ಮೃಣಾಲ್ ಠಾಕೂರ್ (Mrunal Thakur) ಅವರು ಎಲ್ಲ ವಿಷಯಗಳನ್ನು ಓಪನ್ ಆಗಿ ಮಾತನಾಡಲು ಬಯಸುತ್ತಾರೆ. ಯಾವುದೇ ಮುಚ್ಚುಮರೆ ಇಲ್ಲದೆ ಅವರು ತಮ್ಮ ಬಗ್ಗೆ ಕೇಳಿ ಬರುವ ವದಂತಿಗಳ ಬಗ್ಗೆ ಸ್ಪಷ್ಟನೆ ನೀಡುತ್ತಾರೆ. ಈಗ ಅವರು ತಮ್ಮ ಮುಂದಿನ ಸಿನಿಮಾ ‘ದೋ ದೀವಾನೆ ಶೆಹರ್ ಮೇ’ ಚಿತ್ರದ ಪ್ರಚಾರದ ವೇಳೆ ತಮ್ಮ ಮಾಜಿ ಬಾಯ್ಫ್ರೆಂಡ್ ಬಗ್ಗೆ ಮಾತನಾಡಿದ್ದಾರೆ. ಆತ ಅಕ್ಷರಶಃ ಹುಚ್ಚನಂತೆ ನಡೆದುಕೊಳ್ಳುತ್ತಿದ್ದ ಎಂದು ವಿವರಿಸಿದ್ದಾರೆ.
2019ರಲ್ಲಿ ಮೃಣಾಲ್ ಠಾಕೂರ್ ನಟನೆಯ ‘ಸೂಪರ್ 30’ ಹೆಸರಿನ ಸಿನಿಮಾ ಬಂತು. ಹೃತಿಕ್ ರೋಷನ್ ಜೊತೆ ಅವರು ತೆರೆ ಹಂಚಿಕೊಂಡಿದ್ದರು. ಶೂಟಿಂಗ್ ಸಮಯದಲ್ಲಿ ಮೃಣಾಲ್ ಬಾಯ್ಫ್ರೆಂಡ್ ನಡೆದುಕೊಳ್ಳುತ್ತಿದ್ದ ರೀತಿ ಅವರಿಗೆ ಶಾಕಿಂಗ್ ಎಂದೆನಿಸುತ್ತಿತ್ತು.
‘ನನ್ನ ಮಾಜಿಬಾಯ್ಫ್ರೆಂಡ್ ವಿದೇಶಿಗ ಆಗಿದ್ದ. ನಾನು ಹೃತಿಕ್ ರೋಷನ್ ಅವರಂತಹ ಸುಂದರ ಹೀರೋ ಜೊತೆ ಸುತ್ತಾಡುತ್ತಿದ್ದೇನೆ ಮತ್ತು ಶೂಟಿಂಗ್ ಮಾಡುತ್ತಿದ್ದೇನೆ ಎಂಬುದು ಆತನ ಭಾವನೆ ಆಗಿತ್ತು. ಹೀಗಾಗಿ, ಆತ ಜಿಮ್ನಲ್ಲಿ ವರ್ಕೌಟ್ ಮಾಡಲು ಆರಂಭಿಸಿದ. 15-17 ಕೆಜಿ ತೂಕ ಇಳಿಸಿಕೊಂಡ. ಮಸಲ್ಗಳು ಬೆಳೆದವು. ಕಟ್ಟುಮಸ್ತಾಗಿ ಕಾಣಿಸಿಕೊಂಡ’ ಎಂದು ಮೃಣಾಲ್ ಹಳೆಯ ದಿನಗಳನ್ನು ನೆನಪಿಸಿಕೊಂಡರು.
‘ಒಂದು ಹಂತದ ಬಳಿಕ ಆತ ಜಿಮ್ ಹೋಗೋದನ್ನೇ ಬಿಟ್ಟ. ಮನೆಯಲ್ಲಿ ಕುಳಿತು ತಿನ್ನುತ್ತಿದ್ದ. ಆತ 20 ಕೆಜಿ ಹೆಚ್ಚಿಸಿಕೊಂಡ. ಕೇಳಿದರೆ ಸುಸ್ತಾಗಿದೆ ಎನ್ನುತ್ತಿದ್ದ. ನಾನು ಅವನ ಬಳಿ ತೂಕ ಇಳಿಸಿಕೋ ಎಂದು ಯಾವಾಗಲೂ ಹೇಳಿಲ್ಲ. ನಾನು ಬೇರೆಯವರ ಜೊತೆ ಸುತ್ತಾಡುತ್ತೇನೆ ಎಂಬ ಅಭದ್ರತಾ ಭಾವನೆ ಆತನದ್ದಾಗಿತ್ತು’ ಎಂದು ಅವರು ಹೇಳಿದ್ದಾರೆ.
ಇನ್ನು ಮದುವೆ ವಿಷಯದಲ್ಲಿ ಮಾತನಾಡಿದ್ದ ಮೃಣಾಲ್ ಠಾಕೂರ್, ‘ನನ್ನ ಮದುವೆ ಫೆಬ್ರವರಿ 14ಕ್ಕೆ ಅಲ್ಲ, ಏಪ್ರಿಲ್ 1ರಂದು. ಅಂದು ಮೂರ್ಖರ ದಿನ ಅಲ್ಲವೇ’ ಎಂದು ಕೇಳಿದ್ದರು. ಈ ಮೂಲಕ ವದಂತಿಗಳು ಅವರ ಅಭಿಮಾನಿಗಳನ್ನು ಮೂರ್ಖರನ್ನಾಗಿ ಮಾಡಿದೆ ಎಂದು ಸ್ಪಷ್ಟವಾಗಿ ಹೇಳಿದರು.
ಇದನ್ನೂ ಓದಿ: ಧನುಶ್ ಜೊತೆ ಮದುವೆ: ಕೊನೆಗೂ ಬಾಯ್ಬಿಟ್ಟ ನಟಿ ಮೃಣಾಲ್ ಠಾಕೂರ್
ಮೃಣಾಲ್ ಠಾಕೂರ್ ಅವರು ‘ಸೀತಾ ರಾಮಂ’ ಸಿನಿಮಾ ಮೂಲಕ ಅಪಾರ ಜನಪ್ರಿಯತೆ ಪಡೆದುಕೊಂಡಿದ್ದಾರೆ. ಈ ಚಿತ್ರದಲ್ಲಿ ಅವರ ಅಂದಕ್ಕೆ ಎಲ್ಲರೂ ಮನಸೋತಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.