Headlines

ತಿಹಾರ್ ಜೈಲು ಪಾಲಾದ ಖ್ಯಾತ ಹಾಸ್ಯ ನಟ ರಾಜ್​ಪಾಲ್ ಯಾದವ್; ಕಾರಣ ಏನು? – Kannada News | Actor Rajpal Yadav sent to Tihar Jail in check bounce case

ಹಿಂದಿ ಚಿತ್ರರಂಗದ ಖ್ಯಾತ ಹಾಸ್ಯ ನಟ ರಾಜ್​​ಪಾಲ್ ಯಾದವ್ (Rajpal Yadav) ಅವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆರ್ಥಿಕ ಅಪರಾಧದ ಕಾರಣದಿಂದ ಅವರು ಜೈಲು ಪಾಲಾಗುವಂತಾಗಿದೆ. ಒಂದೂವರೆ ದಶಕದ ಹಿಂದೆ ಪಡೆದಿದ್ದ ಸಾಲವನ್ನು ಮರುಪಾವತಿ ಮಾಡಲಾಗದೇ ಇದ್ದಿದ್ದಕ್ಕಾಗಿ ಅವರನ್ನು ಜೈಲಿಗೆ ಕಳಿಸಲಾಗಿದೆ. ರಾಜ್​ಪಾಲ್ ಯಾದವ್ ಅವರು ಈಗ ತಿಹಾರ್ ಜೈಲು (Tihar Jail) ಸೇರಿದ್ದಾರೆ. ಇದು ಅವರ ಅಭಿಮಾನಿಗಳಿಗೆ ಬೇಸರ ಉಂಟು ಮಾಡಿದೆ. ಸಿನಿಮಾ ಮಾಡುವ ಸಲುವಾಗಿಯೇ ಸಾಲ ಪಡೆದಿದ್ದ ರಾಜ್​ಪಾಲ್ ಯಾದವ್ ಅವರು ಜೈಲುವಾಸ ಅನುಭವಿಸುತ್ತಿದ್ದಾರೆ.

ದೆಹಲಿ ಮೂಲದ ಉದ್ಯಮಿಯೊಬ್ಬರಿಂದ ರಾಜ್​ಪಾಲ್ ಯಾದವ್ ಅವರು 5 ಕೋಟಿ ರೂಪಾಯಿ ಸಾಲ ಪಡೆದಿದ್ದರು. ತಮ್ಮದೇ ನಿರ್ದೇಶನದ ‘ಅತಾ ಪತಾ ಲಾಪತಾ’ ಸಿನಿಮಾ ಸಲುವಾಗಿ ಅವರ ಸಾಲ ಮಾಡಿದ್ದರು. ಆದರೆ ಆ ಸಿನಿಮಾ ಸೋತಿತು. ಆದ್ದರಿಂದ ಅವರಿಗೆ ಆರ್ಥಿಕ ಸಂಕಷ್ಟ ಶುರು ಆಯಿತು. ಸಾಲ ತೀರಿಸಲು ರಾಜ್​ಪಾಲ್ ಯಾದವ್ ಅವರಿಗೆ ಸಾಧ್ಯವಾಗಲೇ ಇಲ್ಲ.

ಸಾಲ ಕೊಟ್ಟವರು ರಾಜ್​ಪಾಲ್ ಯಾದವ್ ಮೇಲೆ ಕೇಸ್ ಹಾಕಿದರು. ರಾಜ್​ಪಾಲ್ ಯಾದವ್ ನೀಡಿದ್ದ ಹಲವು ಚೆಕ್​​ಗಳು ಬೌನ್ಸ್ ಆಗಿದ್ದರಿಂದ ಅವರಿಗೆ 2018ರಲ್ಲೇ ಶಿಕ್ಷೆ ಪ್ರಕಟ ಆಯಿತು. 6 ತಿಂಗಳು ಸಾದಾ ಜೈಲು ಶಿಕ್ಷೆ ವಿಧಿಸಲಾಯಿತು. ಆ ಬಳಿಕವೂ ರಾಜ್​ಪಾಲ್ ಯಾದವ್ ಬುದ್ಧಿ ಕಲಿಯಲಿಲ್ಲ. ಸಾಲ ತೀರಿಸಲು ಅವರು ವಿಫಲರಾದರು.

ಒಂದೂವರೆ ದಶಕಗಳ ಕಾಲ ಎಳೆದಾಡಿಕೊಂಡು ಬಂದಿದ್ದ ಈ ಕೇಸ್ ಈಗ ಅಂತಿಮ ಘಟಕ್ಕೆ ಬಂದಿದೆ. ನೀವು ಕೂಡಲೇ ಶರಣಾಗಬೇಕು ಎಂದು ರಾಜ್​ಪಾಲ್ ಯಾದವ್ ಅವರಿಗೆ ಕೋರ್ಟ್ ಸೂಚನೆ ನೀಡಿತು. ಅದರಂತೆ, ರಾಜ್​ಪಾಲ್ ಯಾದವ್ ಅವರು ತಿಹಾರ್ ಜೈಲಿನ ಅಧಿಕಾರಿಗಳ ಎದುರು ಶರಣಾಗಿದ್ದಾರೆ. ಸಮಯಾವಕಾಶ ನೀಡುವಂತೆ ಅವರು ಸಲ್ಲಿಸಿದ ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದೆ.

ಇದನ್ನೂ ಓದಿ: Rajpal Yadav: 26,000 ರೂ. ನೀಡಿ ಹೇರ್​ಕಟ್​ ಮಾಡಿಸಿಕೊಂಡಿದ್ದ ರಾಜ್​ಪಾಲ್​ ಯಾದವ್​; ಹಾಸ್ಯ ನಟನ ಪ್ರಯತ್ನವೆಲ್ಲ ನೀರಲ್ಲಿ ಹೋಮ

2010ರಲ್ಲಿ ರಾಜ್​ಪಾಲ್ ಯಾದವ್ ಪಡೆದಿದ್ದ 5 ಕೋಟಿ ರೂಪಾಯಿ ಸಾಲ ಈಗ 9 ಕೋಟಿ ರೂಪಾಯಿ ಆಗಿ ಬೆಳೆದಿದೆ. ಇದನ್ನು ಮರುಪಾವತಿ ಮಾಡಲು ಅವರಿಗೆ ಹಲವು ಅವಕಾಶಗಳನ್ನು ನೀಡಲಾಗಿತ್ತು. ಆದರೆ ಅದನ್ನು ಅವರು ಗಂಭೀರವಾಗಿ ಪರಿಗಣಿಸಿಲ್ಲ. ಆದ್ದರಿಂದ ಈ ಬಾರಿ ಜೈಲು ಶಿಕ್ಷೆ ವಿಧಿಸಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *