Headlines

ಬೆಂಗಳೂರಿನಲ್ಲಿ ಬಂದ್ ಆಗುತ್ತಾ ಕಸ ಸಂಗ್ರಹಣೆ? ಡಂಪಿಂಗ್‌ ಯಾರ್ಡ್‌ಗಳಲ್ಲಿ ಕಸದ ಲಾರಿಗಳಿಗೆ ದಿಗ್ಬಂಧನ – Kannada News | Garbage Collection Disruption in Bengaluru as Villagers Block Dumping Yards, Waste Trucks Stalled Across City

ಬೆಂಗಳೂರು, ಫೆಬ್ರವರಿ 18: ಬೆಂಗಳೂರಿನಲ್ಲಿ (Bangalore) ಪೌರಕಾರ್ಮಿಕರು ಒಂದು ದಿನ ಕಸ ಎತ್ತಿಲ್ಲ ಎಂದರೂ ಗಬ್ಬೆದ್ದು ನಾರಲು ಶುರುವಾಗುತ್ತದೆ. ರಸ್ತೆ ರಸ್ತೆಗಳಲ್ಲೂ ಕಸ ಚೆಲ್ಲಾಡಿರುತ್ತದೆ. ಪ್ರತಿನಿತ್ಯ ಬೆಂಗಳೂರು ನಗರದಾದ್ಯಂತ ಸಂಗ್ರಹವಾಗುವ ಸಾವಿರಾರು ಟನ್ ಕಸವನ್ನು ವಿಲೇವಾರಿ ಮಾಡುವುದೇ ಸವಾಲು. ಇಂಥದ್ದರ ನಡುವೆ ಬೆಂಗಳೂರಿನಲ್ಲಿ ಮತ್ತೆ ಕಸದ ಸಮಸ್ಯೆ ಸೃಷ್ಟಿಯಾಗುವ ಆತಂಕ ಎದುರಾಗಿದೆ. ಇದಕ್ಕೆ ಕಾರಣ ನೂರಾರು ಕಸತುಂಬಿರುವ ಲಾರಿಗಳು ನಿಂತಲ್ಲೇ ನಿಲ್ಲುವಂತಾಗಿರುವುದು! ಬೆಂಗಳೂರಿನ ಕಸವನ್ನು ತುಂಬಿಕೊಂಡು ವಿಲೇವಾರಿಗೆ ಹೊರಟ್ಟಿದ್ದ ಲಾರಿಗಳಿಗೆ ಗ್ರಾಮಸ್ಥರು ತಡೆ ನೀಡಿದ್ದಾರೆ. ಮಹದೇವಪುರ ವ್ಯಾಪ್ತಿಯ ಮಿಟ್ಟಗಾನಹಳ್ಳಿ, ಬೆಳ್ಳಹಳ್ಳಿ ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ತೆರಳುತ್ತಿದ್ದ ಲಾರಿಗಳಿಗೆ ಅಲ್ಲಿನ ಸ್ಥಳೀಯರು ದಿಗ್ಬಂಧನ ಹಾಕಿದ್ದಾರೆ.

ಗ್ರಾಮ ಅಭಿವೃದ್ದಿ ನಿಧಿ ಕೊಡಲಿಲ್ಲವೆಂದು ಆಕ್ರೋಶ

2 ವರ್ಷಗಳಿಂದ ಗ್ರಾಮ ಅಭಿವೃದ್ಧಿ ನಿಧಿ ಕೊಡಲಿಲ್ಲ ಎಂದು ಜಿಬಿಎ ವಿರುದ್ಧ ಮಿಟ್ಟಗಾನಹಳ್ಳಿ, ಬೆಳ್ಳಹಳ್ಳಿ ಗ್ರಾಮಸ್ಥರು ತಿರುಗಿಬಿದ್ದಿದ್ದಾರೆ. ಸ್ಥಳೀಯ ಶಾಸಕಿ ಮಂಜುಳ ಅರವಿಂದ ಲಿಂಬಾವಳಿ ಸೂಚನೆ ಮೇರೆಗೆ ಗ್ರಾಮಸ್ಥರು ಕಸದ ಲಾರಿಗಳನ್ನು ತಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಗ್ರಾಮಸ್ಥರ ಪ್ರತಿಭಟನೆ ಮುಂದುವರಿದಿದ್ದೇ ಆದಲ್ಲಿ ಬೆಂಗಳೂರಿನಲ್ಲಿ ಕಸದ ಸಮಸ್ಯೆ ಉಲ್ಬಣವಾಗುವುದು ನಿಶ್ಚಿತವಾಗಿದೆ.

ಬಾಗಲೂರಿನಲ್ಲೂ ಕಸದ ಲಾರಿಗಳಿಗೆ ತಡೆ: ದೊಡ್ಡಬಳ್ಳಾಪುರದಲ್ಲೂ ಕಸದ ಲಾರಿಗಳಿಗೆ ಬ್ರೇಕ್!

ಬಾಗಲೂರು ರಸ್ತೆಯಲ್ಲಿ ಬಾಲಕನ ದುರ್ಮರಣ ಬಳಿಕ ಸ್ಥಳೀಯರು ರೊಚ್ಚಿಗೆದ್ದಿದ್ದಾರೆ. ಕಸ ಸಾಗಿಸುತ್ತಿದ್ದ ಲಾರಿಗೆ ತಡೆಯೊಡ್ಡಿದ್ದಾರೆ. ಹೀಗಾಗಿ ಇಲ್ಲೂ ಗಾರ್ಬೆಜ್ ತುಂಬಿದ ಲಾರಿಗಳು ನಿಂತಲ್ಲೇ ನಿಲ್ಲುವಂತಾಗಿವೆ.
ಇನ್ನು ಮಿಟ್ಟಗಾನಹಳ್ಳಿ, ಬೆಳ್ಳಹಳ್ಳಿ ಗ್ರಾಮಗಳಲ್ಲಿ ಕಸ ವಿಲೇವಾರಿಗೆ ಬ್ರೇಕ್ ಬೀಳುತ್ತಿದ್ದಂತೆಯೇ, ಹೆಚ್ಚುವರಿಯಾಗಿ 400 ಗಾಡಿಗಳನ್ನು ದೊಡ್ಡಬಳ್ಳಾಪುರದ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಕಳಿಸಲು ಪ್ಲ್ಯಾನ್ ಮಾಡಲಾಗಿತ್ತು. ಇದನ್ನು ಅರಿತ ಶಾಸಕ ಧೀರಜ್‌ ಮುನಿರಾಜು ಮಂಕಲಾಳ ಬಳಿ ಕಸದ ಲಾರಿಗಳಿಗೆ ತಡೆಯೊಡ್ಡಿದ್ದಾರೆ.

ಇದನ್ನೂ ಓದಿ: ದ್ವಿಚಕ್ರ ವಾಹನಕ್ಕೆ ಟಿಪ್ಪರ್ ಡಿಕ್ಕಿಯಾಗಿ ಮಹಿಳೆ ಸಾವು, ಮಗ ಬದುಕಿದ್ದೇ ಪವಾಡ!

ಒಟ್ಟಾರೆಯಾಗಿ ತ್ಯಾಜ್ಯ ಸಂಸ್ಕರಣಾ ಘಟಕದತ್ತ ತೆರಳುತ್ತಿದ್ದ ಲಾರಿಗಳೆಲ್ಲ ನಿಂತಲ್ಲೇ ನಿಂತಿವೆ. ಇದರಿಂದಾಗಿ ಬೆಂಗಳೂರಿನಲ್ಲಿ ಇವತ್ತು ಕಸ ಸಂಗ್ರಹದ ಮೇಲೆ ಪರಿಣಾಮ ಬೀರಲಿದೆ.

ವರದಿ: ಭೀಮಪ್ಪ ಪಾಟಿಲ್ ಚಿಕ್ಕಬಳ್ಳಾಪುರ ಹಾಗೂ ಲಕ್ಷ್ಮೀ ನಾರಾಯಣ, ಟಿವಿ9 ಬೆಂಗಳೂರು

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *