ಭಾರತ ಮತ್ತು ಶ್ರೀಲಂಕಾ ಮಹಿಳಾ ತಂಡಗಳ ನಡುವಿನ ಐದು ಪಂದ್ಯಗಳ ಟಿ20 ಸರಣಿಯ ಎರಡನೇ ಪಂದ್ಯ ವಿಶಾಖಪಟ್ಟಣಂನ ಡಾ. ವೈಎಸ್ ರಾಜಶೇಖರ ರೆಡ್ಡಿ ಎಸಿಎ-ವಿಡಿಸಿಎ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಿತು. ಆತಿಥೇಯ ಭಾರತ ತಂಡ ಈ ಪಂದ್ಯವನ್ನು ಏಕಪಕ್ಷೀಯವಾಗಿ ಗೆದ್ದು ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ 129 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಭಾರತ, ಯುವ ಸ್ಫೋಟಕ ಬ್ಯಾಟರ್ ಶಫಾಲಿ ವರ್ಮಾ ಅವರ ಸ್ಫೋಟಕ ಅರ್ಧಶತಕದ ನೆರವಿನಿಂದ ಇನ್ನು 49 ಎಸೆತಗಳು ಬಾಕಿ ಇರುವಂತೆಯೇ 3 ವಿಕೆಟ್ ಕಳೆದುಕೊಂಡು ಜಯದ ನಗೆ ಬೀರಿತು.
ಲಂಕಾಗೆ ಸ್ಫೋಟಕ ಆರಂಭ
ಈ ಪಂದ್ಯದಲ್ಲೂ ಟಾಸ್ ಗೆದ್ದ ಭಾರತದ ನಾಯಕಿ ಹರ್ಮನ್‌ಪ್ರೀತ್ ಕೌರ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ನಾಯಕಿಯ ನಿರ್ಧಾರವನ್ನು ಸಮರ್ಥಿಸಿಕೊಂಡ ಬೌಲರ್‌ಗಳು ಶ್ರೀಲಂಕಾ ತಂಡ ಬೃಹತ್ ಮೊತ್ತ ಕಲೆಹಾಕದಂತೆ ತಡೆದರು. ಆದಾಗ್ಯೂ ಲಂಕಾ ತಂಡಕ್ಕೆ ಉತ್ತಮ ಆರಂಭ ಒದಗಿಸಿಕೊಟ್ಟ ನಾಯಕಿ ಚಾಮರಿ ಅಟಪಟ್ಟು 31 ರನ್‌ಗಳ ಕೊಡುಗೆ ನೀಡಿದರು. ಚಾಮರಿ ಅಟಪಟ್ಟು ಇರುವವರೆಗೂ ಲಂಕಾ ತಂಡ ಸ್ಪರ್ಧಾತ್ಮಕ ಮೊತ್ತ ಕಲೆಹಾಕುವ ಸುಳಿವು ನೀಡಿತ್ತು. ಆದರೆ ಅವರು ಔಟಾದ ಬಳಿಕ ಎಂದಿನಂತೆ ತಂಡದ ಇನ್ನಿಂಗ್ಸ್ ಕುಸಿಯಿತು. ನಾಯಕಿ ಹೊರತುಪಡಿಸಿ, ಹರ್ಷಿತಾ ಸಮರವಿಕ್ರಮ 33 ರನ್‌ಗಳ ಕೊಡುಗೆ ನೀಡಿದರು. ಇವರನ್ನು ಹೊರತುಪಡಿಸಿ, ಬೇರೆ ಯಾವುದೇ ಬ್ಯಾಟ್ಸ್‌ಮನ್ 25 ರನ್‌ಗಳನ್ನು ತಲುಪಲು ಸಾಧ್ಯವಾಗಲಿಲ್ಲ.
ಭಾರತದ ಪರ ಅತ್ಯಂತ ಯಶಸ್ವಿ ಬೌಲರ್ ಎನಿಸಿಕೊಂಡ ಶ್ರೀ ಚರಣಿ ನಾಲ್ಕು ಓವರ್‌ಗಳಲ್ಲಿ ಕೇವಲ 23 ರನ್‌ಗಳನ್ನು ಬಿಟ್ಟುಕೊಟ್ಟು ಎರಡು ವಿಕೆಟ್‌ಗಳನ್ನು ಪಡೆದರು . ವೈಷ್ಣವಿ ಶರ್ಮಾ ಕೂಡ 32 ರನ್‌ಗಳಿಗೆ ಎರಡು ವಿಕೆಟ್‌ಗಳನ್ನು ಪಡೆದರು. ಉಳಿದಂತೆ ಕ್ರಾಂತಿ ಗೌರ್ ಮತ್ತು ಸ್ನೇಹ್ ರಾಣಾ ಕೂಡ ತಲಾ ಒಂದು ವಿಕೆಟ್ ಪಡೆದರು .
ಶಫಾಲಿ ಸಿಡಿಲಬ್ಬರದ ಅರ್ಧಶತಕ
129 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಭಾರತ ತಂಡಕ್ಕೆ ಉತ್ತಮ ಆರಂಭ ಸಿಕ್ಕಿತು. ಶೆಫಾಲಿ ವರ್ಮಾ ಮತ್ತು ಸ್ಮೃತಿ ಮಂಧಾನ ಮೊದಲ ವಿಕೆಟ್‌ಗೆ 3.1 ಓವರ್‌ಗಳಲ್ಲಿ 29 ರನ್‌ಗಳ ಜೊತೆಯಾಟ ನಡೆಸಿದರು. ಆದಾಗ್ಯೂ ಸ್ಮೃತಿ ಮಂಧಾನ ಸತತ 2ನೇ ಪಂದ್ಯದಲ್ಲಿ ವಿಫಲರಾಗಿ 14 ರನ್‌ಗಳಿಗೆ ಔಟಾದರು. ಆದರೆ ಶೆಫಾಲಿ ವರ್ಮಾ ಒಂದು ತುದಿಯಿಂದ ತಮ್ಮ ಸ್ಫೋಟಕ ಬ್ಯಾಟಿಂಗ್ ಅನ್ನು ಮುಂದುವರಿಸಿ ಕೇವಲ 34 ಎಸೆತಗಳಲ್ಲಿ ಅಜೇಯ 69 ರನ್ ಬಾರಿಸಿದರು . ಅವರ ಇನ್ನಿಂಗ್ಸ್ನಲ್ಲಿ 11 ಬೌಂಡರಿಗಳು ಮತ್ತು ಒಂದು ಸಿಕ್ಸರ್ ಕೂಡ ಸೇರಿತ್ತು. ಶೆಫಾಲಿ ವರ್ಮಾ ಕೇವಲ 27 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರೆ, ಜೆಮಿಮಾ ರೊಡ್ರಿಗಸ್ ಕೂಡ 15 ಎಸೆತಗಳಲ್ಲಿ 26 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರು. ಪರಿಣಾಮವಾಗಿ, ಟೀಂ ಇಂಡಿಯಾ ಕೇವಲ 11.5 ಓವರ್‌ಗಳಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ ಗುರಿ ಮುಟ್ಟಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ