54 ನೇ ವಯಸ್ಸಿನಲ್ಲಿಯೂ ನಟಿ ಖುಷ್ಬೂ ಅವರು 20 ಕೆಜಿ ದೇಹದ ತೂಕವನ್ನು ಕಳೆದುಕೊಂಡಿದ್ದಾರೆ. ಇಂಜೆಕ್ಷನ್ ಬಳಸಿ ಅವರು ತೂಕ ಕಳೆದುಕೊಂಡರು ಎಂದು ಕೆಲವರು ಹೇಳಿದ್ದಾರೆ. ಈ ವಿಷಯದಲ್ಲಿ ಅವರನ್ನು ಟ್ರೋಲ್ ಮಾಡಿದರು. ಆದರೆ, ಅವರು ತಮ್ಮ ಕಠಿಣ ಪರಿಶ್ರಮವನ್ನು ನಂಬಿದ್ದರು. ಅವರ ತೂಕ ಇಳಿಸುವಿಕೆಯ ಹಿಂದಿನ ಕಠಿಣ ಪರಿಶ್ರಮ ಮತ್ತು ಸಮಾಜದಲ್ಲಿನ ತಪ್ಪು ಕಲ್ಪನೆಗಳನ್ನು ಅವರು ಹೇಗೆ ನಿವಾರಿಸಿದರು ಎಂಬ ಬಗ್ಗೆ ಇಲ್ಲಿದೆ ಮಾಹಿತಿ.
ಖುಷ್ಬೂ ಅವರ ತೂಕ ಇಳಿಸುವ ಪ್ರಯಾಣವು 2020ರಲ್ಲಿ ಕಾಣಿಸಿಕೊಂಡ ಕೊರೊನಾ ಸಮಯದಲ್ಲಿ ಆರಂಭ ಆಯಿತು. ಆ ಸಮಯದಲ್ಲಿ, ಅವರ ತೂಕ 93 ಕೆಜಿ ಇತ್ತು. ಅಂದಿನಿಂದ, ಅವರು ಶಿಸ್ತುಬದ್ಧ ಜೀವನಶೈಲಿಯನ್ನು ಅಳವಡಿಸಿಕೊಂಡಿದ್ದಾರೆ. ಯೋಗ, ಜಿಮ್ ಮಾಡೋದು ಮತ್ತು ಕಟ್ಟುನಿಟ್ಟಿನ ಆಹಾರಕ್ರಮವನ್ನು ಅನುಸರಿಸುವ ಮೂಲಕ ಅವರು ತಮ್ಮ ದೇಹವನ್ನು ರೂಪಿಸಿಕೊಂಡಿದ್ದಾರೆ.
ಫಿಟ್ನೆಸ್ಗೆ ಅವರ ಸಮರ್ಪಣೆಗಾಗಿ ಖ್ಯಾತ ನಿರ್ದೇಶಕ ಆನಂದ್ ಕುಮಾರ್ ಅವರನ್ನು ಶ್ಲಾಘಿಸಿದ್ದಾರೆ. ಅವರು ಪ್ರತಿದಿನ 10,000 ರಿಂದ 15,000 ಹೆಜ್ಜೆಗಳನ್ನು ನಡೆಯುತ್ತಾರೆ ಮತ್ತು ಅವರು ಪ್ರಯಾಣ ಮಾಡುವಾಗಲೂ
ನಡೆಯುವುದನ್ನು ಎಂದಿಗೂ ನಿರ್ಲಕ್ಷಿಸುವುದಿಲ್ಲ.
40 ವರ್ಷದ ನಂತರ ತೂಕ ಇಳಿಸಿಕೊಳ್ಳುವುದು ಅಸಾಧ್ಯ ಎಂದು ಹಲವರು ಭಾವಿಸುತ್ತಾರೆ. ಆದರೆ ಖುಷ್ಬೂ ಅದನ್ನು ತಳ್ಳಿ ಹಾಕುತ್ತಾರೆ. ‘ವಯಸ್ಸಾದಂತೆ ಚಯಾಪಚಯ ಕ್ರಿಯೆ ನಿಧಾನವಾಗುತ್ತದೆ ನಿಜ, ಆದರೆ ಅದು ಸಂಪೂರ್ಣವಾಗಿ ನಿಲ್ಲುವುದಿಲ್ಲ. ನಾವು ದೈಹಿಕ ಚಟುವಟಿಕೆಯನ್ನು ಕಡಿಮೆ ಮಾಡುವುದರಿಂದ ಮತ್ತು ನಮ್ಮ ಹಳೆಯ ಆಹಾರ ಪದ್ಧತಿಯನ್ನು ಬದಲಾಯಿಸದ ಕಾರಣ ನಾವು ತೂಕ ಹೆಚ್ಚಿಸಿಕೊಳ್ಳುತ್ತೇವೆ’ ಎಂದು ಅವರು ಹೇಳಿದ್ದಾರೆ.
‘ತೂಕ ಇಳಿಸಿಕೊಳ್ಳಲು ಕೇವಲ ನಡೆಯುವುದು ಅಥವಾ ಓಡುವುದು ಸಾಕಾಗುವುದಿಲ್ಲ. ಸ್ನಾಯುಗಳ ಬಲವನ್ನು ಹೆಚ್ಚಿಸುವ ವ್ಯಾಯಾಮಗಳು ಸಹ ಅಗತ್ಯ. ಸ್ನಾಯುಗಳು ಬಲವಾಗಿದ್ದಷ್ಟೂ ಕ್ಯಾಲೊರಿಗಳು ವೇಗವಾಗಿ ಬರ್ನ್ ಆಗುತ್ತವೆ’ ಎನ್ನುತ್ತಾರೆ ಅವರು.
‘ಋತುಚಕ್ರದ ಸಮಯದಲ್ಲಿ ಹಾರ್ಮೋನುಗಳ ಬದಲಾವಣೆಗಳಿಂದ ತೂಕ ಹೆಚ್ಚಾಗುವುದು ಸಹಜ. ಆದಾಗ್ಯೂ, ಒತ್ತಡವನ್ನು ಕಡಿಮೆ ಮಾಡುವುದು, ಸರಿಯಾದ ನಿದ್ರೆ ಮಾಡುವುದು ಮತ್ತು ಪೌಷ್ಟಿಕ ಆಹಾರವನ್ನು ಸೇವಿಸುವ ಮೂಲಕ ಇದನ್ನು ನಿವಾರಿಸಬಹುದು’ ಎಂಬುದು ಅವರ ಅಭಿಪ್ರಾಯ.
ಇದನ್ನೂ ಓದಿ: ಶೀಘ್ರವೇ ಖುಷ್ಬೂ ಸುಂದರ್ ಹಿರಿಮಗಳು ಚಿತ್ರರಂಗಕ್ಕೆ ಎಂಟ್ರಿ? ಕೇಳಿ ಬಂತು ಬಿಗ್ ಅಪ್ಡೇಟ್
ಹೇಗೆ ಬದುಕಬೇಕು ಎಂಬುದಕ್ಕೆ ಖುಷ್ಬೂ ಸುಂದರ್ ಒಂದು ಉತ್ತಮ ಉದಾಹರಣೆ. 54 ನೇ ವಯಸ್ಸಿನಲ್ಲಿ ಅವರು ಸಾಧಿಸಿದ ಈ ಬದಲಾವಣೆ ಅನೇಕರಿಗೆ ಮಾದರಿ. ಸರಿಯಾದ ಮನಸ್ಥಿತಿ ಮತ್ತು ಸ್ಥಿರ ಪ್ರಯತ್ನದಿಂದ, ವಯಸ್ಸಿನ ಹೊರತಾಗಿಯೂ ಯಾರಾದರೂ ಆರೋಗ್ಯವಂತರಾಗಬಹುದು.
(ವಿಶೇಷ ಸೂಚನೆ: ಇದು ಸಂಪೂರ್ಣವಾಗಿ ನಟಿಯ ಅಭಿಪ್ರಾಯ. ನೀವು ಕೂಡ ದೇಹದ ತೂಕ ಇಳಿಸಿಕೊಳ್ಳಬೇಕು ಎಂದಿದ್ದರೆ ವೈದ್ಯರ ಸಲಹೆ ಪಡೆದು ಮುಂದುವರಿಯಿರಿ)
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On – 8:03 am, Thu, 19 February 26