ನೈತಿಕ ಪೊಲೀಸ್‌ಗಿರಿ ಮಾಡಿದ್ದಕ್ಕೆ ಬಾಲಕರು ಅಂದರ್
ಚಿಕ್ಕಬಳ್ಳಾಪುರ, ಫೆಬ್ರುವರಿ 03: ನಗರದಲ್ಲಿ (Chikkaballapur) ಅನ್ಯಕೋಮಿನ ಅಪ್ರಾಪ್ತ ಬಾಲಕರಿಂದ ನಡೆದ ನೈತಿಕ ಪೊಲೀಸ್‌ಗಿರಿ ಘಟನೆ ಸಾರ್ವಜನಿಕರಲ್ಲಿ ಆಕ್ರೋಶ ಹುಟ್ಟುಹಾಕಿದೆ. ಸ್ಥಳೀಯರು ಹೇಳಿರುವಂತೆ, ಹಿಂದೂ ಹುಡುಗನೊಂದಿಗೆ ಅನ್ಯಕೋಮಿನ ಯುವತಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಅವರ ವೀಡಿಯೋ ಮಾಡಿದ್ದ ಪುಂಡರು, ಅವರನ್ನು ಅಡ್ಡಗಟ್ಟಿ ಕಿರುಕುಳ ನೀಡಿದ್ದಾರೆ.
ನಾವಿಬ್ಬರೂ ಸ್ನೇಹಿತರೆಂದರೂ ಬಿಡದ ಪುಂಡರು
ಶಿಡ್ಲಘಟ್ಟ ಮೂಲದ ವಿದ್ಯಾರ್ಥಿಗಳಿಬ್ಬರು ಪರಸ್ಪರ ಸ್ನೇಹಿತರಾಗಿದ್ದು, ಒಟ್ಟಿಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಈ ಇಬ್ಬರನ್ನು ಅಡ್ಡಗಟ್ಟಿದ ಅಪ್ರಾಪ್ತರು ಸ್ನೇಹಿತರು ಒಟ್ಟಿಗಿದ್ದ ವೀಡಿಯೋ ತೋರಿಸಿ ಕಿರುಕುಳ ನೀಡಲು ಮುಂದಾಗಿದ್ದರು. ಈ ವೇಳೆ ತಾವಿಬ್ಬರೂ ಒಂದೇ ಊರಿನವರೆಂದೂ, ಸ್ನೇಹಿತರೆಂದೂ ಯುವಕ ಮತ್ತು ಯುವತಿ ಹೇಳಿಕೊಂಡಿದ್ದಾರೆ. ಆದರೂ ಸುಮ್ಮನಾಗದ ಪುಂಡರು ನೈತಿಕ ಪೊಲೀಸ್‌ಗಿರಿ ತೋರಿಸಿದ್ದಾರೆ.
ನೈತಿಕ ಪೊಲೀಸ್‌ಗಿರಿ ಮಾಡಿದ್ದಕ್ಕೆ ಬಾಲಕರು ಅಂದರ್
ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಬಳಿಕ, ಸಾರ್ವಜನಿಕರಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆ ಚಿಕ್ಕಬಳ್ಳಾಪುರ ನಗರ ಪೊಲೀಸರು ತಕ್ಷಣ ಕ್ರಮ ಕೈಗೊಂಡಿದ್ದು, ಕಿರುಕುಳ ನೀಡಿದ್ದ ಅಪ್ರಾಪ್ತ ಬಾಲಕರನ್ನು ವಶಕ್ಕೆ ಪಡೆದಿದ್ದಾರೆ. ನಗರ ನಿವಾಸಿಗಳು ಈ ರೀತಿಯ ನೈತಿಕ ಪೊಲೀಸ್‌ಗಿರಿಯಿಂದಾಗುವ ತೊಂದರೆಯನ್ನು ತಡೆಯಲು ಕಾನೂನು ಕ್ರಮ ವಹಿಸುವಂತೆ ಪೊಲೀಸ್ ಇಲಾಖೆಗೆ ಮನವಿ ಮಾಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.