Headlines

ಕಾಂಗ್ರೆಸ್ ಶಾಸಕರ ವಿದೇಶ ಪ್ರವಾಸಕ್ಕೆ ಪಕ್ಷದಲ್ಲೇ ಅಸಮಾಧಾನ: ವರದಿ ಕೇಳಿದ ಹೈಕಮಾಂಡ್ – Kannada News | Congress MLAs Foreign Tour Row: High Command Seeks Report Over Australia–New Zealand Visit Controversy in Karnataka

ಶಾಸಕರ ವಿದೇಶ ಪ್ರವಾಸ: ವರದಿ ಕೇಳಿದ ಹೈಕಮಾಂಡ್Image Credit source: TV9 Network

ಬೆಂಗಳೂರು, ಫೆಬ್ರವರಿ 12: ಕರ್ನಾಟಕ ರಾಜಕಾರಣದಲ್ಲಿ ಕಾಂಗ್ರೆಸ್ (Congress) ಶಾಸಕರ ವಿದೇಶ ಪ್ರವಾಸ (Foriegn Trip) ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. ಶಾಸಕರ ಫಾರಿನ್ ಟ್ರಿಪ್​ಗೆ ಪಕ್ಷದೊಳಗೇ ಅಸಮಾಧಾನದ ಧ್ವನಿ ಕೇಳಿಬರುತ್ತಿದೆ. ಆಸ್ಟ್ರೇಲಿಯಾ ಹಾಗೂ ನ್ಯೂಜಿಲ್ಯಾಂಡ್‌ಗೆ ಯೋಜಿಸಲಾದ ಈ ಪ್ರವಾಸದ ಉದ್ದೇಶವೇನು ಎಂಬುದರ ಬಗ್ಗೆಯೇ ಸ್ಪಷ್ಟತೆ ಇಲ್ಲ ಎನ್ನಲಾಗಿದೆ. ಇದು ಹೈಕಮಾಂಡ್‌ ಮಟ್ಟದಲ್ಲಿ ಗಮನ ಸೆಳೆದಿದೆ. ವಿದೇಶ ಪ್ರವಾಸದ ವಿಚಾರ ಬಹಿರಂಗವಾದ ಬೆನ್ನಲ್ಲೇ ಕಾಂಗ್ರೆಸ್ ಹೈಕಮಾಂಡ್ ರಾಜ್ಯ ನಾಯಕರಿಂದ ಮಾಹಿತಿ ಕೇಳಿದೆ ಎಂದು ಮೂಲಗಳು ತಿಳಿಸಿವೆ.

ಪಶುಸಂಗೋಪನಾ ಇಲಾಖೆಯ ಅಧ್ಯಯನ ಪ್ರವಾಸದ ಹೆಸರಿನಲ್ಲಿ ಕೆಲವು ಶಾಸಕರು ವಿದೇಶಕ್ಕೆ ತೆರಳಲು ಸಿದ್ಧರಾಗಿರುವುದು ದೃಢಪಟ್ಟಿದೆ. ಯಾವೆಲ್ಲ ಶಾಸಕರು ವಿದೇಶ ಪ್ರವಾಸ ಕೈಗೊಳ್ಳುತ್ತಾರೆ ಎಂಬುದೂ ಬಹಿರಂಗವಾಗಿದೆ. ಆದರೆ, ಆರಂಭದಲ್ಲಿ ಇದು ಸರ್ಕಾರಿ ಪ್ರವಾಸ ಎಂದು ಹೇಳಲಾಗಿತ್ತು. ನಂತರ ಖಾಸಗಿ ಪ್ರವಾಸವಾಗಿ ಬದಲಾಗುತ್ತಿದೆಯೇ ಎಂಬ ಅನುಮಾನಗಳು ಪಕ್ಷದೊಳಗೇ ಮೂಡಿವೆ. ಹೀಗಾಗಿ, ಕಾಂಗ್ರೆಸ್ ನಾಯಕರು ಪ್ರವಾಸದ ಕುರಿತು ಸಂಪೂರ್ಣ ವರದಿ ಸಲ್ಲಿಸಬೇಕೆಂದು ಹೈಕಮಾಂಡ್ ಸೂಚನೆ ನೀಡಿರುವುದಾಗಿ ತಿಳಿದುಬಂದಿದೆ.

ಪವರ್ ಪಾಲಿಟಿಕ್ಸ್ ಹೊತ್ತಲ್ಲಿ ಟೂರ್ ಪಾಲಿಟಿಕ್ಸ್

ರಾಜ್ಯದಲ್ಲಿ ಜನಸಾಮಾನ್ಯರ ಸಮಸ್ಯೆಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ಶಾಸಕರ ವಿದೇಶಿ ಪ್ರವಾಸ ಅಗತ್ಯವಿತ್ತೇ ಎಂಬ ಪ್ರಶ್ನೆ ಕೂಡ ಪಕ್ಷದೊಳಗೆ ಚರ್ಚೆಗೆ ಕಾರಣವಾಗಿದೆ. ‘ಪವರ್ ಪಾಲಿಟಿಕ್ಸ್ ನಡೆಯುತ್ತಿರುವ ಹೊತ್ತಿನಲ್ಲಿ ಟೂರ್ ಪಾಲಿಟಿಕ್ಸ್ ಬೇಕಿತ್ತಾ?’ ಎಂಬ ಅಸಮಾಧಾನ ಕೆಲ ನಾಯಕರಿಂದ ವ್ಯಕ್ತವಾಗಿದೆ ಎಂದು ಮೂಲಗಳು ತಿಳಿಸಿವೆ. ಅಧ್ಯಯನ ಪ್ರವಾಸವೇ ಆಗಿದ್ದರೆ ಸರ್ಕಾರದಿಂದ ಅಧಿಕೃತ ಅನುಮತಿ ಪಡೆದಿದ್ದೀರಾ ಎಂದು ಹೈಕಮಾಂಡ್ ಪ್ರಶ್ನಿಸಿದೆ ಎನ್ನಲಾಗಿದೆ.

ಇದೊಂದೆಡೆ, ಇದು ಸಂಪೂರ್ಣವಾಗಿ ಅಧ್ಯಯನ ಪ್ರವಾಸ ಎಂದು ಕೆಲವು ಶಾಸಕರು ಸ್ಪಷ್ಟಪಡಿಸಿದರೆ, ಇನ್ನೂ ಕೆಲವರು ಪ್ರವಾಸದ ಉದ್ದೇಶದ ಬಗ್ಗೆ ಗೊಂದಲಮಯ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈ ಪ್ರವಾಸಕ್ಕೆ ಸರ್ಕಾರದಿಂದ ಎನ್‌ಒಸಿ ನೀಡಲು ಸಿಎಂ ಕಚೇರಿ ಮುಂದಾಗಿತ್ತು ಎಂಬ ಮಾತುಗಳೂ ಕೇಳಿಬರುತ್ತಿವೆ. ಅಲ್ಲದೆ ಆಸ್ಟ್ರೇಲಿಯಾ ಹಾಗೂ ನ್ಯೂಜಿಲ್ಯಾಂಡ್ ಕೌನ್ಸಲೇಟ್‌ಗಳಿಗೆ ವೀಸಾ ಪ್ರಕ್ರಿಯೆಗಾಗಿ ಸರ್ಕಾರದಿಂದ ಪತ್ರ ರವಾನೆಯಾಗಿದೆ ಎಂಬ ಮಾಹಿತಿ ಕೂಡ ಹರಿದಾಡುತ್ತಿದೆ.

ಇದನ್ನೂ ಓದಿ: ನಾಯಕತ್ವ ಜಂಜಾಟದ ನಡುವೆ ಸದ್ದು ಮಾಡಿದ ಶಾಸಕರ ಫಾರಿನ್ ಟ್ರಪ್: ಈ ಪ್ರವಾಸದ ಹಿಂದಿನ ಗುಟ್ಟೇನು?

ಒಟ್ಟಿನಲ್ಲಿ ಕಾಂಗ್ರೆಸ್ ಶಾಸಕರ ವಿದೇಶಿ ಪ್ರವಾಸ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ದಾರಿ ಮಾಡಿಕೊಟ್ಟಿದ್ದು, ಅಧ್ಯಯನ ಪ್ರವಾಸವೇ ಅಥವಾ ಖಾಸಗಿ ಪ್ರವಾಸವೇ ಎಂಬ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ಸಿಗಬೇಕಿದೆ. ಈ ನಡುವೆ ಹೈಕಮಾಂಡ್ ಸಂಪೂರ್ಣ ವರದಿ ಕೇಳಿರುವುದು ಪ್ರಕರಣಕ್ಕೆ ಮತ್ತಷ್ಟು ಟ್ವಿಸ್ಟ್ ಕೊಟ್ಟಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *