ಫೆಬ್ರವರಿ 6, ಶುಕ್ರವಾರದಂದು ಆಯುಷ್ ಮ್ಹಾತ್ರೆ ನೇತೃತ್ವದ ಭಾರತ ಯುವ ತಂಡವು ಇಂಗ್ಲೆಂಡ್ ತಂಡವನ್ನು ಏಕಪಕ್ಷೀಯವಾಗಿ ಸೋಲಿಸುವ ಮೂಲಕ 2026 ರ ಅಂಡರ್-19 ವಿಶ್ವಕಪ್ ಟ್ರೋಫಿಯನ್ನು ಗೆದ್ದುಕೊಂಡಿತು. ಭಾರತವು 19 ವರ್ಷದೊಳಗಿನವರ ಚಾಂಪಿಯನ್ ಆಗಿದ್ದು ಇದು ಆರನೇ ಬಾರಿ. ಈ ಐತಿಹಾಸಿಕ ಗೆಲುವಿನ 2 ದಿನಗಳ ನಂತರ, ನಾಯಕ ಆಯುಷ್ ಮ್ಹಾತ್ರೆ ಮತ್ತು ಭಾರತೀಯ ತಂಡದ ಆಟಗಾರರು ತವರಿಗೆ ಮರಳಿದ್ದಾರೆ. ಮುಂಬೈನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಂದಿಳಿದ ಯುವ ಚಾಂಪಿಯನ್ ಪಡೆಗೆ ಭವ್ಯ ಸ್ವಾಗತ ನೀಡಲಾಯಿತು.
ಯುವ ತಂಡವನ್ನು ನೋಡಲು ಕ್ರಿಕೆಟ್ ಅಭಿಮಾನಿಗಳು ವಿಮಾನ ನಿಲ್ದಾಣದಲ್ಲಿ ನೆರೆದಿದ್ದರು. ಅಲ್ಲದೆ, ಆಯುಷ್ ಅವರ ಕುಟುಂಬ ಮತ್ತು ಉಪನಾಯಕ ವಿಹಾನ್ ಮಲ್ಹೋತ್ರಾ ಅವರ ಕುಟುಂಬ ವಿಶ್ವ ಚಾಂಪಿಯನ್ ಪುತ್ರರನ್ನು ಸ್ವಾಗತಿಸಲು ವಿಮಾನ ನಿಲ್ದಾಣದಲ್ಲಿ ಹಾಜರಿದ್ದರು. ವಿಮಾನ ನಿಲ್ದಾಣಕ್ಕೆ ಆಗಮಿಸಿದ ಆಯುಷ್ಗೆ ಭವ್ಯ ಸ್ವಾಗತ ನೀಡಲಾಯಿತು. ಅಭಿಮಾನಿಗಳು ನೀಡಿದ ಸ್ವಾಗತದಿಂದ ಇಡೀ ತಂಡವೇ ಅಚ್ಚರಿಗೊಳಗಾಯಿತು.
ಜಿಂಬಾಬ್ವೆಯ ಹರಾರೆಯಲ್ಲಿ ನಡೆದ ಐಸಿಸಿ ಅಂಡರ್-19 ವಿಶ್ವಕಪ್ 2026 ರ ಫೈನಲ್ನಲ್ಲಿ ಇಂಗ್ಲೆಂಡ್ ಅಂಡರ್-19 ತಂಡವನ್ನು 100 ರನ್ಗಳಿಂದ ಸೋಲಿಸಿ ಭಾರತ ಆರನೇ ಬಾರಿಗೆ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಭಾರತ 9 ವಿಕೆಟ್ಗಳ ನಷ್ಟಕ್ಕೆ 411 ರನ್ ಗಳಿಸಿತು. ವೈಭವ್ ಸೂರ್ಯವಂಶಿ 80 ಎಸೆತಗಳಲ್ಲಿ 15 ಬೌಂಡರಿ ಮತ್ತು 15 ಸಿಕ್ಸರ್ಗಳೊಂದಿಗೆ 175 ರನ್ ಗಳಿಸಿದರು. ನಾಯಕ ಆಯುಷ್ ಮಾತ್ರೆ 51 ಎಸೆತಗಳಲ್ಲಿ 53 ರನ್ ಸೇರಿಸಿದರೆ, ಅಭಿಗ್ಯಾನ್ ಕುಂಡು 31 ಎಸೆತಗಳಲ್ಲಿ 40 ರನ್ ಗಳಿಸಿದರು. ಇತ್ತ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ಪರ ಕ್ಯಾಲೆಬ್ ಫಾಕ್ನರ್ 115 ರನ್ಗಳ ಇನ್ನಿಂಗ್ಸ್ ಆಡುವ ಮೂಲಕ ಏಕಾಂಗಿ ಹೋರಾಟ ನೀಡಿದರಾದರೂ ತಂಡಕ್ಕೆ ಗೆಲುವು ತಂದುಕೊಡಲು ಅದು ಸಾಧ್ಯವಾಗಲಿಲ್ಲ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ