ಸಿಂಗಲ್ ಪೇರೆಂಟ್ ಆಗಿ ಮಗನ ಬೆಳೆಸುವುದು ತುಂಬಾ ಕಷ್ಟ: ಮೇಘನಾ ರಾಜ್

ಸಿಂಗಲ್ ಪೇರೆಂಟ್ ಆಗಿ ಮಗನ ಬೆಳೆಸುವುದು ತುಂಬಾ ಕಷ್ಟ: ಮೇಘನಾ ರಾಜ್

ನಟಿ ಮೇಘನಾ ರಾಜ್ ಅವರು ವೈಯಕ್ತಿಕ ಜೀವನದಲ್ಲಿ ಸಾಕಷ್ಟು ಏಳು-ಬೀಳು ಕಂಡಿದ್ದಾರೆ. ಚಿರಂಜೀವಿ ಸರ್ಜಾ (Chiranjeevi Sarja) ನಿಧನದ ಬಳಿಕ ಅವರು ಸಖತ್ ನೋವು ಅನುಭವಿಸಿದರು. ಪುತ್ರ ರಾಯನ್ (Raayan) ಜನಿಸಿದ ಬಳಿಕ ಅವರ ಬದುಕಿನಲ್ಲಿ ಹೊಸ ಅಧ್ಯಾಯ ಆರಂಭ ಆಯಿತು. ಸಿಂಗಲ್ ಪೇರೆಂಟ್ ಆಗಿ ಮಕ್ಕಳನ್ನು ಬೆಳೆಸುವುದು ಸುಲಭವಲ್ಲ. ಆ ಬಗ್ಗೆ ಮೇಘನಾ ರಾಜ್ (Meghana Raj) ಅವರು ಮಾತನಾಡಿದ್ದಾರೆ. ‘ರೆಯಾನ್ ಮಿಥುನ್’ ಯೂಟ್ಯೂಬ್ ಚಾನೆಲ್​​ಗೆ ನೀಡಿದ ಸಂದರ್ಶನದಲ್ಲಿ ಅವರು ಖಾಸಗಿ ಜೀವನದ ವಿಷಯಗಳನ್ನು ಹಂಚಿಕೊಂಡಿದ್ದಾರೆ.

‘ಸಿಂಗಲ್ ಪೇರೆಂಟ್ ಆಗಿದ್ದಾಗ ಕಷ್ಟಗಳು ಡಬಲ್ ಆಗಿರುತ್ತವೆ. ಅದರಲ್ಲೂ ತಾಯಿಯಾಗಿ ಮತ್ತು ಸೆಲೆಬ್ರಿಟಿಯಾಗಿದ್ದಾಗ 10 ಪಟ್ಟು ಜಾಸ್ತಿ ಕಷ್ಟ ಆಗುತ್ತದೆ. ಆ ಮಗುವಿನ ಮೇಲೂ ಜನರಿಗೆ ಸಾಕಷ್ಟು ನಿರೀಕ್ಷೆ ಇರುತ್ತದೆ. ರಾಯನ್ ಹುಡುಗ ಆದ ಕಾರಣ ಆತನ ಜೀವನದಲ್ಲಿ ತಂದೆಯ ರೀತಿ ಮೇಲ್ ಫಿಗರ್ ಇರಬೇಕಾದ್ದು ತುಂಬಾ ಮುಖ್ಯ. ಈಗ ಅವನಿಗೆ 5 ವರ್ಷ ಆಗುತ್ತಿದೆ. ಅವನ ಚಟುವಟಿಕೆಗಳು ಬದಲಾಗುತ್ತಿವೆ. ಇತ್ತೀಚಿನ ವರ್ಷಗಳಲ್ಲಿ ನಾನು ಸಿಂಗಲ್ ಪೇರೆಂಟ್ ಎಂಬುದು ನನಗೆ ಹೆಚ್ಚು ಫೀಲ್ ಆಗುತ್ತಿದೆ’ ಎಂದಿದ್ದಾರೆ ಮೇಘನಾ ರಾಜ್.

‘ಈ ಮೊದಲು ನಾನು ಇದನ್ನು ನಿಭಾಯಿಸಬಲ್ಲೆ ಎನಿಸಿತ್ತು. ಆದರೆ ಪ್ರತಿದಿನವೂ ನಿಭಾಯಿಸುವುದು ಕಷ್ಟ. ಸಾಕಪ್ಪ ಎನಿಸಿದ ದಿನಗಳು ಕೂಡ ಇವೆ. ಕೆಲವು ದಿನ ಅವನ ಎನರ್ಜಿ ನನ್ನ ಎನರ್ಜಿಗೆ ಹೊಂದಿಕೆ ಆಗಲ್ಲ. ನನ್ನ ಒಬ್ಬಳು ಕಸಿನ್ ಕೂಡ ಸಿಂಗಲ್ ಪೇರೆಂಟ್ ಪಾಲನೆಯಲ್ಲಿ ಬೆಳೆದವಳು. ಆಕೆಯ ಬಳಿ ಹೋಗಿ ನಾನು ಅನುಭವ ಕೇಳಿದೆ. ಸಾಕಷ್ಟು ವಿಷಯ ಚರ್ಚೆ ಮಾಡಿದೆವು. ‘ನೀನು ತಾಯಿ. ಒಳ್ಳೆಯ ತಾಯಿ ಆಗುವುದರ ಕಡೆಗೆ ಮಾತ್ರ ಗಮನ ಹರಿಸು. ತಂದೆ ಆಗಲು ಪ್ರಯತ್ನಿಸಬೇಡ. ಅದರ ಅವಶ್ಯಕತೆ ಕೂಡ ಇಲ್ಲ’ ಅಂತ ಆಕೆ ನನಗೆ ಸಲಹೆ ನೀಡಿದಳು. ನಾನು ಆ ಸಲಹೆಯನ್ನು ಗಂಭೀರವಾಗಿ ತೆಗೆದುಕೊಂಡೆ. ಅದರಿಂದ ನನಗೆ ಬಹಳ ಅನುಕೂಲ ಆಯಿತು. ಕೆಲವು ದಿನ ನನಗೆ ಕಷ್ಟ ಆಗುತ್ತದೆ. ಆಗ ರಾಯನ್ ಜೀವನದಲ್ಲಿ ಫಾದರ್ ಫಿಗರ್ ಖಂಡಿತವಾಗಿಯೂ ಬೇಕು ಎನಿಸುತ್ತದೆ’ ಎಂದು ಮೇಘನಾ ರಾಜ್ ಹೇಳಿದ್ದಾರೆ.

 

View this post on Instagram

 

A post shared by Rayane R Mithun (@rayanemithun)

‘ನನ್ನನ್ನು ಅರ್ಥ ಮಾಡಿಕೊಳ್ಳುವ ಸ್ನೇಹಿತರು ಇದ್ದಾರೆ. ಅವರ ಜೊತೆ ಮಾತನಾಡಿ ಎಲ್ಲವನ್ನೂ ಹೇಳಿಕೊಳ್ಳುವುದು ಸುಲಭ. ಮಾನಸಿಕವಾಗಿ ನನ್ನ ಮೇಲೆ ಇರುವ ಭಾರ ಹೆಚ್ಚು. ರಾಯನ್​ಗೆ ಸೂಕ್ತವಾದ ಸ್ಕೂಲ್ ಹುಡುಕುವುದು, ಯಾವುದು ಬೇಕು-ಬೇಡ ಎಂದು ನಿರ್ಧರಿಸುವುದು ಕೂಡ ಕಷ್ಟ. ಎಲ್ಲವನ್ನೂ ಚರ್ಚಿಸಿ ನಿರ್ಧರಿಸಲು ನನಗೆ ಪಾರ್ಟ್ನರ್ ಇಲ್ಲ. ರಾಯನ್​​ನ ಎಲ್ಲ ಕೆಲಸಗಳನ್ನು ನಾನೇ ಮಾಡಬೇಕು. ಪಾರ್ಟ್ನರ್ ಇದ್ದರೆ ಇದನ್ನೆಲ್ಲ ಅವರು ಕೂಡ ಮಾಡಬೇಕಾಗುತ್ತದೆ. ಈಗ ನನ್ನ ತಂದೆ-ತಾಯಿಗೆ ವಯಸ್ಸಾಗುತ್ತಿದೆ. ಅವರಿಗೂ ಮಿತಿಗಳಿವೆ. ಅವರಿಗೆ ವಿಶ್ರಾಂತಿ ಬೇಕು. ನಾನು ಎಲ್ಲವನ್ನೂ ನಿಭಾಯಿಸಲೇಬೇಕು. ಅದೇ ಜೀವನ’ ಎಂದು ಮೇಘನಾ ರಾಜ್ ಹೇಳಿದ್ದಾರೆ.

ಇದನ್ನೂ ಓದಿ: ‘ರಾಯನ್ ಫ್ರೆಂಡ್ಸ್​ಗೆ ಬೈಸೆಪ್ಸ್ ತೋರಿಸ್ತಾನೆ’; ಎಲ್ಲಾ ಧ್ರುವಾ ಎಫೆಕ್ಟ್ ಎಂದ ಮೇಘನಾ ರಾಜ್

ಮಗನಿಗೆ ರಾಯನ್ ಎಂದು ಹೆಸರು ಇಟ್ಟಿದ್ದರ ಹಿಂದಿನ ಇಂಟರೆಸ್ಟಿಂಗ್ ವಿಷಯವನ್ನು ಮೇಘನಾ ರಾಜ್ ವಿವರಿಸಿದ್ದಾರೆ. ‘ಮಗನ ಹೆಸರು ಯಾವುದೇ ಧರ್ಮವನ್ನು ಸೂಚಿಸುವಂತೆ ಇರಬಾರದು. ಯಾಕೆಂದರೆ, ನಾನು ಆ ರೀತಿ ಬೆಳೆದಿಲ್ಲ. ಚಿರು ಆಲೋಚನೆ ಕೂಡ ಹಾಗೆ ಇರಲಿಲ್ಲ. ಭಾರತೀಯ ಹೆಸರು ಆಗಿರಬೇಕು. ಸಂಸ್ಕೃತದ ಪದವೇ ಆಗಿರಬೇಕು ಎಂಬುದು ನನ್ನ ಆಸೆ ಆಗಿತ್ತು. ಅದಕ್ಕಾಗಿ ಹುಡುಕಿದೆವು. ರಾಯನ್ ಎಂದರೆ ಎಲ್ಲ ಧರ್ಮದಲ್ಲೂ ರಾಜಕುಮಾರ ಎಂಬ ಅರ್ಥ ಇದೆ. ಹಾಗಾಗಿ ಇದಕ್ಕಿಂತ ಉತ್ತಮ ಹೆಸರು ಬೇರೆ ಇಲ್ಲ ಅನಿಸಿತು’ ಎಂದು ಮೇಘನಾ ರಾಜ್ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *