
ಮಂಗಳೂರು, ಮಾರ್ಚ್ 19: ನೈಋತ್ಯ ರೈಲ್ವೆಯಲ್ಲಿ ಭಾರೀ ಬದಲಾವಣೆಯನ್ನು ಇಲಾಖೆ ತಂದಿದೆ. ತುರ್ತು ಹಳಿ ನಿರ್ವಹಣಾ ಕಾರ್ಯ ನಿಗದಿಯಾಗಿರುವುದರಿಂದ, ಮಂಗಳೂರು ಮತ್ತು ಸುಬ್ರಹ್ಮಣ್ಯ ನಡುವೆ ಕಾರ್ಯನಿರ್ವಹಿಸುವ ಪ್ರಯಾಣಿಕ ರೈಲು ಸೇವೆಗಳಲ್ಲಿ ಗಮನಾರ್ಹ ಬದಲಾವಣೆಗಳನ್ನು ಮಾಡಲಾಗಿದೆ. ಮಂಗಳೂರು ಸೆಂಟ್ರಲ್ ಮತ್ತು ಸುಬ್ರಹ್ಮಣ್ಯ ಮಾರ್ಗವಾಗಿ ಸಂಚಾರಿಸುವ ಪ್ಯಾಸೆಂಜರ್ ರೈಲುಗಳನ್ನು ಒಟ್ಟು 35 ದಿನಗಳವರೆಗೆ ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ. ರೈಲು ಸಂಖ್ಯೆ 56629 (ಮಂಗಳೂರು – ಸುಬ್ರಹ್ಮಣ್ಯ ರಸ್ತೆ ಪ್ಯಾಸೆಂಜರ್) ಮತ್ತು ರೈಲು ಸಂಖ್ಯೆ 56630 (ಸುಬ್ರಹ್ಮಣ್ಯ ರಸ್ತೆ – ಮಂಗಳೂರು ಪ್ಯಾಸೆಂಜರ್) ಮಾರ್ಚ್ 23 ರಿಂದ ಏಪ್ರಿಲ್ 14 ರವರೆಗೆ ಮತ್ತು ಮತ್ತೆ ಜೂನ್ 10 ರಿಂದ ಜೂನ್ 21 ರವರೆಗೆ ರದ್ದು ಮಾಡಲಾಗಿದೆ.
ಏಪ್ರಿಲ್ ತಿಂಗಳಲ್ಲಿ ಹಲವಾರು ಎಕ್ಸ್‌ಪ್ರೆಸ್ ರೈಲುಗಳ ಸಮಯದಲ್ಲೂ ಬದಲಾವಣೆಗಳನ್ನು ಮಾಡಲಾಗಿದೆ. ಯಶವಂತಪುರ – ಕಾರವಾರ (16515), ಯಶವಂತಪುರ – ಮಂಗಳೂರು (16575), ಮತ್ತು ಯಶವಂತಪುರ – ಮಂಗಳೂರು (16539) ಎಕ್ಸ್‌ಪ್ರೆಸ್ ರೈಲುಗಳು ಸುಮಾರು 20 ನಿಮಿಷಗಳ ಕಾಲ ವಿಳಂಬವಾಗುತ್ತವೆ. ಮಂಗಳೂರು – ಸುಬ್ರಹ್ಮಣ್ಯ ಪ್ಯಾಸೆಂಜರ್ ರೈಲು (56229) ಏಪ್ರಿಲ್ 21 ರಿಂದ ಜೂನ್ 9 ರವರೆಗೆ 55 ನಿಮಿಷಗಳ ಕಾಲ ವಿಳಂಬವಾಗಲಿದೆ ಎಂದು ಇಲಾಖೆ ಹೇಳಿದೆ.
ಯುಗಾದಿ ಮತ್ತು ರಂಜಾನ್‌ಗೆ ವಿಶೇಷ ರೈಲುಗಳು:
ಯಶವಂತಪುರ – ಮಡಗಾಂವ್ ವಿಶೇಷ ಎಕ್ಸ್‌ಪ್ರೆಸ್ ಮಾರ್ಚ್ 20 ರಂದು ಬೆಳಿಗ್ಗೆ 11:50 ಕ್ಕೆ ಯಶವಂತಪುರದಿಂದ ಹೊರಟು ಶನಿವಾರ ಬೆಳಿಗ್ಗೆ 6:45 ಕ್ಕೆ ಮಡಗಾಂವ್ ತಲುಪಲಿದೆ. ಹಿಂದಿರುಗುವ ರೈಲು ಮಾರ್ಚ್ 22 ರಂದು ಬೆಳಿಗ್ಗೆ 11 ಗಂಟೆಗೆ ಮಡಗಾಂವ್‌ನಿಂದ ಹೊರಟು ಸೋಮವಾರ ಬೆಳಿಗ್ಗೆ 5:20 ಕ್ಕೆ ಬೆಂಗಳೂರು ಕಂಟೋನ್ಮೆಂಟ್ ತಲುಪಲಿದೆ.ಈ ರೈಲಿಗೆ ಕುಣಿಗಲ್, ಚನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರಸ್ತೆ, ಕಬಕ ಪುತ್ತೂರು, ಬಂಟ್ವಾಳ, ಸುರತ್ಕಲ್, ಮೂಲ್ಕಿ, ಉಡುಪಿ, ಬಾರ್ಕೂರು, ಕುಂದಾಪುರ, ಬೈಂದೂರು, ಭಟ್ಕಳ, ಮುರುಡೇಶ್ವರ, ಹೊನ್ನಾವರ, ಕುಮಟಾ, ಗೋಕರ್ಣ ರಸ್ತೆ, ಅಂಕೋಲಾ ಮತ್ತು ಕಾರವಾರದಲ್ಲಿ ನಿಲುಗಡೆ ಇರುತ್ತದೆ.
ಇದನ್ನೂ ಓದಿ: ಯುಗಾದಿ, ರಂಜಾನ್ ರಜೆಗೆ ಊರಿಗೆ ಹೋದವರಿಗೆ ಬೆಂಗಳೂರಿಗೆ ವಾಪಸ್ ಬರಲು ವಿಶೇಷ ರೈಲುಗಳು: ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ
ದಕ್ಷಿಣ ಮಧ್ಯ ರೈಲ್ವೆಯಲ್ಲಿ ರದ್ದತಿ:
ಕರ್ನೂಲ್ – ಕಾಚೆಗುಡ ಮತ್ತು ರಾಯಚೂರು – ಕಾಚೆಗುಡ ಮಾರ್ಗಗಳಲ್ಲಿ ಮಾರ್ಚ್ ಮಧ್ಯದಿಂದ ಏಪ್ರಿಲ್ 1 ರವರೆಗೆ ರೈಲು ಮಾರ್ಗಗಳ ದುರಸ್ಥಿ ಇರುವ ಕಾರಣ, ಹಲವಾರು ರೈಲುಗಳನ್ನು ರದ್ದುಗೊಳಿಸಲಾಗಿದೆ ಎಂದು ರೈಲ್ವೆ ಸಲಹಾ ಸಮಿತಿಯ ಮಾಜಿ ಸದಸ್ಯ ಡಾ. ಬಾಬುರಾವ್ ಹೇಳಿದ್ದಾರೆ. ಕರ್ನೂಲ್ ನಗರ – ಕಾಚೆಗುಡ (17436) ಮತ್ತು ಕಾಚೆಗುಡ – ಕರ್ನೂಲ್ ನಗರ (17435) ಮಾರ್ಚ್ 12 ರಿಂದ ಏಪ್ರಿಲ್ 1 ರವರೆಗೆ ರದ್ದಾಗಿವೆ.ಕಾಚೇಗೌಡ – ರಾಯಚೂರು (67787, 17693) ಮತ್ತು ರಾಯಚೂರು – ಕಾಚೇಗೌಡ (67788, 17694) ಮಾರ್ಚ್ 11 ರಿಂದ ಮಾರ್ಚ್ 31 ರವರೆಗೆ ರದ್ದುಗೊಳಿಸಲಾಗಿದೆ. ಗದ್ವಾಲ್ – ರಾಯಚೂರು (67784) ಮತ್ತು ರಾಯಚೂರು – ಗದ್ವಾಲ್ (67783) ಮಾರ್ಚ್ 11 ರಿಂದ ಮಾರ್ಚ್ 31 ರವರೆಗೆ ರದ್ದಾಗಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ