ಧೂಮಪಾನದ ಸಾಂದರ್ಭಿಕ ಚಿತ್ರImage Credit source: TV9 Network
ನವದೆಹಲಿ, ಫೆಬ್ರುವರಿ 2: ಹೆಚ್ಚವರಿ ಅಬಕಾರಿ ಸುಂಕ (Excise duty) ಜಾರಿಗೆ ತಂದ ಬೆನ್ನಲ್ಲೇ ಸಿಗರೇಟ್ ಬೆಲೆ (Cigarettes prices) ಪ್ಯಾಕ್ಗೆ 22 ರೂನಿಂದ 55 ರೂವರೆಗೂ ಏರಿಕೆ ಆಗಿದೆ. ಸರ್ಕಾರ ಸುಂಕ ಹೇರಿಕೆ ಹಾಕಿದ ಬೆನ್ನಲ್ಲೇ ವಿತರಕರು (distributors) ತಮ್ಮಲ್ಲಿರುವ ಹಳೆಯ ಸಿಗರೇಟು ಪ್ಯಾಕ್ಗಳಿಗೆ ನಿನ್ನೆ ಭಾನುವಾರದಿಂದಲೇ ಹೊಸ ದರ ಇಟ್ಟು ರೀಟೇಲ್ ಮಾರಾಟಗಾರರಿಗೆ ಮಾರತೊಡಗಿದ್ದಾರೆ. ಸಿಗರೇಟು ತಯಾರಕರು ಇಂದಿನಿಂದ ಹೊಸ ಎಂಆರ್ಪಿ ದರದ ಸಿಗರೇಟು ಪ್ಯಾಕುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಬಹುದು.
84 ಎಂಎಂ ಉದ್ದದ ಐಟಿಸಿ ಕಿಂಗ್, ಗೋಲ್ಡ್ ಫ್ಲೇಕ್ ಲೈಟ್ಸ್, ವಿಲ್ಸ್ ಕ್ಲಾಸಿಕ್, ಮೈಲ್ಡ್ಸ್ ಇತ್ಯಾದಿ ಸಿಗರೇಟ್ಗಳ ಪ್ಯಾಕ್ ಬೆಲೆ 170 ರೂನಿಂದ 220-225 ರೂಗೆ ಏರುವ ನಿರೀಕ್ಷೆ ಇದೆ. 97 ಮಿಲಿಮೀಟರ್ ಉದ್ದದ ಕ್ಲಾಸಿಕ್ ಕನೆಕ್ಟ್ನಂತಹ ಸ್ಲಿಮ್ ಸ್ಇಗರೇಟ್ಗಳ ಬೆಲೆ 300 ರೂನಿಂದ 350 ರೂಗೆ ಏರುವ ನಿರೀಕ್ಷೆ ಇದೆ. 76ಎಂಎಂ ಉದ್ದದ ವಿಲ್ಸ್ ನೇವಿ ಕಟ್ನ ಬೆಲೆ ಒಂದು ಪ್ಯಾಕ್ಗೆ 95 ರೂನಿಂದ 120 ರೂಗೆ ಏರುವ ನಿರೀಕ್ಷೆ ಇದೆ.
ಇದನ್ನು ಓದಿ: ಟ್ಯಾಕ್ಸ್ ಪಾಲು ಕರ್ನಾಟಕಕ್ಕೆ ಅತಿಹೆಚ್ಚು ಏರಿಕೆ ಆಗಿದ್ದು ಯಾಕೆ? ಇಲ್ಲಿದೆ ಕಾರಣ, ಮತ್ತು ವಿವಿಧ ರಾಜ್ಯಗಳ ತೆರಿಗೆ ಪಟ್ಟಿ
ಸಣ್ಣ ಅಂಗಡಿಗಳಿಗೆ ತೊಂದರೆ…
ಭಾರತದಲ್ಲಿ ಸಿಗರೇಟು ಮತ್ತು ತಂಬಾಕು ಉತ್ಪನ್ನಗಳಿಗೆ ಸುಮಾರು 8,000-9,000 ಸ್ಟಾಕಿಸ್ಟ್ಸ್ ಇದ್ದಾರೆ. 4.5 ಲಕ್ಷ ವಿತರಕರು, 1.3 ಕೋಟಿ ರೀಟೇಲ್ ಮಾರಾಟಗಾರರಿದ್ದಾರೆ. ಹೆಚ್ಚಿನ ಸಣ್ಣ ಅಂಗಡಿಗಳಿಗೆ ಸಿಗರೇಟ್ ಮಾರಾಟವೇ ಪ್ರಮುಖ ಆದಾಯ ಮೂಲವಾಗಿದೆ. ಸರ್ಕಾರವು ಸಿಗರೇಟು ಹಾಗು ತಂಬಾಕು ಉತ್ಪನ್ನಗಳ ಮೇಲೆ ಹೆಚ್ಚಿನ ತೆರಿಗೆ ವಿಧಿಸಿದರೆ ನಕಲಿ ಮಾಲುಗಳು ಅಥವಾ ಕಳ್ಳ ಮಾಲುಗಳು ಮಾರುಕಟ್ಟೆ ಪ್ರವೇಶಿಸುವ ಅಪಾಯ ಇರುತ್ತದೆ. ಇದರಿಂದ ರೀಟೇಲ್ ವ್ಯಾಪಾರಿಗಳ ಬದುಕಿಗೆ ತೊಂದರೆ ಆಗಬಹುದು ಎಂದು ಅಖಿಲ ಭಾರತ ಗ್ರಾಹಕ ಉತ್ಪನ್ನಗಳ ವಿತರಕರ ಒಕ್ಕೂಟವಾದ ಎಐಸಿಪಿಡಿಎಫ್ ಆತಂಕ ವ್ಯಕ್ತಪಡಿಸಿದೆ.
ಸಿಗರೇಟ್ ಮೇಲೆ ಎಷ್ಟಿದೆ ಟ್ಯಾಕ್ಸ್?
ಸಿಗರೇಟು ಇತ್ಯಾದಿ ತಂಬಾಕು ಉತ್ಪನ್ನಗಳನ್ನು ಸಿನ್ ಗೂಡ್ಸ್ ಅಥವಾ ಪಾಪದ ಸರಕುಗಳೆಂದು ಪರಿಗಣಿಸಲಾಗುತ್ತದೆ. ಹಳೆಯ ಜಿಎಸ್ಟಿ ವ್ಯವಸ್ಥೆಯಲ್ಲಿ ಪಾಪದ ಸರಕುಗಳಿಗೆ ಶೇ. 28 ಜಿಎಸ್ಟಿ ಹಾಗೂ ಹೆಚ್ಚುವರಿ ಸೆಸ್, ಅಬಕಾರಿ ಸುಂಕಗಳನ್ನು ವಿಧಿಸಲಾಗುತ್ತಿತ್ತು. ಹೊಸ ಜಿಎಸ್ಟಿ ಸಿಸ್ಟಂನಲ್ಲಿ ತಂಬಾಕು ಉತ್ಪನ್ನಗಳಿಗೆ ಶೇ. 40ರಷ್ಟು ಜಿಎಸ್ಟಿ ಹಾಗೂ ಹೆಚ್ಚುವರಿ ಅಬಕಾರಿ ಸುಂಕ ಹಾಕಾಗುತ್ತದೆ.
ಇದನ್ನೂ ಓದಿ: ಜನವರಿಯಲ್ಲಿ 1.93 ಲಕ್ಷ ಕೋಟಿ ರೂ ಜಿಎಸ್ಟಿ ಸಂಗ್ರಹ; ಈ ವರ್ಷ 18 ಲಕ್ಷ ಕೋಟಿ ರೂ ಟ್ಯಾಕ್ಸ್ ಕಲೆಕ್ಷನ್
ಫಿಲ್ಟರ್ಲೆಸ್ ಸಿಗರೇಟುಗಳಿಗೆ ಒಂದು ಸಿಗರೇಟ್ಗೆ 2.05ರಷ್ಟು ಹೆಚ್ಚುವರಿ ಸುಂಕ ಇರುತ್ತದೆ. ಚಿಕ್ಕ ಫಿಲ್ಟರ್ ಸಿಗರೇಟ್ಗೆ ಒಂದಕ್ಕೆ 2.10 ರೂ ಅಬಕಾರಿ ಸುಂಕ ಹಾಕಲಾಗುತ್ತಿದೆ. ಇನ್ನೂ ದೊಡ್ಡ ಸಿಗರೇಟುಗಳಿಗೆ 3.6 ರೂನಿಂದ 8.50 ರೂವರೆಗೆ ಅಬಕಾರಿ ಸುಂಕ ಇರುತ್ತದೆ. ಇದು ಶೇ 40 ಜಿಎಸ್ಟಿಗೆ ಹೆಚ್ಚುವರಿಯಾಗಿ ವಿಧಿಸುವ ಸುಂಕ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ