ಹಾರ್ಮುಜ್ ಜಲಸಂಧಿಯಿಂದ ಗುಜರಾತ್​ಗೆ ಬಂದ ಭಾರತದ ಎರಡನೇ ಎಲ್​ಪಿಜಿ ಟ್ಯಾಂಕರ್ ನಂದಾದೇವಿ

ಹಾರ್ಮುಜ್ ಜಲಸಂಧಿಯಿಂದ ಗುಜರಾತ್​ಗೆ ಬಂದ ಭಾರತದ ಎರಡನೇ ಎಲ್​ಪಿಜಿ ಟ್ಯಾಂಕರ್ ನಂದಾದೇವಿ

ನವದೆಹಲಿ, ಮಾರ್ಚ್ 17: ಹಾರ್ಮುಜ್ ಜಲಸಂಧಿಯಿಂದ ಎಲ್​ಪಿಜಿ ಗ್ಯಾಸ್ ಹೊತ್ತ ಎರಡನೇ ಹಡಗೊಂದು ಭಾರತವನ್ನು ತಲುಪಿದೆ. 45,000 ಮೆಟ್ರಿಕ್ ಟನ್ ಎಲ್​ಪಿಜಿ ಹೊಂದಿರುವ ನಂದಾದೇವಿ ಎನ್ನುವ ಹಡಗು ಇಂದು ಗುರುವಾರ ಗುಜರಾತ್​ನ ವಡಿನಾರ್ ಬಂದರನ್ನು ತಲುಪಿದೆ. ಮೂಲ ಯೋಜನೆ ಪ್ರಕಾರ ಈ ಹಡಗು ಕಾಂಡ್ಲಾ ಪೋರ್ಟ್ ತಲುಪಬೇಕಿತ್ತು. ಆದರೆ, ಕಾರಣಾಂತರದಿಂದ ವಡಿನಾರ್ ಕಡೆಗೆ ತಿರುಗಿಸಲಾಯಿತು.

ಇರಾನ್ ಯುದ್ಧ ಶುರುವಾದಾಗಿನಿಂದ ಹಾರ್ಮುಜ್ ಜಲಸಂಧಿಗೆ ತಡೆಯಾಗಿದೆ. ಆದರೆ, ಭಾರತ ನಡೆಸಿದ ಮಾತುಕತೆಯ ಫಲವಾಗಿ ಇರಾನ್ ದೇಶವು ಹಾರ್ಮುಜ್ ಜಲಸಂಧಿಯಿಂದ ಈವರೆಗೆ ಮೂರು ಭಾರತೀಯ ಟ್ಯಾಂಕರ್​ಗಳಿಗೆ ಸಾಗಲು ಅನುಮತಿಸಿದೆ. ಶಿವಾಲಿಕ್ ಎನ್ನುವ ಹಡಗು ನಿನ್ನೆ ಗುಜರಾತ್​ನ ಮುಂದ್ರಾ ಪೋರ್ಟ್ ತಲುಪಿದೆ. ಅದು ಸುಮಾರು 45,000 ಟನ್ ಎಲ್​ಪಿಜಿ ಗ್ಯಾಸ್ ಹೊತ್ತು ಬಂದಿದೆ. ಇವತ್ತು ನಂದಾದೇವಿ ಹಡಗು ಆಗಮಿಸಿದೆ. ಇಲ್ಲಿಗೆ ಎರಡು ಹಡಗುಗಳು ಭಾರತದ ತೀರವನ್ನು ತಲುಪಿದಂತಾಗಿದೆ. ಇನ್ನೊಂದು ಹಡಗು ಒಂದೆರಡು ದಿನದಲ್ಲಿ ತಲುಪುವ ನಿರೀಕ್ಷೆ ಇದೆ. ಜಗ್ ಲಾಡ್ಕಿ ಎನ್ನುವ ಈ ಹಡಗು ಕೂಡ ಮುಂದ್ರಾ ಪೋರ್ಟ್​ಗೆ ಬರುವ ನಿರೀಕ್ಷೆ ಇದೆ.

ಇದನ್ನೂ ಓದಿ: ಶೆಲ್ ಪೆಟ್ರೋಲ್ ಬೆಲೆ 10 ದಿನದಲ್ಲಿ 4.50 ರೂ ಏರಿಕೆ; ಇಲ್ಲಿದೆ ದರಪಟ್ಟಿ

ಹಾರ್ಮುಜ್ ಜಲಸಂಧಿಯಲ್ಲಿ ಇನ್ನೂ 22 ಭಾರತೀಯ ಹಡಗುಗಳು ಅನುಮತಿಗಾಗಿ ಕಾದು ನಿಂತಿವೆ. ಈ 22 ಹಡಗುಗಳಲ್ಲಿ 611 ಭಾರತೀಯ ನಾವಿಕರಿದ್ದಾರೆ ಎಂದು ಸರ್ಕಾರದ ದತ್ತಾಂಶ ಹೇಳುತ್ತಿದೆ. ಈಗ ಒಂದೊಂದೇ ಹಡಗನ್ನು ಹೊರತರಿಸಲು ಭಾರತ ಪ್ರಯತ್ನಿಸುತ್ತಿದೆ. ಆ ನಿಟ್ಟಿನಲ್ಲಿ ಇರಾನ್​ನ ಮನವೊಲಿಸುವ ಪ್ರಯತ್ನಗಳಾಗುತ್ತಿವೆ.

ಎಲ್​ಪಿಜಿ ಬಿಕ್ಕಟ್ಟಿನಲ್ಲಿ ಭಾರತ

ಹಾರ್ಮುಜ್ ಜಲಸಂಧಿ ನಿರ್ಬಂಧಿತವಾಗಿರುವುದರಿಂದ ಜಾಗತಿಕವಾಗಿ ತೈಲ ಮತ್ತು ಅನಿಲಗಳ ಬೆಲೆ ಗಗನಕ್ಕೇರಿದೆ. ಎರಡೂ ಪೂರೈಕೆಗಳಿಗೆ ವ್ಯತ್ಯಯ ಆಗಿದೆ. ಭಾರತಕ್ಕೆ ಪೆಟ್ರೋಲ್, ಡೀಸಲ್​ಗಿಂತ ಎಲ್​ಪಿಜಿ ಬಿಕ್ಕಟ್ಟು ಹೆಚ್ಚು ತೀವ್ರತೆಯಲ್ಲಿದೆ. ಭಾರತ ಆಮದು ಮಾಡಿಕೊಳ್ಳುವ ಎಲ್​ಪಿಜಿಯಲ್ಲಿ ಬಹುತೇಕ ಭಾಗವು ಹಾರ್ಮುಜ್ ಜಲಸಂಧಿ ಮೂಲಕ ಸಾಗಣೆ ಆಗುತ್ತದೆ. ಹೀಗಾಗಿ, ಎಲ್​ಪಿಜಿ ಬಿಕ್ಕಟ್ಟು ಹೆಚ್ಚಾಗಿದೆ.

ಇದನ್ನೂ ನೋಡಿ: ಹಾರ್ಮುಜ್ ಜಲಸಂಧಿ ದಾಟಿ ಗುಜರಾತ್​ನ ಬಂದರು ತಲುಪಿದ ಭಾರತದ ಎಲ್‌ಪಿಜಿ ಟ್ಯಾಂಕರ್

ಭಾರತವು ಕಚ್ಚಾ ತೈಲವನ್ನು ರಷ್ಯಾದಿಂದ ಖರೀದಿಸುತ್ತಿದೆ. ನೈಸರ್ಗಿಕ ಅನಿಲದಲ್ಲಿ ಅರ್ಧದಷ್ಟನ್ನು ದೇಶೀಯವಾಗಿ ಉತ್ಪಾದಿಸಲಾಗುತ್ತಿದೆ. ಉಳಿದ ಅರ್ಧವನ್ನು ಬೇರೆ ಬೇರೆ ಭಾಗಗಳಿಂದ ಆಮದು ಮಾಡಿಕೊಳ್ಳುತ್ತಿದೆ. ಆದರೆ, ಎಲ್​ಪಿಜಿ ಗ್ಯಾಸ್​ಗೆ ಗಲ್ಫ್ ಮೇಲೆ ಅವಲಂಬನೆ ಹೆಚ್ಚಿರುವುದು ಭಾರತಕ್ಕೆ ಸ್ವಲ್ಪ ಇಕ್ಕಟ್ಟಿನ ಸ್ಥಿತಿ ತಂದಿರುವುದು ಹೌದು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *