ತಿರುವನಂತಪುರದಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಐದನೇ ಹಾಗೂ ಕೊನೆಯ ಟಿ20 ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 20 ಓವರ್ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 175 ರನ್ ಗಳಿಸಿತು. ತಂಡದ ಪರ ನಾಯಕಿ ಹರ್ಮನ್ ಪ್ರೀತ್ ಕೌರ್ ಅದ್ಭುತ ಅರ್ಧಶತಕ ಬಾರಿಸಿದರೆ, 8ನೇ ಕ್ರಮಾಂಕದಲ್ಲಿ ಬಂದ ಅರುಂಧತಿ ರೆಡ್ಡಿ ಕೇವಲ 11 ಎಸೆತಗಳಲ್ಲಿ 4 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ ಅಜೇಯ 27 ರನ್ ಬಾರಿಸಿದರು.
ಅಮನ್ಜೋತ್ ಕೌರ್ ಔಟಾದ ಬಳಿಕ ಕ್ರೀಸ್ಗೆ ಬಂದ ಅರುಂಧತಿ ರೆಡ್ಡಿ 19ನೇ ಓವರ್ನಲ್ಲಿ ಬೌಂಡರಿ ಹಾಗೂ ಸಿಕ್ಸರ್ಗಳ ಮಳೆಗರೆದರು. ಈ ಓವರ್ನಲ್ಲಿ 5 ಎಸೆತಗಳನ್ನು ಎದುರಿಸಿದ ಅರುಂಧತಿ ಒಟ್ಟು 19 ರನ್ಗಳನ್ನು ಕಲೆಹಾಕಿದರು. ಈ ಓವರ್ನಲ್ಲಿ ಅವರು ಮೂರು ಬೌಂಡರಿ ಹಾಗೂ 1 ಭರ್ಜರಿ ಸಿಕ್ಸರ್ ಬಾರಿಸಿ ತಂಡವನ್ನು 175 ರನ್ಗಳಿಗೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರವಹಿಸಿದರು.