14 ತಿಂಗಳು ಕೋಮಾದಲ್ಲಿದ್ದ ಅಮೆರಿಕದ ಭಾರತೀಯ ವಿದ್ಯಾರ್ಥಿನಿಯ ದುರಂತ ಅಂತ್ಯ

14 ತಿಂಗಳು ಕೋಮಾದಲ್ಲಿದ್ದ ಅಮೆರಿಕದ ಭಾರತೀಯ ವಿದ್ಯಾರ್ಥಿನಿಯ ದುರಂತ ಅಂತ್ಯ

ಮುಂಬೈ, ಏಪ್ರಿಲ್ 8: ಆಕೆ ಎಷ್ಟು ಸುಂದರಿಯೋ ಅಷ್ಟೇ ಜಾಣೆ. ಹೀಗಾಗಿಯೇ ತನ್ನ 35ನೇ ವಯಸ್ಸಿನಲ್ಲೂ ಹೊಸತೇನಾದರೂ ಕಲಿಯಬೇಕೆಂಬ ಬಯಕೆಯಿಂದ ಅವರು ಅಮೆರಿಕಕ್ಕೆ ಹಾರಿದ್ದರು. ಆದರೆ, ಅದೊಂದು ಅಪಘಾತ ಆಕೆಯ ಕನಸನ್ನು ನುಚ್ಚುನೂರು ಮಾಡಿಬಿಟ್ಟಿತ್ತು. ಮಗಳು ವಿದೇಶದಲ್ಲಿ ಓದಿ ಜೀವನದಲ್ಲಿ ಹೆಚ್ಚೆಚ್ಚು ಸಾಧನೆ ಮಾಡುತ್ತಾಳೆ ಎಂಬ ಕನಸು ಕಂಡಿದ್ದ ಆಕೆಯ ತಂದೆ ತಮ್ಮ ಮಗಳ ಸ್ಥಿತಿಯನ್ನು ನೋಡಿ ಮಮ್ಮಲ ಮರುಗಿದ್ದರು. ಭೀಕರ ಕಾರು ಅಪಘಾತದಲ್ಲಿ (Car Accident) ಗಾಯಗೊಂಡಿದ್ದ ನೀಲಂ ಶಿಂಧೆ (Neelam Tanaji Shinde) ಎಂಬ ಮಹಾರಾಷ್ಟ್ರದ ಮಹಿಳೆ ಕೋಮಾಗೆ ಜಾರಿದ್ದರು.

ಒಂದಲ್ಲ, ಎರಡಲ್ಲ… ಬರೋಬ್ಬರಿ 14 ತಿಂಗಳು ಕೋಮಾದಲ್ಲಿದ್ದ ಆಕೆಯನ್ನು ಹೇಗಾದರೂ ಉಳಿಸಿಕೊಳ್ಳಬೇಕೆಂದು ಆಕೆಯ ಕುಟುಂಬ ಮಾಡಿದ ಪ್ರಯತ್ನ ಒಂದೆರಡಲ್ಲ. ಆದರೆ, ವಿದ್ಯಾಭ್ಯಾಸಕ್ಕಾಗಿ ಅಮೆರಿಕಕ್ಕೆ ಹೋದ ಆ ಮಹಿಳೆ ಮತ್ತೆ ಭಾರತಕ್ಕೆ ಬರಲೇ ಇಲ್ಲ. ಕೋಮಾದಲ್ಲಿರುವಾಗಲೇ ಆಕೆ ದುರಂತ ಅಂತ್ಯ ಕಂಡಿದ್ದಾರೆ. ನೀಲಂ ಶಿಂಧೆಯ ಕೊನೆಯ ಆಸೆಯಂತೆ ಆಕೆಯ ಅಂಗಾಂಗಗಳನ್ನು ಅವರ ಕುಟುಂಬಸ್ಥರು ದಾನ ಮಾಡಿದ್ದಾರೆ. ಈ ಮೂಲಕ ನೀಲಂ ಸಾವಿನಲ್ಲೂ ಸಾರ್ಥಕತೆ ಮೆರೆದಿದಿದ್ದಾರೆ.

ಮಹಾರಾಷ್ಟ್ರದ ಸತಾರಾ ಜಿಲ್ಲೆಯ ವಡ್ಗಾಂವ್​ನ 35 ವರ್ಷದ ನೀಲಂ ತಾನಾಜಿ ಶಿಂಧೆ ಅಮೆರಿಕದಲ್ಲಿ ವಿದ್ಯಾರ್ಥಿನಿಯಾಗಿದ್ದರು. ಕ್ಯಾಲಿಫೋರ್ನಿಯಾದಲ್ಲಿ ನಡೆದ ಭೀಕರ ಅಪಘಾತದ ನಂತರ 14 ತಿಂಗಳಿಂದ ಕೋಮಾ ಸ್ಥಿತಿಯಲ್ಲಿದ್ದ ನೀಲಂ ಅಮೆರಿಕದಲ್ಲಿ ನಿಧನರಾಗಿದ್ದಾರೆ. 2025ರ ಫೆಬ್ರವರಿ 14ರಂದು ಕ್ಯಾಲಿಫೋರ್ನಿಯಾದ ಸ್ಯಾಕ್ರಮೆಂಟೋದಲ್ಲಿ ನಡೆದ ಹಿಟ್ ಆ್ಯಂಡ್ ರನ್ ಘಟನೆಯಲ್ಲಿ ಆಕೆಗೆ ಗಂಭೀರ ಗಾಯಗಳಾಗಿದ್ದವು. ಶಸ್ತ್ರಚಿಕಿತ್ಸೆಗೆ ಒಳಗಾಗಿ ದೀರ್ಘಕಾಲದ ವೈದ್ಯಕೀಯ ಆರೈಕೆಯನ್ನು ಪಡೆದಿದರೂ ಆಕೆಗೆ ಪ್ರಜ್ಞೆ ಮರಳಿ ಬರಲಿಲ್ಲ. ನೀಲಂ ಅಪಘಾತಕ್ಕೀಡಾಡಗುವ ಸ್ವಲ್ಪ ಮುಂಚೆ ಅವರ ತಾಯಿ ಕೂಡ ನಿಧನರಾಗಿದ್ದರು. ಹೀಗಾಗಿ, ಅವರ ಕುಟುಂಬದಲ್ಲಿ ಎರಡೆರಡು ಸಾವಿನ ಸಂಕಟ ಮಡುಗಟ್ಟಿದೆ.

ಇದನ್ನೂ ಓದಿ: ಕಾಲೇಜು ವಿದ್ಯಾರ್ಥಿ ಸಾವಿನ ಸುತ್ತ ಹತ್ತಾರು ಅನುಮಾನ: ಸ್ಫೋಟಕ ಆರೋಪ ಮಾಡಿದ ಮೃತನ ತಂದೆ

ನೀಲಂ ಅವರಿಗೆ ತಮ್ಮ ಅಂಗಾಂಗಗಳನ್ನು ದಾನ ಮಾಡಬೇಕೆನ್ನುವ ಆಸೆಯಿತ್ತು. ಅವರ ಕೊನೆಯಾಸೆಯಂತೆ ಅವರ ಕುಟುಂಬಸ್ಥರು ಅಂಗಾಂಗ ದಾನ ಮಾಡಿದ್ದಾರೆ. ಆಕೆಯ ಸಾವು ಆಕೆಯ ಕುಟುಂಬ ಮತ್ತು ಸಮುದಾಯವನ್ನು ತೀವ್ರ ಶೋಕದಲ್ಲಿ ಮುಳುಗಿಸಿದೆ. ಅಪಘಾತದಿಂದ ಗಂಭೀರ ಗಾಯಗಳಾಗಿ ನೀಲಂ ಅವರ ತಲೆಗೆ ತೀವ್ರ ಪೆಟ್ಟಾಗಿತ್ತು. ಜೊತೆಗೆ ಅವರ ಕೈಗಳು, ಕಾಲುಗಳು ಮತ್ತು ಎದೆಗೂ ಗಾಯಗಳಾಗಿದ್ದವು.

ತಲೆಯ ಗಾಯವನ್ನು ಸರಿಪಡಿಸಲು ವೈದ್ಯರು ತಕ್ಷಣದ ಶಸ್ತ್ರಚಿಕಿತ್ಸೆ ನಡೆಸಿದರು. ಆದರೂ ಅವರ ಸ್ಥಿತಿ ಗಂಭೀರವಾಗಿಯೇ ಇತ್ತು. ಅವರನ್ನು ತೀವ್ರ ನಿಗಾ ಘಟಕಕ್ಕೆ ದಾಖಲಿಸಲಾಯಿತು. ಅಲ್ಲಿ ಅವರು ಹಲವು ತಿಂಗಳುಗಳ ಚಿಕಿತ್ಸೆ ಪಡೆಯುತ್ತಿದ್ದರು. ಆದರೂ ಅವರಲ್ಲಿ ಚೇತರಿಕೆ ಕಂಡುಬರಲಿಲ್ಲ. ಅವರ ಚಿಕಿತ್ಸೆಯ ಸಮಯದಲ್ಲಿ, ಫೀಡಿಂಗ್ ಟ್ಯೂಬ್‌ಗೆ ಸಂಬಂಧಿಸಿದ ಸೋಂಕು ಸೇರಿದಂತೆ ತೊಡಕುಗಳು ಉಂಟಾದವು.

ಇದನ್ನೂ ಓದಿ: ತಮಿಳುನಾಡಿನ 9 ಪೊಲೀಸರಿಗೆ ಗಲ್ಲು ಶಿಕ್ಷೆಯಾಗಲು ಈ ಮಹಿಳಾ ಕಾನ್​ಸ್ಟೆಬಲ್ ಕೂಡ ಕಾರಣ!

ಅವರ ಆರೋಗ್ಯ ಕ್ಷೀಣಿಸುತ್ತಲೇ ಇತ್ತು. ಹೀಗಾಗಿ, ಮಾರ್ಚ್ 28ರಂದು ಜೀವರಕ್ಷಕ ಬೆಂಬಲವನ್ನು ತೆಗೆದುಹಾಕಲು ವೈದ್ಯರು ನಿರ್ಧರಿಸಿದರು. ನಂತರ ಅವರ ಸ್ಥಿತಿ ವೇಗವಾಗಿ ಹದಗೆಟ್ಟಿತು. ಬಳಿಕ ಅವರು ಸಾವನ್ನಪ್ಪಿದರು.ಅವರ ತಂದೆ ಆನಂದ್ ಶಿಂಧೆ ಅಮೆರಿಕಕ್ಕೆ ಪ್ರಯಾಣಿಸಲು ತುರ್ತು ವೀಸಾ ಪಡೆಯುವಲ್ಲಿ ಭಾರೀ ತೊಂದರೆ ಎದುರಿಸಿದರು. ಮುಂಬೈ ವೀಸಾ ಕಚೇರಿಯಲ್ಲಿ ಪದೇ ಪದೇ ಮನವಿಗಳು ಮತ್ತು ಪ್ರಯತ್ನಗಳ ಹೊರತಾಗಿಯೂ ವಿಳಂಬ ಮುಂದುವರೆಯಿತು. ಮಾಧ್ಯಮಗಳಲ್ಲಿ ಈ ಬಗ್ಗೆ ವರದಿ ಮಾಡಿದ ನಂತರ ರಾಜಕೀಯ ನಾಯಕರು ಮತ್ತು ಅಧಿಕಾರಿಗಳ ಮಧ್ಯಸ್ಥಿಕೆಯಿಂದ ಕೊನೆಗೂ ನೀಲಂ ಅವರ ತಂದೆ ಮತ್ತು ಸಹೋದರನಿಗೆ ವೀಸಾ ದೊರಕಿತು. ಆದರೂ ಇರಾನ್ ಯುದ್ಧದ ಕಾರಣದಿಂದ ಅವರು ಅಮೆರಿಕಕ್ಕೆ ಪ್ರಯಾಣಿಸಲು ತೊಂದರೆಯಾಯಿತು. ಕೊನೆಗೂ ಬಹಳ ವಿಳಂಬವಾಗಿಯಾದರೂ ಅವರು ಅಮೆರಿಕಕ್ಕೆ ಹೋಗಲು ಸಾಧ್ಯವಾಯಿತು. ಆದರೆ, ಆಕೆಯ ಕೊನೆಯ ದಿನಗಳಲ್ಲಿ ನೀಲಂಳನ್ನು ನೋಡಲು ಅವರಿಗೆ ಸಾಧ್ಯವಾಗಲಿಲ್ಲ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

Leave a Reply

Your email address will not be published. Required fields are marked *