ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತೆ ಕಣಕ್ಕಿಳಿಯುವುದು ಯಾವಾಗ? – Kannada News | When will Virat Kohli and Rohit Sharma play next?

ವಿಜಯ ಹಝಾರೆ ಟೂರ್ನಿಯ ಮೂಲಕ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ದೇಶೀಯ ಕ್ರಿಕೆಟ್​ಗೆ ಮರಳಿದ್ದಾರೆ. ಬೆಂಗಳೂರಿನ ಸಿಒಇ ಮೈದಾನದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಕಿಂಗ್ ಕೊಹ್ಲಿ ದೆಹಲಿ ಪರ ಕಣಕ್ಕಿಳಿದರೆ, ಜೈಪುರದಲ್ಲಿ ನಡೆದ ಮತ್ತೊಂದು ಪಂದ್ಯದಲ್ಲಿ ರೋಹಿತ್ ಶರ್ಮಾ ಬ್ಯಾಟ್ ಬೀಸಿದ್ದರು. ವಿಶೇಷ ಎಂದರೆ ಈ ಇಬ್ಬರು ದಿಗ್ಗಜರು ಮೊದಲ ಮ್ಯಾಚ್​ನಲ್ಲೇ ಶತಕ ಸಿಡಿಸಿದ್ದಾರೆ.

  • ಆಂಧ್ರ ಪ್ರದೇಶ್ ವಿರುದ್ಧದ ಪಂದ್ಯದಲ್ಲಿ ದೆಹಲಿ ಪರ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ವಿರಾಟ್ ಕೊಹ್ಲಿ 101 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 14 ಫೋರ್​ಗಳೊಂದಿಗೆ 131 ರನ್ ಬಾರಿಸಿದ್ದಾರೆ.
  • ಸಿಕ್ಕಿಂ ವಿರುದ್ಧದ ಮ್ಯಾಚ್​ನಲ್ಲಿ ಮುಂಬೈ ಪರ ಆರಂಭಿಕನಾಗಿ ಕಣಕ್ಕಿಳಿದ ರೋಹಿತ್ ಶರ್ಮಾ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಈ ಪಂದ್ಯದಲ್ಲಿ 94 ಎಸೆತಗಳನ್ನು ಎದುರಿಸಿದ ಹಿಟ್​ಮ್ಯಾನ್ 9 ಭರ್ಜರಿ ಸಿಕ್ಸ್ ಹಾಗೂ 18 ಫೋರ್​ಗಳೊಂದಿಗೆ 155 ರನ್ ಬಾರಿಸಿದ್ದಾರೆ.

ಅಂದರೆ 15 ವರ್ಷಗಳ ಬಳಿಕ ದೇಶೀಯ ಏಕದಿನ ಪಂದ್ಯವಾಡಿದ ವಿರಾಟ್ ಕೊಹ್ಲಿ ಭರ್ಜರಿ ಸೆಂಚುರಿಯೊಂಧಿಗೆ ಅಬ್ಬರಿಸಿದ್ದಾರೆ. ಮತ್ತೊಂದೆಡೆ 7 ವರ್ಷಗಳ ಬಳಿಕ ವಿಜಯ ಹಝಾರೆ ಪಂದ್ಯವಾಡಿದ ರೋಹಿತ್ ಶರ್ಮಾ ಕೂಡ ಶತಕದೊಂದಿಗೆ ಮಿಂಚಿದ್ದಾರೆ. ಈ ಅಬ್ಬರದೊಂದಿಗೆ ಇಬ್ಬರು ದಿಗ್ಗಜರು ತಮ್ಮ ಫಾರ್ಮ್​ ಅನ್ನು ಮುಂದುವರೆಸಿದ್ದಾರೆ.

ಮತ್ತೆ ಕಣಕ್ಕಿಳಿಯುವುದು ಯಾವಾಗ?

ವಿಜಯ ಹಝಾರೆ ಟೂರ್ನಿಯ ಮೊದಲ ಮ್ಯಾಚ್​ನಲ್ಲಿ ಕಣಕ್ಕಿಳಿದಿರುವ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಡಿಸೆಂಬರ್ 26 ರಂದು ನಡೆಯಲಿರುವ ದ್ವಿತೀಯ ಪಂದ್ಯದಲ್ಲೂ ಕಾಣಿಸಿಕೊಳ್ಳಲಿದ್ದಾರೆ. ಏಕೆಂದರೆ ಬಿಸಿಸಿಐ, ಟೀಮ್ ಇಂಡಿಯಾ ಆಟಗಾರರಿಗೆ ವಿಜಯ ಹಝಾರೆ ಟೂರ್ನಿಯಲ್ಲಿ ಕನಿಷ್ಠ 2 ಪಂದ್ಯಗಳನ್ನಾಡುವಂತೆ ಸೂಚಿಸಲಾಗಿದೆ. ಹೀಗಾಗಿ ಶುಕ್ರವಾರ ನಡೆಯಲಿರುವ ದ್ವಿತೀಯ ಸುತ್ತಿನ ಪಂದ್ಯಗಳಲ್ಲೂ ರೋ-ಕೊ ಜೋಡಿ ಮತ್ತೆ ಕಣಕ್ಕಿಳಿಯಲಿದ್ದಾರೆ.

  • ಜೈಪುರದ ಸವಾಯಿ ಮಾನ್​ಸಿಂಗ್ ಸ್ಟೇಡಿಯಂನಲ್ಲಿ ನಡೆಯಲಿರುವ 2ನೇ ಪಂದ್ಯದಲ್ಲಿ ಮುಂಬೈ ಮತ್ತು ಉತ್ತರಾಖಂಡ್ ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯದಲ್ಲಿ ರೋಹಿತ್ ಶರ್ಮಾ ಕಣಕ್ಕಿಳಿಯುವುದು ಖಚಿತ.
  • ಬೆಂಗಳೂರಿನ ಸಿಒಇ ಮೈದಾನದಲ್ಲಿ ನಡೆಯಲಿರುವ ದ್ವಿತೀಯ ಪಂದ್ಯದಲ್ಲಿ ದೆಹಲಿ ಮತ್ತು ಗುಜರಾತ್ ತಂಡಗಳು ಮುಖಾಮುಖಿಯಾಗಲಿದ್ದು, ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಕಾಣಿಸಿಕೊಳ್ಳಲಿದ್ದಾರೆ.

ಈ ಎರಡು ಮ್ಯಾಚ್​ಗಳ ಬಳಿಕ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ವಿಶ್ರಾಂತಿ ಪಡೆಯುವ ಸಾಧ್ಯತೆಯಿದೆ. ಏಕೆಂದರೆ ಜನವರಿ 11 ರಿಂದ ಭಾರತ ಮತ್ತು ನ್ಯೂಝಿಲೆಂಡ್ ನಡುವಣ ಏಕದಿನ ಸರಣಿ ಶುರುವಾಗಲಿದ್ದು, ಅದಕ್ಕೂ ಮುನ್ನ ಸಂಪೂರ್ಣ ವಿಶ್ರಾಂತಿ ಪಡೆದು ಹಿಟ್​ಮ್ಯಾನ್, ಕಿಂಗ್ ಕೊಹ್ಲಿ ಜೋಡಿ ಮತ್ತೆ ಅಭ್ಯಾಸಕ್ಕೆ ಮರಳುವ ಸಾಧ್ಯತೆಯಿದೆ.

Source link

Leave a Reply

Your email address will not be published. Required fields are marked *