ಟಿ20 ವಿಶ್ವಕಪ್ ಮುಗಿದ ಕೂಡಲೇ 2026 ರ ಐಪಿಎಲ್ ಕೂಡ ಆರಂಭವಾಗಲಿದೆ. ಹಾಲಿ ಚಾಂಪಿಯನ್ ಆರ್‌ಸಿಬಿ ಈ ಆವೃತ್ತಿಯಲ್ಲೂ ತನ್ನ ಟ್ರೋಫಿ ಉಳಿಸಿಕೊಳ್ಳುವ ಇರಾದೆಯೊಂದಿಗೆ ಕಣಕ್ಕಿಳಿಯಲಿದೆ. ಆದರೆ ಆರ್‌ಸಿಬಿ ತನ್ನ ತವರು ಪಂದ್ಯಗಳನ್ನು ಎಲ್ಲಿ ಆಡಲಿದೆ ಎಂಬುದು ಇಲ್ಲಿಯವರೆಗೆ ಖಚಿತವಾಗಿಲ್ಲ. ಒಂದೆಡೆ ಕೆಎಸ್ಸಿಎ, ಆರ್‌ಸಿಬಿ ಪಂದ್ಯಗಳನ್ನು ಬೆಂಗಳೂರಿನಲ್ಲಿ ನಡೆಸಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದರೆ, ಆರ್‌ಸಿಬಿ ಮ್ಯಾನೇಜ್ಮೆಂಟ್ ಮಾತ್ರ ತನ್ನ ಪಂದ್ಯಗಳನ್ನು ಬೇರೆಡೆಗೆ ಸ್ಥಳಾಂತರಿಸಲು ನೋಡುತ್ತಿದೆ. ಇದೆಲ್ಲದರ ನಡುವೆ ಆರ್‌ಸಿಬಿ ಫ್ರಾಂಚೈಸಿ ಮುಂಬರುವ ಐಪಿಎಲ್ಗೆ ತನ್ನ ತಂಡದ ನೂತನ ಜೆರ್ಸಿಯನ್ನು ಬಿಡುಗಡೆ ಮಾಡಿದೆ.
ಮಾರ್ಚ್ 26 ರಿಂದ ಪ್ರಾರಂಭವಾಗುವ ಐಪಿಎಲ್‌ನ 19 ನೇ ಆವೃತ್ತಿಯಲ್ಲಿ ಆರ್‌ಸಿಬಿ ಆಟಗಾರರು ಹೊಸ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಟೂರ್ನಮೆಂಟ್ ಆರಂಭಕ್ಕೆ ಸುಮಾರು ಒಂದೂವರೆ ತಿಂಗಳ ಮೊದಲು ಆರ್‌ಸಿಬಿ ಫ್ರಾಂಚೈಸಿ ತಂಡದ ನೂತನ ಜೆರ್ಸಿಯನ್ನು ಬಿಡುಗಡೆ ಮಾಡಿದೆ. ಫೆಬ್ರವರಿ 3 ರಂದು ಆರ್‌ಸಿಬಿ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ವೀಡಿಯೊ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದು, ಅದರಲ್ಲಿ ಆರ್‌ಸಿಬಿ ತನ್ನ ನೂತನ ಜೆರ್ಸಿಯನ್ನು ಅನಾವರಣಗೊಳಿಸಿದೆ.
ವಾಸ್ತವವಾಗಿ ಬಿಡುಗಡೆಯಾಗಿರುವ ನೂತನ ಜೆರ್ಸಿ ಹಳೆಯ ಜೆರ್ಸಿಯನ್ನೇ ಹೋಲುತ್ತದೆ. ಅಂದರೆ ಆರ್‌ಸಿಬಿ ಆಟಗಾರರು ತಮ್ಮ ಐಕಾನಿಕ್ ಕೆಂಪು, ಕಪ್ಪು ಮತ್ತು ಚಿನ್ನದ ಬಣ್ಣದ ಮಿಶ್ರಿತ ಜೆರ್ಸಿಯಲ್ಲೇ ಮಿಂಚಲಿದ್ದಾರೆ. ಆದರೆ ಈ ಬಾರಿ ಜೆರ್ಸಿಯಲ್ಲಿ ಕೆಲವು ಬದಲಾವಣೆಗಳಿವೆ. ಹೊಸ ಜೆರ್ಸಿಯಲ್ಲಿ ಕಾಲರ್ ಇದ್ದು, ಇದರ ಜೊತೆಗೆ ಶೀರ್ಷಿಕೆ ಪ್ರಾಯೋಜಕರು ಸಹ ಬದಲಾಗಿದ್ದಾರೆ. ಕಳೆದ ಕೆಲವು ಸೀಸನ್ಗಳಲ್ಲಿ ಆರ್‌ಸಿಬಿ ಪ್ರಾಯೋಜಕತ್ವವನ್ನು ಕತಾರ್ ಏರ್‌ವೇಸ್ ಪಡೆದುಕೊಂಡಿತ್ತು. ಆದರೀಗ ನಥಿಂಗ್ ಸ್ಮಾರ್ಟ್‌ಫೋನ್ ಆರ್‌ಸಿಬಿ ಪ್ರಾಯೋಜಕತ್ವದ ಜವಾಬ್ದಾರಿ ಹೊತ್ತುಕೊಂಡಿದೆ. ಇದರ ಜೊತೆಗೆ ತಂಡದ ಲೋಗೋ ಮೇಲೆ 1 ಸ್ಟಾರ್ ಚಿಹ್ನೆಯೂ ಮುದ್ರಿತವಾಗಿದೆ.
ಹೊಸ ಜೆರ್ಸಿಯಲ್ಲಿ ಆರ್‌ಸಿಬಿ ಲೋಗೋದ ಮೇಲೆ ಸ್ಟಾರ್ ಚಿಹ್ನೆಯನ್ನು ನಮೂದಿಸಲಾಗಿದ್ದು, ಇದು ಆರ್‌ಸಿಬಿಯ ಮೊದಲ ಪ್ರಶಸ್ತಿಯನ್ನು ಸಂಕೇತಿಸುತ್ತದೆ. ಕಳೆದ 17 ವರ್ಷಗಳಿಂದ ಆರ್‌ಸಿಬಿಯ ಜೆರ್ಸಿಯಲ್ಲಿ ಈ ಸ್ಟಾರ್ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು, ಈಗ ಅದರ ಕಾಯುವಿಕೆಗೆ ತೆರೆ ಬಿದ್ದಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ