Headlines

Union Budget 2026-27: ಬಜೆಟ್​​ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಸಿಕ್ಕಿದ್ದೇನು? ಇಲ್ಲಿದೆ ಮಾಹಿತಿ – Kannada News | Union Budget 2026–27: Government Announces Major Push for Education, Skills and Employment

ನವದೆಹಲಿ, ಫೆ. 1: ಕೇಂದ್ರ ಬಜೆಟ್ 2026–27ರಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹಲವು ಮಹತ್ವದ ಘೋಷಣೆಗಳನ್ನು ಮಾಡಿದ್ದಾರೆ. ಶಿಕ್ಷಣ–ಉದ್ಯೋಗ–ಉದ್ಯಮ’ ಕುರಿತ ಉನ್ನತ ಮಟ್ಟದ ಸ್ಥಾಯಿ ಸಮಿತಿ ಸ್ಥಾಪನೆ ಮಾಡುವುದಾಗಿ ಸಚಿವರು ಪ್ರಕಟಿಸಿದ್ದು, ಈ ಸಮಿತಿ ಸೇವಾ ಕ್ಷೇತ್ರವನ್ನು ಕೇಂದ್ರವಾಗಿಟ್ಟುಕೊಂಡು ಉದ್ಯೋಗ ಸೃಷ್ಟಿ, ಕೌಶಲ್ಯ ಅಗತ್ಯಗಳು ಹಾಗೂ ರಫ್ತು ಅವಕಾಶಗಳ ಕುರಿತು ಶಿಫಾರಸುಗಳನ್ನು ನೀಡಲಿದೆ. ಜೊತೆಗೆ ಕೃತಕ ಬುದ್ಧಿಮತ್ತೆ (AI) ಸೇರಿದಂತೆ ಉದಯೋನ್ಮುಖ ತಂತ್ರಜ್ಞಾನಗಳ ಪರಿಣಾಮವನ್ನು ಪರಿಶೀಲಿಸಿ, ಶಾಲಾ ಹಂತದಿಂದಲೇ ಪಠ್ಯಕ್ರಮದಲ್ಲಿ ಅವುಗಳನ್ನು ಸೇರಿಸಲು ನೆರವಾಗಲಿದೆ.

ಪ್ರತಿ ಜಿಲ್ಲೆಗೆ  ಬಾಲಕಿಯರ ಹಾಸ್ಟೆಲ್

ಮಹಿಳಾ ವಿದ್ಯಾರ್ಥಿನಿಯರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು, ಉನ್ನತ ಶಿಕ್ಷಣದ STEM ಸಂಸ್ಥೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿನಿಯರಿಗಾಗಿ ಪ್ರತಿ ಜಿಲ್ಲೆಯಲ್ಲಿ ಒಂದು ಬಾಲಕಿಯರ ಹಾಸ್ಟೆಲ್ ನಿರ್ಮಿಸುವುದಾಗಿ ಸರ್ಕಾರ ಘೋಷಿಸಿದೆ. ಸೃಜನಾತ್ಮಕ ಶಿಕ್ಷಣ ಕ್ಷೇತ್ರದಲ್ಲಿಯೂ ಬಜೆಟ್​​​ನಲ್ಲಿ ಗಮನಹರಿಸಲಾಗಿದ್ದು, ಅನಿಮೇಷನ್, ವಿಸುಯಲ್ ಎಫೆಕ್ಟ್ಸ್, ಗೇಮಿಂಗ್ ಮತ್ತು ಕಾಮಿಕ್ಸ್ (AVGC) ಕ್ಷೇತ್ರವನ್ನು ಉತ್ತೇಜಿಸಲು 15,000 ಪ್ರೌಢಶಾಲೆಗಳು ಮತ್ತು 500 ಕಾಲೇಜುಗಳಲ್ಲಿ ಕಂಟೆಂಟ್ ಕ್ರಿಯೇಟರ್ ಲ್ಯಾಬ್‌ಗಳನ್ನು ಸ್ಥಾಪಿಸುವುದಾಗಿ ಘೋಷಿಸಲಾಗಿದೆ. ಅಲ್ಲದೆ, ಪೂರ್ವ ಭಾರತದ ಭಾಗದಲ್ಲಿ ಹೊಸ ರಾಷ್ಟ್ರೀಯ ವಿನ್ಯಾಸ ಸಂಸ್ಥೆ (National Institute of Design) ಸ್ಥಾಪನೆಯ ಪ್ರಸ್ತಾಪ ಮಾಡಲಾಗಿದೆ.

ಇದನ್ನೂ ಓದಿ:  1 ಗಂಟೆ 26 ನಿಮಿಷಗಳ ಕಾಲ ಬಜೆಟ್​​ ಮಂಡಿಸಿದ ವಿತ್ತ ಸಚಿವೆ; ಆಯವ್ಯಯ ಮಂಡನೆಯಲ್ಲೂ ದಾಖಲೆ

ವಿಜ್ಞಾನ ಶಿಕ್ಷಣ ಮತ್ತು ಸಂಶೋಧನೆಗೆ ಉತ್ತೇಜನ ನೀಡುವ ಉದ್ದೇಶದಿಂದ, ನಾಲ್ಕು ಟೆಲಿಸ್ಕೋಪ್ ಮೂಲಸೌಕರ್ಯ ಕೇಂದ್ರಗಳನ್ನು ಸ್ಥಾಪಿಸುವ ಅಥವಾ ನವೀಕರಿಸುವುದಾಗಿ ಬಜೆಟ್‌ನಲ್ಲಿ ಹೇಳಲಾಗಿದೆ. ಇದು ಖಗೋಳಶಾಸ್ತ್ರ ಮತ್ತು ಅಸ್ಟ್ರೋಫಿಸಿಕ್ಸ್ ಕ್ಷೇತ್ರದಲ್ಲಿ ಅಧ್ಯಯನ ಮತ್ತು ಸಂಶೋಧನೆಗೆ ನೆರವಾಗಲಿದೆ. ಖಾಸಗಿ ಸಹಭಾಗಿತ್ವದಲ್ಲಿ ವೈದ್ಯಕೀಯ ಪ್ರವಾಸೋದ್ಯಮಕ್ಕಾಗಿ 5 ಹಬ್​​ಗಳು ಹಾಗೂ ಆಯುರ್ವೇದಕ್ಕಾಗಿ 3 ಹೊಸ ಅಖಿಲ ಭಾರತ ಸಂಸ್ಥೆಗಳ ಸ್ಥಾಪನೆ ಬಗ್ಗೆಯೂ ಸಚಿವರು ಬಜೆಟ್​​ನಲ್ಲಿ ಘೋಷಿಸಿದ್ದಾರೆ. ಉನ್ನತ ಶಿಕ್ಷಣ ಮೂಲಸೌಕರ್ಯವನ್ನು ಬಲಪಡಿಸುವ ನಿಟ್ಟಿನಲ್ಲಿ, ಪ್ರಮುಖ ಕೈಗಾರಿಕಾ ಮತ್ತು ಲಾಜಿಸ್ಟಿಕ್ ಮಾರ್ಗಗಳ ಸಮೀಪ ಐದು ವಿಶ್ವವಿದ್ಯಾಲಯ ನಗರಗಳನ್ನು (University Townships) ಸ್ಥಾಪಿಸಲು ರಾಜ್ಯಗಳಿಗೆ ಸರ್ಕಾರ ನೆರವು ನೀಡಲಿದೆ. ಈ ಶೈಕ್ಷಣಿಕ ವಲಯಗಳಲ್ಲಿ ವಿಶ್ವವಿದ್ಯಾಲಯಗಳು, ಕಾಲೇಜುಗಳು, ಸಂಶೋಧನಾ ಸಂಸ್ಥೆಗಳು, ಕೌಶಲ್ಯ ಕೇಂದ್ರಗಳು ಹಾಗೂ ವಸತಿ ಸೌಲಭ್ಯಗಳು ಒಟ್ಟಾಗಿ ಇರಲಿವೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Leave a Reply

Your email address will not be published. Required fields are marked *