
ರವೀಂದ್ರ ಜಡೇಜಾ ಅವರಿಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಡುವೆ ಅವಿನಾಭಾವ ಸಂಬಂಧ ಇತ್ತು. ಜಡೇಜಾ ಎಂದರೆ ನೆನಪಾಗುತ್ತಿದ್ದುದು ಸಿಎಸ್ಕೆ. ಆದರೆ, ಸಿಎಸ್ಕೆ ತಂಡ ಸಂಜು ಸ್ಯಾಮ್ಸನ್ ಅವರನ್ನು ಖರೀದಿ ಮಾಡಲು ಜಡೇಜಾ ಅವರನ್ನು ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಬಿಟ್ಟುಕೊಟ್ಟಿತು. ಈ ವಿಷಯ ಜಡೇಜಾಗೆ ನೋವು ತರಿಸಿದ್ದಿರಬಹುದು. ಹೀಗಾಗಿ, ಸಿಎಸ್ಕೆ ವಿರುದ್ಧ ಮಾರಕ ಬೌಲಿಂಗ್ ದಾಳಿ ಮಾಡಿ, ಎರಡು ವಿಕೆಟ್ ಪಡೆದು ಅವರು ಭರ್ಜರಿ ಸೆಲೆಬ್ರೇಷನ್ ಮಾಡಿದರು. ಮೂರು ಓವರ್ ಎಸೆದ ಜಡೇಜಾ, ಎರಡು ವಿಕೆಟ್ ಕಿತ್ತು 18 ರನ್ಗಳನ್ನಷ್ಟೇ ನೀಡಿದರು.
ಗೌಹಾಟಿಯಲ್ಲಿ ರಾಜಸ್ಥಾನ್ ರಾಯಲ್ಸ್ ಹಾಗೂ ಸಿಎಸ್ಕೆ ಮುಖಾಮುಖಿ ಆದವು. ಹಿರಿಯ ಆಟಗಾರ ಎಂಎಸ್ ಧೋನಿ ಇಲ್ಲದೆ ಇರುವುದು ಸಿಎಸ್ಕೆ ತಂಡಕ್ಕೆ ದೊಡ್ಡ ಹಿನ್ನಡೆ ಆಯಿತು. ಮೊದಲು ಬ್ಯಾಟಿಂಗ್ಗೆ ಇಳಿದ ಸಿಎಸ್ಕೆ ತಂಡ ಸಾಕಷ್ಟು ಹಿನ್ನಡೆ ಅನುಭವಿಸಿತು. 14 ರನ್ಗಳಿಗೆ ಒಂದು ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತ ಎದುರಿಸಿತು. ನಂತರ 51 ರನ್ಗಳಿಗೆ ತನ್ನ ಪ್ರಮುಖ ಐದು ವಿಕೆಟ್ಗಳನ್ನು ಸಿಎಸ್ಕೆ ಕಳೆದುಕೊಂಡಿತು.
View this post on Instagram
ಜಡೇಜಾ ಅವರು ಎಂಟನೇ ಓವರ್ನಲ್ಲಿ ಬೌಲಿಂಗ್ಗೆ ಇಳಿದರು. ಹಾಕಿದ ಮೊದಲ ಓವರ್ನ ಎರಡನೇ ಬಾಲ್ನಲ್ಲಿ ಸರ್ಫರಾಜ್ ಖಾನ್ ಅವರನ್ನು ಔಟ್ ಮಾಡಿದರು. 12 ಬಾಲ್ಗೆ 17 ರನ್ ಬಾರಿಸಿ ಸರ್ಫರಾಜ್ ಪೆವಿಲಿಯನ್ ಸೇರಿದರು. ನಂತರ ಕಣಕ್ಕೆ ಇಳಿದ ಶಿವಂ ದೂಬೆ ಅವರು ಬಿರುಸಿನ ಆಟಕ್ಕೆ ಮುಂದಾದರು. ರವೀಂದ್ರ ಜಡೇಜಾ ಬೌಲಿಂಗ್ ಅಲ್ಲಿ ಸಿಕ್ಸ್ ಕೂಡ ಬಾರಿಸಿದರು.
ನಂತರ ಅದೇ ರೀತಿಯಲ್ಲಿ ದೂಬೆ ಮತ್ತೆ ಸಿಕ್ಸ್ ಹೊಡೆಯಲು ಪ್ರಯತ್ನಿಸಿದರು. ಆದರೆ, ಅದು ಕ್ಯಾಚ್ ಆಗಿ ಬದಲಾಯಿತು. ಈ ಮೂಲಕ ಒಂದೇ ಓವರ್ ಅಲ್ಲಿ ಎರಡು ವಿಕೆಟ್ ತೆಗೆದು ಜಡೇಜಾ ಮಿಂಚಿದರು. ಈ ವೇಳೆ ಜಡೇಜಾ ಭರ್ಜರಿಯಾಗಿ ಸೆಲೆಬ್ರೇಷನ್ ಕೂಡ ಮಾಡಿದರು. ಗನ್ ಪೋಸ್ ಕೊಟ್ಟು ಸೆಲೆಬ್ರೇಷನ್ ಮಾಡುವ ಮೂಲಕ ಸಿಎಸ್ಕೆ ಅಭಿಮಾನಿಗಳಿಗೆ ನೇರವಾಗಿ ನೋವನ್ನುಂಟು ಮಾಡಿದರು.
ಇನ್ನಷ್ಟು ಕ್ರಿಕೆಟ್ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.