ನವದೆಹಲಿ, ಫೆಬ್ರವರಿ 18: ದೇಶಭ್ರಷ್ಟ ವಿಜಯ್ ಮಲ್ಯ (Vijay Mallya) ಒಂದುವೇಳೆ ತನ್ನ ವಿರುದ್ಧದ ಕಾನೂನಿನ ಅರ್ಜಿಯ ವಿಚಾರಣೆಯಲ್ಲಿ ಪಾಲ್ಗೊಳ್ಳುವ ಇಚ್ಛೆಯನ್ನು ಹೊಂದಿದ್ದರೆ ಅವರು ಭಾರತಕ್ಕೆ ಮರಳಬೇಕು, ನ್ಯಾಯಾಲಯದ ವಿಚಾರಣೆಗೆ ಹಾಜರಾಗಬೇಕು ಎಂದು ಬಾಂಬೆ ಹೈಕೋರ್ಟ್ ತಿಳಿಸಿತ್ತು. ಮಾಜಿ ಮದ್ಯದ ದೊರೆ ವಿಜಯ್ ಮಲ್ಯ ಇಂದು ಬಾಂಬೆ ಹೈಕೋರ್ಟ್ಗೆ ಇದಕ್ಕೆ ಉತ್ತರ ತಿಳಿಸಿದ್ದು, ತಾನು ಯಾವಾಗ ಭಾರತಕ್ಕೆ ಮರಳುತ್ತೇನೆ ಎಂಬುದನ್ನು ನಿರ್ದಿಷ್ಟವಾಗಿ ತಿಳಿಸುವ ಸ್ಥಿತಿಯಲ್ಲಿಲ್ಲ ಎಂದು ಇಂಗ್ಲೆಂಡ್ನಲ್ಲಿ ಹೊರಡಿಸಲಾದ ನ್ಯಾಯಾಲಯದ ಆದೇಶಗಳನ್ನು ಉಲ್ಲೇಖಿಸಿ ಹೇಳಿದ್ದಾರೆ.
ವಿಜಯ್ ಮಲ್ಯ ಅವರ ಅರ್ಜಿಯು ಪರಾರಿಯಾದ ಆರ್ಥಿಕ ಅಪರಾಧಿಗಳ (FEO) ಕಾಯ್ದೆಯ ನಿಬಂಧನೆಗಳನ್ನು ಪ್ರಶ್ನಿಸಿದೆ. ಮುಖ್ಯ ನ್ಯಾಯಮೂರ್ತಿ ಶ್ರೀ ಚಂದ್ರಶೇಖರ್ ನೇತೃತ್ವದ ಬಾಂಬೆ ಹೈಕೋರ್ಟ್ ಪೀಠವು ಮಲ್ಯ ಅವರಿಗೆ ಮರಳಲು ಉದ್ದೇಶಿಸಿದೆಯೇ ಎಂಬುದನ್ನು ಸ್ಪಷ್ಟಪಡಿಸಲು ಅಂತಿಮ ಅವಕಾಶವನ್ನು ನೀಡಿತು. “ನೀವು ಹಿಂತಿರುಗಲೇಬೇಕು. ನೀವು ವಾಪಾಸ್ ಬರದಿದ್ದರೆ, ನಾವು ನಿಮ್ಮ ಅರ್ಜಿಯ ವಿಚಾರಣೆ ನಡೆಸಲು ಸಾಧ್ಯವಿಲ್ಲ. ನೀವು ನ್ಯಾಯಾಲಯದ ಪ್ರಕ್ರಿಯೆಯಿಂದ ತಪ್ಪಿಸಿಕೊಳ್ಳುತ್ತಿದ್ದೀರಿ. ಆದ್ದರಿಂದ ನೀವು ನ್ಯಾಯಾಲಯದ ವಿಚಾರಣೆಗಳನ್ನು ಉದ್ದೇಶಪೂರ್ವಕವಾಗಿ ತಪ್ಪಿಸುತ್ತಾ ಪರಿಹಾರವನ್ನು ಪಡೆಯಲು ಸಾಧ್ಯವಿಲ್ಲ. ಆದರೆ, ನ್ಯಾಯಯುತವಾಗಿ, ನಾವು ನಿಮ್ಮ ಪ್ರಕರಣವನ್ನು ವಜಾಗೊಳಿಸುತ್ತಿಲ್ಲ. ನಿಮಗೆ ಮತ್ತೊಂದು ಅವಕಾಶವನ್ನು ನೀಡುತ್ತಿದ್ದೇವೆ” ಎಂದು ಬಾಂಬೆ ಹೈಕೋರ್ಟ್ ಹೇಳಿತ್ತು.
ಇದನ್ನೂ ಓದಿ: ದೇಶಭ್ರಷ್ಟರಿಬ್ಬರ ಸಂಭ್ರಮ; ವಿಜಯ್ ಮಲ್ಯ 70ನೇ ಹುಟ್ಟುಹಬ್ಬಕ್ಕೆ ಪಾರ್ಟಿ ಕೊಟ್ಟ ಲಲಿತ್ ಮೋದಿ
ವಿಜಯ್ ಮಲ್ಯ ಅವರು ಭಾರತಕ್ಕೆ ಹಿಂತಿರುಗುತ್ತಾರೋ ಇಲ್ಲವೋ ಎಂಬುದನ್ನು ಸ್ಪಷ್ಟವಾಗಿ ಹೇಳುವ ಅಫಿಡವಿಟ್ ಸಲ್ಲಿಸುವಂತೆ ನ್ಯಾಯಾಲಯ ಆದೇಶಿಸಿದೆ. “ನೀವು ಯಾವಾಗ ಬರುತ್ತೀರಿ? ನ್ಯಾಯಾಲಯದಲ್ಲಿ ನಿಮ್ಮ ದೈಹಿಕ ಉಪಸ್ಥಿತಿಯಿಲ್ಲದೆ ನೀವು ವಿಚಾರಣೆಗೆ ಅರ್ಹರು ಎಂದು ಈಗಾಗಲೇ ವಾದಿಸಿದ್ದೀರಿ. ಆದರೆ ಮೊದಲು ಅದನ್ನು ಸ್ಪಷ್ಟವಾಗಿ ಹೇಳುವ ಅಫಿಡವಿಟ್ ಸಲ್ಲಿಸಿ” ಎಂದು ಮುಖ್ಯ ನ್ಯಾಯಮೂರ್ತಿ ಚಂದ್ರಶೇಖರ್ ಹೇಳಿದ್ದರು.
ತಮ್ಮ ವಿರುದ್ಧದ ವಿಚಾರಣೆಗಳು ವಿದೇಶದಲ್ಲಿ ನಡೆಯುತ್ತಿರುವುದರಿಂದ ಯುಕೆ ನ್ಯಾಯಾಲಯಗಳು ವಿಧಿಸಿರುವ ನಿರ್ಬಂಧಗಳ ಕಾರಣದಿಂದಾಗಿ ನನಗೆ ಭಾರತಕ್ಕೆ ಪ್ರಯಾಣವ ಮಾಡಲು ಸಾಧ್ಯವಾಗುವುದಿಲ್ಲ ಎಂದು ವಿಜಯ್ ಮಲ್ಯ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಇದನ್ನೂ ಓದಿ: ಎರಡನೇ ವಿಜಯ್ ಮಲ್ಯ ಆಗಿದ್ದರೇ ಸಿಜೆ ರಾಯ್? ಐಷಾರಾಮಿ ಜೀವನ, ನಷ್ಟದಿಂದ ಆಘಾತ! ಸ್ಫೋಟಕ ಮಾಹಿತಿ ಬಹಿರಂಗ
2016ರಿಂದ ಯುಕೆಯಲ್ಲಿ ನೆಲೆಸಿರುವ ವಿಜಯ್ ಮಲ್ಯ ಎರಡು ಅರ್ಜಿಗಳನ್ನು ಸಲ್ಲಿಸಿದ್ದಾರೆ. ಒಂದು ತಮ್ಮನ್ನು ಪರಾರಿಯಾದ ಆರ್ಥಿಕ ಅಪರಾಧಿ ಎಂದು ಘೋಷಿಸಿದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯಾಗಿದ್ದರೆ ಇನ್ನೊಂದು 2018ರ ಕಾಯ್ದೆಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿದ್ದಾಗಿದೆ. 70 ವರ್ಷ ವಯಸ್ಸಿನ ವಿಜಯ್ ಮಲ್ಯ ಭಾರತದಲ್ಲಿ ವಂಚನೆ ಮತ್ತು ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಹಲವಾರು ಪ್ರಕರಣಗಳನ್ನು ಎದುರಿಸುತ್ತಿದ್ದಾರೆ.
ಏನಿದು ಪ್ರಕರಣ?:
ವಿಜಯ್ ಮಲ್ಯ ಮತ್ತು ಲಲಿತ್ ಮೋದಿ ಇಬ್ಬರೂ ಭಾರತದಲ್ಲಿ ಆರ್ಥಿಕ ಅಕ್ರಮಗಳ ಆರೋಪಗಳನ್ನು ಎದುರಿಸುತ್ತಿದ್ದಾರೆ. ಆದರೂ ಅವರು ಆರೋಪಗಳನ್ನು ನಿರಾಕರಿಸಿದ್ದಾರೆ. 2018ರ ಕಾನೂನಿನ ಅಡಿಯಲ್ಲಿ ಒಟ್ಟು 15 ಜನ ದೇಶ ಬಿಟ್ಟು ಪರಾರಿಯಾಗಿರುವ ವ್ಯಕ್ತಿಗಳನ್ನು ಆರ್ಥಿಕ ಅಪರಾಧಿಗಳೆಂದು ಘೋಷಿಸಲಾಗಿದೆ. ಈ ಪೈಕಿ 9 ಜನರು ಸಾರ್ವಜನಿಕ ವಲಯದ ಬ್ಯಾಂಕುಗಳ ವಿರುದ್ಧ ದೊಡ್ಡ ಪ್ರಮಾಣದ ಹಣಕಾಸು ವಂಚನೆಯಲ್ಲಿ ಭಾಗಿಯಾಗಿದ್ದು, ಇದರ ಪರಿಣಾಮವಾಗಿ 26,645 ಕೋಟಿ ರೂ. ಮೂಲ ನಷ್ಟವಾಗಿದೆ. 2025ರ ಅಕ್ಟೋಬರ್ 31ರವರೆಗೆ ಈ ಸಾಲಗಳ ಮೇಲಿನ ಬಡ್ಡಿ 31,437 ಕೋಟಿ ರೂ.ಗಳಾಗಿದ್ದು, ಅಪರಾಧಿಗಳಿಂದ 19,187 ಕೋಟಿ ರೂ.ಗಳನ್ನು ವಸೂಲಿ ಮಾಡಲಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ