ಹುಬ್ಬಳ್ಳಿ ಲವ್ ಜಿಹಾದ್ ಕೇಸ್‌: ಯುವತಿಯನ್ನು ಮಾಡೆಲ್ ಮಾಡ್ತೇನೆಂದು ನಂಬಿಸಿ ಗರ್ಭಿಣಿ ಮಾಡಿದ್ನಾ ಸಮೀರ್?

ಹುಬ್ಬಳ್ಳಿ ಲವ್ ಜಿಹಾದ್ ಕೇಸ್‌: ಯುವತಿಯನ್ನು ಮಾಡೆಲ್ ಮಾಡ್ತೇನೆಂದು ನಂಬಿಸಿ ಗರ್ಭಿಣಿ ಮಾಡಿದ್ನಾ ಸಮೀರ್?

ಹುಬ್ಬಳ್ಳಿ, ಏಪ್ರಿಲ್ 4: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ (Hubballi) ಸದ್ದು ಮಾಡುತ್ತಿರುವ ‘ಲವ್ ಜಿಹಾದ್ (Love Jihad)’ ಆರೋಪದ ಪ್ರಕರಣ ಕ್ಷಣಕ್ಕೊಂದು ಸ್ಫೋಟಕ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಮಾಡೆಲಿಂಗ್ ಆಸೆ ತೋರಿಸಿ ಯುವತಿಯನ್ನು ನಂಬಿಸಿದ್ದ ಜಿಮ್ ಟ್ರೈನರ್ ಸಮೀರ್, ಆಕೆಯನ್ನು ಗರ್ಭಿಣಿ ಮಾಡಿ ನಂತರ ಗರ್ಭಪಾತ ಮಾಡಿಸಿದ್ದಾನೆಯೇ ಎಂಬ ದಟ್ಟ ಅನುಮಾನ ಇದೀಗ ವ್ಯಕ್ತವಾಗಿದೆ. ಈ ನಿಟ್ಟಿನಲ್ಲಿ ಹುಬ್ಬಳ್ಳಿಯ ವಿದ್ಯಾನಗರ ಠಾಣೆಯ ಪೊಲೀಸರು ವೈದ್ಯಕೀಯ ದಾಖಲೆಗಳ ಸಂಗ್ರಹಕ್ಕೆ ಮುಂದಾಗಿದ್ದಾರೆ.

ಯುವತಿಯ ಪೋಷಕರ ಆರೋಪದ ಪ್ರಕಾರ, ಸಮೀರ್ ಆಕೆಗೆ ‘ನಿನ್ನನ್ನು ದೊಡ್ಡ ಮಾಡೆಲ್ ಮಾಡುತ್ತೇನೆ, ಅದಕ್ಕಾಗಿ ನಿತ್ಯ ಜಿಮ್‌ಗೆ ಬಾ’ ಎಂದು ನಂಬಿಸಿದ್ದ. ಮಾಡೆಲಿಂಗ್ ಕ್ಷೇತ್ರದಲ್ಲಿ ಮಿಂಚುವ ಕನಸು ಕಂಡಿದ್ದ ಯುವತಿ, ಸಮೀರ್ ಮಾತುಗಳನ್ನು ನಂಬಿ ಆತನೊಂದಿಗೆ ಆತ್ಮೀಯತೆ ಬೆಳೆಸಿಕೊಂಡಿದ್ದಳು. ಇದನ್ನೇ ಬಂಡವಾಳ ಮಾಡಿಕೊಂಡ ಸಮೀರ್, ಯುವತಿಯನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಈ ನಡುವೆ ಯುವತಿ ಗರ್ಭಿಣಿಯಾಗಿದ್ದು, ಆಕೆಗೆ ಬಲವಂತವಾಗಿ ಗರ್ಭಪಾತ ಮಾಡಿಸಲಾಗಿತ್ತು ಎಂಬ ಬಲವಾದ ಅನುಮಾನವೂ ಇದೀಗ ಪೊಲೀಸರಿಗೆ ವ್ಯಕ್ತವಾಗಿದೆ.

ಏನಿದು ಪ್ರಕರಣ? ಪೂರ್ಣ ಹಿನ್ನೆಲೆ ಇಲ್ಲಿದೆ

ಹುಬ್ಬಳ್ಳಿಯ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಜಿಮ್ ಟ್ರೈನರ್ ಸಮೀರ್ ವಿರುದ್ಧ ಲವ್ ಜಿಹಾದ್ ಮತ್ತು ಲೈಂಗಿಕ ದೌರ್ಜನ್ಯದ ದೂರು ದಾಖಲಾಗಿತ್ತು. ಯುವತಿಯನ್ನು ನಂಬಿಸಿ ಹೋಟೆಲ್‌ವೊಂದಕ್ಕೆ ಕರೆದೊಯ್ದು, ತಂಪು ಪಾನೀಯದಲ್ಲಿ ಪ್ರಜ್ಞೆ ತಪ್ಪಿಸುವ ಔಷಧ ನೀಡಿ ಅತ್ಯಾಚಾರ ಎಸಗಿದ್ದಾನೆ ಮತ್ತು ಆ ದೃಶ್ಯಗಳನ್ನು ವಿಡಿಯೋ ಮಾಡಿ ಬೆದರಿಕೆ ಹಾಕುತ್ತಿದ್ದಾನೆ, ಬ್ಲ್ಯಾಕ್​ಮೇಲ್ ಮಾಡುತ್ತಿದ್ದಾನೆ ಎಂಬುದು ದೂರಿನ ಸಾರಾಂಶವಾಗಿತ್ತು.

ಆದರೆ, ಈ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ನೀಡಿದ್ದ ಆರೋಪಿ ಸಮೀರ್, ತಾನು ಯಾವುದೇ ಔಷಧ ನೀಡಿಲ್ಲ ಎಂದು ವಾದಿಸಿದ್ದ. ‘ವಿಡಿಯೋ ರೆಕಾರ್ಡ್ ಆಗಿರುವುದು ನಿಜ, ಆದರೆ ಅದನ್ನು ನಾನು ಮಾಡಿಲ್ಲ, ಆ ಹುಡುಗಿಯೇ ತನ್ನ ಫೋನ್‌ನಲ್ಲಿ ಚಿತ್ರೀಕರಿಸಿದ್ದಾಳೆ. ಅಂದು ಪ್ರಜ್ಞೆ ತಪ್ಪಿದ್ದು ನಾನೇ ಹೊರತು ಆಕೆಯಲ್ಲ’ ಎಂದು ಸ್ಫೋಟಕ ಹೇಳಿಕೆ ನೀಡಿದ್ದ.

ಇದನ್ನೂ ಓದಿ: ಹುಬ್ಬಳ್ಳಿ ಲವ್ ಜಿಹಾದ್ ಕೇಸ್​ಗೆ ಟ್ವಿಸ್ಟ್ ಮೇಲೆ ಟ್ವಿಸ್ಟ್: ವಿಡಿಯೋ ಇರೋದು ನಿಜ, ಆದ್ರೆ… ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಆರೋಪಿ!

ಇದೀಗ ಗರ್ಭಪಾತದ ಆರೋಪ ಕೇಳಿಬಂದಿರುವುದರಿಂದ ಪೊಲೀಸರು ಯುವತಿ ಮತ್ತು ಸಮೀರ್ ಇಬ್ಬರನ್ನೂ ಮುಖಾಮುಖಿ ವಿಚಾರಣೆ ನಡೆಸಲು ಸಜ್ಜಾಗಿದ್ದಾರೆ. ಸದ್ಯ ಯುವತಿಯ ವೈದ್ಯಕೀಯ ಪರೀಕ್ಷೆಯ ವರದಿಗಾಗಿ ಪೊಲೀಸರು ಕಾಯುತ್ತಿದ್ದು, ಸತ್ಯಾಸತ್ಯತೆ ಶೀಘ್ರದಲ್ಲೇ ಹೊರಬೀಳಲಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *