ಪ್ರತಿಯೊಬ್ಬರೂ ತಮ್ಮ ತ್ವಚೆಯನ್ನು ಆರೋಗ್ಯಕರ ಮತ್ತು ಕಾಂತಿಯುತವಾಗಿಡಲು (glowing skin) ಬಯಸುತ್ತಾರೆ. ಇದಕ್ಕಾಗಿ ದುಬಾರಿ ಉತ್ಪನ್ನಗಳ ಮೊರೆ ಹೋಗ್ತಾರೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ಕ್ರೀಮ್ಗಳು, ಔಷಧಿಗಳು ಮತ್ತು ಸೌಂದರ್ಯವರ್ಧಕಗಳು ಚರ್ಮಕ್ಕೆ ತಾತ್ಕಾಲಿಕ ಹೊಳಪನ್ನು ನೀಡಬಹುದು, ಆದರೆ ಇವು ಹೆಚ್ಚು ಪರಿಣಾಮಕಾರಿಯಲ್ಲ. ಹಾಗಾಗಿ ರಾಸಾಯನಿಕ ಉತ್ಪನ್ನಗಳ ಮೇಲೆ ಹೆಚ್ಚು ಅವಲಂಬಿತರಾಗುವ ಬದಲು, ಉತ್ಕರ್ಷಣ ನಿರೋಧಕಗಳು, ಜೀವಸತ್ವಗಳು, ಆರೋಗ್ಯಕರ ಕೊಬ್ಬುಗಳು ಮತ್ತು ಜಲಸಂಚಯನದಿಂದ ಸಮೃದ್ಧವಾಗಿರುವ ಆಹಾರವನ್ನು ಸೇವಿಸುವ ಮೂಲಕ ತ್ವಚೆಯ ಕಾಂತಿ, ಆರೋಗ್ಯ ಎರಡನ್ನೂ ಹೆಚ್ಚಿಸಬಹುದು.
ತ್ವಚೆಯ ಕಾಂತಿಯನ್ನು ಹೆಚ್ಚಿಸಲು ಯಾವ ಆಹಾರಗಳನ್ನು ಸೇವಿಸಬೇಕು?
ದುಬಾರಿ ಉತ್ಪನ್ನಗಳಿಗೆ ಖರ್ಚು ಮಾಡುವ ಬದಲು ಸರಿಯಾದ ಆಹಾರ ಕ್ರಮವನ್ನು ಪಾಲಿಸುವ ಮೂಲಕ ನಾವು ನಮ್ಮ ಚರ್ಮಕ್ಕೆ ಪ್ರತಿದಿನ ಸಾಕಷ್ಟು ಮತ್ತು ಸೂಕ್ತವಾದ ಪೋಷಣೆಯನ್ನು ಒದಗಿಸಬಹುದು.
ವಿಟಮಿನ್ ಸಿ ಸಮೃದ್ಧವಾಗಿರುವ ಹಣ್ಣುಗಳು: ವಿಟಮಿನ್ ಸಿ ಚರ್ಮಕ್ಕೆ ಅತ್ಯಂತ ಶಕ್ತಿಶಾಲಿ ಉತ್ಕರ್ಷಣ ನಿರೋಧಕಗಳಲ್ಲಿ ಒಂದಾಗಿದೆ. ಇದು ಕಾಲಜನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ, ವರ್ಣದ್ರವ್ಯವನ್ನು ಕಡಿಮೆ ಮಾಡುತ್ತದೆ ಮತ್ತು ಚರ್ಮವನ್ನು ಬಿಸಿಲಿನ ಶಾಖದಿಂದ ರಕ್ಷಿಸುತ್ತದೆ. ಹಾಗಾಗಿ ನೀವು ಕಿತ್ತಳೆ, ಕಿವಿ, ಪಪ್ಪಾಯಿ, ಸ್ಟ್ರಾಬೆರಿ ಮತ್ತು ಪೇರಳೆಯಂತಹ ವಿಟಮಿನ್ ಸಿ ಯಲ್ಲಿ ಸಮೃದ್ಧವಾಗಿರುವ ಹಣ್ಣುಗಳನ್ನು ಸೇವನೆ ಮಾಡಿ.
ಡ್ರೈಫ್ರೂಟ್ಸ್: ಬಾದಾಮಿ, ವಾಲ್ನಟ್ಸ್, ಅಗಸೆ ಬೀಜಗಳು ಮತ್ತು ಚಿಯಾ ಬೀಜಗಳು ಚರ್ಮವನ್ನು ಮೃದುವಾಗಿಡಲು ಮತ್ತು ಶುಷ್ಕತೆಯನ್ನು ಹೋಗಲಾಡಿಸಲು ಪರಿಣಾಮಕಾರಿಯಾಗಿದೆ. ಏಕೆಂದರೆ ಅವುಗಳಲ್ಲಿ ಒಮೆಗಾ-3 ಕೊಬ್ಬಿನಾಮ್ಲಗಳು ಮತ್ತು ವಿಟಮಿನ್ ಇ ಸಮೃದ್ಧವಾಗಿವೆ. ಹಾಗಾಗಿ ಅಗತ್ಯ ಪ್ರಮಾಣದಲ್ಲಿ ಈ ಡ್ರೈಫ್ರೂಟ್ಸ್ಗಳನ್ನು ಸೇವನೆ ಮಾಡುವ ಅಭ್ಯಾಸ ಬೆಳೆಸಿಕೊಳ್ಳಿ.
ಹಸಿರು ಎಲೆ ತರಕಾರಿಗಳು: ಪಾಲಕ್, ಮೆಂತ್ಯ, ಬ್ರೊಕೊಲಿಯಂತಹ ಹಸಿರು ತರಕಾರಿಗಳು ಕಬ್ಬಿಣ, ಫೋಲೇಟ್ ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿವೆ. ಅವು ದೇಹವನ್ನು ನಿರ್ವಿಷಗೊಳಿಸುತ್ತವೆ ಮತ್ತು ರಕ್ತ ಪರಿಚಲನೆ ಸುಧಾರಿಸುತ್ತವೆ ಮತ್ತು ಮುಖ್ಯವಾಗಿ ಚರ್ಮಕ್ಕೆ ನೈಸರ್ಗಿಕ ಹೊಳಪನ್ನು ನೀಡುತ್ತವೆ. ಹಾಗಾಗಿ ಇವುಗಳನ್ನು ಸೇವನೆ ಮಾಡಿ.
ಸಿಹಿ ಗೆಣಸು: ಇದರಲ್ಲಿರುವ ಉತ್ಕರ್ಷಣ ನಿರೋಧಕಗಳು ಮತ್ತು ಜೀವಸತ್ವಗಳು ಚರ್ಮವನ್ನು ಒಳಗಿನಿಂದ ಪೋಷಿಸುತ್ತವೆ. ಸಿಹಿ ಗೆಣಸನ್ನು ನಿಯಮಿತವಾಗಿ ತಿನ್ನುವುದರಿಂದ, ತ್ವಚೆಯ ಕಾಂತಿ ಹೆಚ್ಚಾಗುತ್ತದೆ ಮತ್ತು ಸುಕ್ಕುಗಳು ಹೋಗಲಾಡುತ್ತವೆ.
ಇದನ್ನೂ ಓದಿ: ತಾಜಾ ಮೆಂತ್ಯ ಸೊಪ್ಪು ಸಿಕ್ರೆ ಮನೆಯಲ್ಲಿಯೇ ಈ ರೀತಿ ಕಸೂರಿ ಮೇಥಿ ತಯಾರಿಸಿ
ದಾಳಿಂಬೆ: ದಾಳಿಂಬೆ ಆರೋಗ್ಯದ ಖಜಾನೆ ಮಾತ್ರವಲ್ಲ, ಸುಂದರವಾದ ಚರ್ಮದ ರಹಸ್ಯವೂ ಹೌದು. ದಾಳಿಂಬೆಯ ನಿಯಮಿತ ಸೇವನೆಯು ಚರ್ಮವನ್ನು ಕಾಂತಿಯುತಗೊಳಿಸಲು ಸಹಾಯ ಮಾಡುತ್ತದೆ ಮತ್ತು ಸುಕ್ಕುಗಳು ಮತ್ತು ಸೂಕ್ಷ್ಮ ರೇಖೆಗಳನ್ನು ಕಡಿಮೆ ಮಾಡುತ್ತದೆ.
ಪಪ್ಪಾಯಿ: ಪಪ್ಪಾಯಿ ರುಚಿಕರ ಮಾತ್ರವಲ್ಲದೆ ನಮ್ಮ ದೇಹಕ್ಕೆ ಅತ್ಯಂತ ಪ್ರಯೋಜನಕಾರಿಯಾಗಿದೆ. ಇದರಲ್ಲಿರುವ ಕಿಣ್ವಗಳು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಹೊಟ್ಟೆಯನ್ನು ಸ್ವಚ್ಛವಾಗಿಡುತ್ತದೆ. ಪಪ್ಪಾಯಿ ದೇಹದಿಂದ ವಿಷವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ, ಇದು ನಮ್ಮ ಚರ್ಮದ ಮೇಲೆ ನೇರ ಪರಿಣಾಮ ಬೀರುತ್ತದೆ.
ಹೈಡ್ರೇಟಿಂಗ್ ಆಹಾರಗಳು, ಮೊಸರು: ಸೌತೆಕಾಯಿ, ಕಲ್ಲಂಗಡಿ ನೀರಿನಲ್ಲಿ ಸಮೃದ್ಧವಾಗಿದ್ದು, ಇವು ದಿನವಿಡೀ ನಿಮ್ಮ ಚರ್ಮವನ್ನು ಹೈಡ್ರೇಟ್ ಆಗಿಡುತ್ತವೆ. ಮತ್ತು ಮೊಸರಿನಂತಹ ಪ್ರೋಬಯಾಟಿಕ್ ಆಹಾರಗಳು ಕರುಳು ಸೇರಿದಂತೆ ಆರೋಗ್ಯಕರ ಜೀರ್ಣಾಂಗ ವ್ಯವಸ್ಥೆಯನ್ನು ಉತ್ತೇಜಿಸುತ್ತವೆ, ಅಲ್ಲದೆ ಇವು ಮೊಡವೆ ಉಂಟುಮಾಡುವ ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡುತ್ತವೆ, ತ್ವಚೆಯ ಕಾಂತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ