ಮಾಜಿ ಶಾಸಕ ಪ್ರೀತಂಗೌಡ, ಮಾಜಿ ಸಚಿವ ನಾರಾಯಣಗೌಡ ಮತ್ತು ಇತರರುImage Credit source: tv9
ಮಂಡ್ಯ, ಫೆಬ್ರವರಿ 5: ಸ್ಥಳೀಯ ಸಂಸ್ಥೆ ಚುನಾವಣೆಗೂ ಮುನ್ನವೇ ಮಂಡ್ಯ (Mandya) ಜಿಲ್ಲೆಯಲ್ಲಿ ಮೈತ್ರಿ ಪಕ್ಷಗಳಾದ ಜೆಡಿಎಸ್ (JDS) ಮತ್ತು ಬಿಜೆಪಿ (BJP) ನಾಯಕರ ನಡುವೆ ಟಿಕೆಟ್ ಗುದ್ದಾಟ ಶುರುವಾಗಿದೆ. 2028ರ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಎರಡೂ ಪಕ್ಷಗಳ ಮುಖಂಡರು ಈಗಿನಿಂದಲೇ ಕ್ಷೇತ್ರ ಹಂಚಿಕೆ ಕುರಿತು ತಮ್ಮ ತಮ್ಮ ಹಕ್ಕು ಮಂಡಿಸಲು ಶುರು ಮಾಡಿದ್ದಾರೆ. ಮಂಡ್ಯ ಜಿಲ್ಲೆಯ ಕೆಲವು ಕ್ಷೇತ್ರಗಳನ್ನು ಬಿಜೆಪಿಗೆ ಬಿಟ್ಟುಕೊಡಬೇಕು ಎಂದು ಬಿಜೆಪಿ ನಾಯಕರು ಒತ್ತಾಯಿಸಿದ್ದು, ಕೆಆರ್ ಪೇಟೆ ಸೇರಿದಂತೆ ಮೂರು ಕ್ಷೇತ್ರಗಳನ್ನು ನೀಡುವಂತೆ ಆಗ್ರಹ ವ್ಯಕ್ತಪಡಿಸಿದ್ದಾರೆ. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿಯೂ ಶೇ 50ರಷ್ಟು ಸ್ಥಾನಗಳನ್ನು ಬಿಜೆಪಿಗೆ ನೀಡಬೇಕು ಎಂಬ ಬೇಡಿಕೆ ಮುಂದಿಟ್ಟಿದ್ದಾರೆ.
ಕ್ಷೇತ್ರ ಹಂಚಿಕೆ ವಿಚಾರಕ್ಕೆ ಸಂಬಂಧಿಸಿದ ಚರ್ಚೆಗೆ ಮಾಜಿ ಸಚಿವ ನಾರಾಯಣಗೌಡ ಮತ್ತು ಮಾಜಿ ಶಾಸಕ ಪ್ರೀತಂಗೌಡ ನಾಂದಿ ಹಾಡಿದ್ದು, ಜೆಡಿಎಸ್ ನಾಯಕರ ಮೇಲೆ ಒತ್ತಡ ತರುವ ಪ್ರಯತ್ನ ನಡೆಸುತ್ತಿದ್ದಾರೆ. ಇದೇ ವೇಳೆ ಜೆಡಿಎಸ್ ನಾಯಕ ನಿಖಿಲ್ ಕುಮಾರಸ್ವಾಮಿ ಹೇಳಿಕೆಗಳ ಬಗ್ಗೆಯೂ ಬಿಜೆಪಿ ವಲಯದಲ್ಲಿ ಅಸಮಾಧಾನ ವ್ಯಕ್ತವಾಗಿದೆ.
ಅಭ್ಯರ್ಥಿ ಘೋಷಣೆ ಅಧಿಕಾರ ನಿಖಿಲ್ಗಿಲ್ಲವೆಂದ ಬಿಜೆಪಿ ನಾಯಕರು
2028ರ ಚುನಾವಣೆಯಲ್ಲಿ ಎಚ್ಟಿ ಮಂಜು ಅವರನ್ನು ಮತ್ತೊಮ್ಮೆ ಗೆಲ್ಲಿಸಬೇಕು ಎಂದು ಇತ್ತೀಚೆಗೆ ಕೆಆರ್ ಪೇಟೆಯಲ್ಲಿ ನಿಖಿಲ್ ಮನವಿ ಮಾಡಿದ್ದರು. ಈ ವಿಚಾರ ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗಿದೆ. ಅಭ್ಯರ್ಥಿ ಘೋಷಣೆ ಮಾಡುವ ಅಧಿಕಾರ ನಿಖಿಲ್ ಅವರಿಗೆ ಇಲ್ಲ ಎಂದು ಬಿಜೆಪಿ ಮುಖಂಡರು ತಿರುಗೇಟು ನೀಡಿದ್ದಾರೆ.
ನಿಖಿಲ್ ರಾಜಕೀಯ ಅಸ್ತಿತ್ವ ಸಾಬೀತುಪಡಿಸಲಿ: ಬಿಜೆಪಿ ನಾಯಕರ ಸವಾಲ್
ನಿಖಿಲ್ ಕುಮಾರಸ್ವಾಮಿ ನಿರಂತರವಾಗಿ ಸೋಲು ಅನುಭವಿಸಿರುವ ನಾಯಕರು. ಮೊದಲಿಗೆ ತಮ್ಮ ರಾಜಕೀಯ ಅಸ್ತಿತ್ವವನ್ನು ಸಾಬೀತುಪಡಿಸಿಕೊಳ್ಳಲಿ ಎಂದು ಬಿಜೆಪಿ ನಾಯಕರು ಸವಾಲು ಹಾಕಿದ್ದಾರೆ. ಏತನ್ಮಧ್ಯೆ, ನಿಖಿಲ್ ಅವರಿಂದ ಅಂಥ ಹೇಳಿಕೆಗಳು ಮುಂದುವರಿದರೆ ಮೈತ್ರಿ ಸಂಬಂಧಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.
ಇದನ್ನೂ ಓದಿ: ಜೆಡಿಎಸ್ನಲ್ಲಿ ಟಿಕೆಟ್ ಹಂಚಿಕೆ ಚರ್ಚೆ: ಜಿಟಿಡಿ ವಿರುದ್ಧ ಸ್ಪರ್ಧೆಗೆ ಸಿದ್ದ ಎಂದ ಸಾರಾ ಮಹೇಶ್
ಸ್ಥಳೀಯ ಸಂಸ್ಥೆ ಚುನಾವಣೆಗೂ ಮುನ್ನವೇ ಮೈತ್ರಿ ಪಕ್ಷಗಳ ನಡುವಿನ ಈ ಶೀತಲ ಸಮರ ಮುಂದಿನ ದಿನಗಳಲ್ಲಿ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ. 2028ರ ವಿಧಾನಸಭೆ ಚುನಾವಣೆಗೆ ಟಿಕೆಟ್ ಹಂಚಿಕೆ ವಿಚಾರ ಮಂಡ್ಯ ರಾಜಕೀಯದಲ್ಲಿ ಈಗಲೇ ಚರ್ಚೆಗೆ ಗ್ರಾಸವಾಗಿದೆ.