
ಬೆಳಗಾವಿ, ಏಪ್ರಿಲ್ 11: ಬೆಳಗಾವಿಯ ನಗರಾಭಿವೃದ್ಧಿ ಕೋಶದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಅಜಯಸಿಂಗ್ ರಜಪೂತಗೆ ಸೇರಿದ ನಿವಾಸ ಹಾಗೂ ಕಚೇರಿಗಳ ಮೇಲೆ ನಡೆದ ಲೋಕಾಯುಕ್ತ ದಾಳಿ ಅಂತ್ಯಗೊಂಡಿದ್ದು, ತನಿಖೆ ವೇಳೆ ಬರೋಬ್ಬರಿ 14 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಅಕ್ರಮ ಆಸ್ತಿ ಪತ್ತೆಯಾಗಿದೆ. ಬೆಳಗಾವಿಯ ಆಂಜನೇಯ ನಗರ ಸೇರಿದಂತೆ ಒಟ್ಟು ಏಳು ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಲಾಗಿತ್ತು. ಈ ವೇಳೆ 6 ಕೆಜಿ ಚಿನ್ನ, 5 ಕೆಜಿ ಬೆಳ್ಳಿ ಆಭರಣಗಳು ಪತ್ತೆಯಾಗಿವೆ. ಇದಲ್ಲದೆ 3.12 ಕೋಟಿ ರೂಪಾಯಿ ಬ್ಯಾಂಕ್ ಡೆಪಾಸಿಟ್ ಇಟ್ಟಿರುವುದು ಬೆಳಕಿಗೆ ಬಂದಿದೆ. ಸವದತ್ತಿ, ಹುಕ್ಕೇರಿ ಹಾಗೂ ಹುಬ್ಬಳ್ಳಿಯ ವಿವಿಧೆಡೆ ಒಟ್ಟು 18 ನಿವೇಶನಗಳನ್ನು ಅಜಯಸಿಂಗ್ ಖರೀದಿಸಿರುವುದು ದಾಖಲೆಗಳಿಂದ ಸಾಬೀತಾಗಿದೆ. ಮನೆಯಲ್ಲಿ ಐಷಾರಾಮಿ ಕಾರುಗಳು ಮತ್ತು ಬೈಕ್‌ಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಲೋಕಾಯುಕ್ತ ಅಧಿಕಾರಿಗಳು ನೀಡಿದ ಅಧಿಕೃತ ಪ್ರಕಟಣೆಯ ಪ್ರಕಾರ, ಅಜಯಸಿಂಗ್ ಅವರು ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಸಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಸದ್ಯಕ್ಕೆ ಎಲ್ಲಾ ದಾಖಲೆಗಳು ಮತ್ತು ನಗದನ್ನು ವಶಕ್ಕೆ ಪಡೆದಿರುವ ಅಧಿಕಾರಿಗಳು ತನಿಖೆಯನ್ನು ಮುಂದುವರಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.