
ಹುಬ್ಬಳ್ಳಿ, ಮಾ.14: ಉತ್ತರ ಕರ್ನಾಟಕದ ಅತಿದೊಡ್ಡ ಸರ್ಕಾರಿ ಆಸ್ಪತ್ರೆ ಎಂಬ ಹೆಗ್ಗಳಿಕೆ ಪಾತ್ರವಾಗಿರುವ ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ (KIMS) ಈಗ ರೋಗಿಗಳ ಪಾಲಿಗೆ ನರಕಯಾತನೆಯ ತಾಣವಾಗಿ ಮಾರ್ಪಡುತ್ತಿದೆಯೇ ಎಂಬ ಅನುಮಾನ ಮೂಡಿದೆ. ಧಾರವಾಡದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ವ್ಯಕ್ತಿಯೊಬ್ಬರಿಗೆ ಬೆಡ್ ಇಲ್ಲ ಎಂಬ ಕಾರಣ ನೀಡಿ ಚಿಕಿತ್ಸೆ ನಿರಾಕರಿಸಿರುವ ಘಟನೆ ಬೆಳಕಿಗೆ ಬಂದಿದೆ. ಧಾರವಾಡದಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ವ್ಯಕ್ತಿಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದರು. ಪ್ರಾಣಾಪಾಯದಲ್ಲಿದ್ದ ಅವರನ್ನು ತಕ್ಷಣವೇ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಕರೆತರಲಾಯಿತು. ಗಾಯಾಳುವನ್ನು ಆಂಬ್ಯುಲೆನ್ಸ್ನಲ್ಲಿ ಕರೆತಂದರೂ, ಆಸ್ಪತ್ರೆಯ ಸಿಬ್ಬಂದಿ “ಬೆಡ್ಗಳು ಖಾಲಿ ಇಲ್ಲ” ಎಂದು ಹೇಳಿ ಆಂಬ್ಯುಲೆನ್ಸ್ನಿಂದ ಕೆಳಗೆ ಇಳಿಸಿಕೊಳ್ಳಲು ನಿರಾಕರಿಸಿದ್ದಾರೆ. ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಗಾಯಾಳು ಆಂಬ್ಯುಲೆನ್ಸ್ನಲ್ಲೇ ಸಾವು-ಬದುಕಿನ ನಡುವೆ ಹೋರಾಡಬೇಕಾಯಿತು. ಕೊನೆಗೆ ಯಾವುದೇ ದಾರಿ ಕಾಣದೆ, ಗಾಯಾಳುವಿನ ಸಂಬಂಧಿಕರು ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕಿಮ್ಸ್ ಆಸ್ಪತ್ರೆಯ ಈ ಬೇಜವಾಬ್ದಾರಿತನವನ್ನು ಆಂಬ್ಯುಲೆನ್ಸ್ ಚಾಲಕ ತನ್ನ ಮೊಬೈಲ್ನಲ್ಲಿ ಸೆರೆಹಿಡಿದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಬೆಡ್ ಇಲ್ಲ ಎಂದು ನಿರ್ಲಕ್ಷ್ಯದ ಉತ್ತರ ನೀಡುವ ಸಿಬ್ಬಂದಿಯ ನಡೆಯ ವಿರುದ್ಧ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ