ದ ಸಂಜು 80.25 ಸರಾಸರಿಯಲ್ಲಿ 321 ರನ್ ಕಲೆಹಾಕಿದರು. ಇದರಲ್ಲಿ ಮೂರು ಅರ್ಧಶತಕಗಳು ಸೇರಿದ್ದವು. ಈ ಅರ್ಧಶತಕಗಳ ವಿಶೇಷತೆ ಏನೆಂದರೆ, ಈ ಮೂರೂ ಅರ್ಧಶತಕಗಳು ನಿರ್ಣಾಯಕ ‘ಮಾಡು-ಇಲ್ಲ-ಮಡಿ' ಪಂದ್ಯಗಳಲ್ಲಿ ಬಂದವು.
ಇತ್ತ ಜಸ್ಪ್ರೀತ್ ಬುಮ್ರಾ ಅವರ ಪ್ರದರ್ಶನದ ಬಗ್ಗೆ ಹೇಳುವುದಾದರೆ, ಈ ಪಂದ್ಯಾವಳಿಯಲ್ಲಿ 8 ಪಂದ್ಯಗಳನ್ನಾಡಿದ ಬುಮ್ರಾ 14 ವಿಕೆಟ್ಗಳನ್ನು ಕಬಳಿಸಿದ್ದಾರೆ. ಅವರ ಎಕಾನಮಿ ರೇಟ್ ಕೂಡ ಪ್ರತಿ ಓವರ್ಗೆ ಕೇವಲ 6.21 ಆಗಿದೆ. ಫೈನಲ್ ಪಂದ್ಯದಲ್ಲಿ ತಮ್ಮ ಅತ್ಯುತ್ತಮ ಪ್ರದರ್ಶನ ನೀಡಿದ ಬುಮ್ರಾ 15 ರನ್ಗಳಿಗೆ 4 ವಿಕೆಟ್ಗಳನ್ನು ಕಬಳಿಸಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.




