
ಬೆಂಗಳೂರು, ಮಾ.30: ನಗರದ ಮೈಸೂರು ರಸ್ತೆಯಲ್ಲಿರುವ ಸ್ಯಾಟಲೈಟ್ ಬಸ್ ನಿಲ್ದಾಣ (KSRTC) ಮತ್ತು ದೀಪಾಂಜಲಿ ನಗರ ಮೆಟ್ರೋ ನಿಲ್ದಾಣದ ನಡುವೆ ಸರಿಯಾದ ಸಂಪರ್ಕ ವ್ಯವಸ್ಥೆ ಇಲ್ಲದೆ ಪ್ರಯಾಣಿಕರು ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ. ಈ ಎರಡು ನಿಲ್ದಾಣಗಳ ನಡುವಿನ ಅಂತರ ಒಂದು ಕಿಲೋಮೀಟರ್ಗಿಂತಲೂ ಕಡಿಮೆ ಇದ್ದರೂ, ಸುಗಮ ಸಂಪರ್ಕದ ಕೊರತೆಯಿಂದಾಗಿ ಜನರು ಪರದಾಡುವಂತಾಗಿದೆ. ಇದೀಗ ಈ ಬಗ್ಗೆ ಜನರು ತುಂಬಾ ತೊಂದರೆಯನ್ನು ಅನುಭವಿಸುತ್ತಿದ್ದಾರೆ.
ಬೆಂಗಳೂರಿಗೆ ಹೊರ ಜಿಲ್ಲೆಗಳಿಂದ ಬರುವ ಪ್ರಯಾಣಿಕರು ಮೆಟ್ರೋ ಹತ್ತಲು ಈ ಕಿಲೋಮೀಟರ್ ದೂರವನ್ನು ಕಾಲ್ನಡಿಗೆಯಲ್ಲಿ ಕ್ರಮಿಸಬೇಕಿದೆ. ಆದರೆ, ಮೈಸೂರು ರಸ್ತೆಯ ಫುಟ್ಪಾತ್ಗಳು ಒಡೆದು ಹೋಗಿದ್ದು, ಬೀದಿ ಬದಿ ವ್ಯಾಪಾರಿಗಳಿಂದ ಆಕ್ರಮಣಕ್ಕೊಳಗಾಗಿವೆ. ಇದರಿಂದಾಗಿ ಲಗೇಜ್ಗಳೊಂದಿಗೆ ನಡೆಯುವುದು ಅಸಾಧ್ಯವಾಗಿದ್ದು, ಅನಿವಾರ್ಯವಾಗಿ ಆಟೋರಿಕ್ಷಾಗಳನ್ನು ಅವಲಂಬಿಸಬೇಕಿದೆ. ಕೇವಲ ಅರ್ಧ ಕಿಲೋಮೀಟರ್ ದೂರಕ್ಕೆ ಆಟೋ ಚಾಲಕರು ಹೆಚ್ಚಿನ ಹಣ ವಸೂಲಿ ಮಾಡುತ್ತಿದ್ದಾರೆ ಎಂಬುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಇನ್ನು ಈ ಬಗ್ಗೆ ನಗರ ಸಾರಿಗೆ ತಜ್ಞರ ಪ್ರಕಾರ, ಮೆಟ್ರೋ ಮತ್ತು ಬಸ್ ನಿಲ್ದಾಣಗಳ ನಡುವಿನ ಈ ಕನೆಕ್ಟಿವಿಟಿ ಕೊರತೆಯು ಯೋಜನಾ ಹಂತದ ದೊಡ್ಡ ಲೋಪವಾಗಿದೆ. “ಬಸ್, ಮೆಟ್ರೋ ಮತ್ತು ಪಾದಚಾರಿ ಮಾರ್ಗಗಳು ಒಂದಕ್ಕೊಂದು ಬೆಸೆದಾಗ ಮಾತ್ರ ಸಾರಿಗೆ ವ್ಯವಸ್ಥೆ ಯಶಸ್ವಿಯಾಗುತ್ತದೆ. ಇಲ್ಲದಿದ್ದರೆ ವಿಶ್ವದರ್ಜೆಯ ಮೆಟ್ರೋ ಇದ್ದರೂ ಪ್ರಯೋಜನವಿಲ್ಲ” ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಮೈಸೂರು, ಮಡಿಕೇರಿ ಮತ್ತು ಕೇರಳದ ಭಾಗಗಳಿಗೆ ತೆರಳುವ ಸಾವಿರಾರು ಜನರಿಗೆ ಸ್ಯಾಟಲೈಟ್ ಬಸ್ ನಿಲ್ದಾಣ ಪ್ರಮುಖ ಕೇಂದ್ರವಾಗಿದೆ. ಬಿಎಂಆರ್ಸಿಎಲ್ (BMRCL) ಮತ್ತು ಬಿಎಂಟಿಸಿ ಸಮನ್ವಯ ಸಾಧಿಸಿ ಈ ಸಮಸ್ಯೆಗೆ ಶೀಘ್ರ ಪರಿಹಾರ ನೀಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ದಾಖಲೆ ಬರೆದ ರಾಜ್ಯದ ವಿದ್ಯುತ್ ಬೇಡಿಕೆ: ಬೆಂಗಳೂರಿನ ಎಸಿ ಅಬ್ಬರಕ್ಕೆ ಬೆವರುತ್ತಿದೆ ಪವರ್ ಗ್ರಿಡ್!
ಪರಿಹಾರಗಳೇನು?
ಸ್ಕೈವಾಕ್ ಅಥವಾ ವಾಕ್ವೇ: ಈ ಎರಡು ನಿಲ್ದಾಣಗಳ ನಡುವೆ ಮೀಸಲಾದ ಸ್ಕೈವಾಕ್ ಅಥವಾ ಸುಸಜ್ಜಿತ ಪಾದಚಾರಿ ಮಾರ್ಗ ನಿರ್ಮಿಸಬೇಕು.
ಫೀಡರ್ ಬಸ್ಗಳು: ಬಿಎಂಟಿಸಿ (BMTC) ವತಿಯಿಂದ ಸಣ್ಣ ಫೀಡರ್ ಬಸ್ ಅಥವಾ ಮಿನಿ ಶಟಲ್ ಸರ್ವಿಸ್ ಆರಂಭಿಸಬೇಕು.
ಕಟ್ಟುನಿಟ್ಟಿನ ಗಡುವು: ಒಂದು ವೇಳೆ ಕಾಮಗಾರಿ ಆರಂಭಿಸಿದರೆ, ಅದು ಸಂಚಾರಕ್ಕೆ ತೊಂದರೆಯಾಗದಂತೆ ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳಬೇಕು.
ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ