2026 ರ ಟಿ20 ವಿಶ್ವಕಪ್ನ ಗುಂಪು ಹಂತ ಮುಕ್ತಾಯಗೊಂಡಿದೆ. ಇದರರ್ಥ ಈ ಟೂರ್ನಿಯಲ್ಲಿ 12 ತಂಡಗಳ ಪ್ರಯಾಣವೂ ಅಂತ್ಯಗೊಂಡಿದೆ. ವಾಸ್ತವವಾಗಿ ಒಟ್ಟು 20 ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು. ಅಂತಿಮವಾಗಿ 8 ತಂಡಗಳು ಸೂಪರ್ 8 ಸುತ್ತಿಗೆ ಅರ್ಹತೆ ಪಡೆದರೆ, ಉಳಿದ 12 ತಂಡಗಳು ಗುಂಪು ಹಂತದಲ್ಲೇ ಟೂರ್ನಿಯಿಂದ ಹೊರಬಿದ್ದಿವೆ. ಈ ತಂಡಗಳಲ್ಲಿ ಮೂರು ತಂಡಗಳಿಗೆ ಗೆಲುವಿನ ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ಅಂದರೆ ಈ ಮೂರು ತಂಡಗಳು ಗುಂಪು ಹಂತದಲ್ಲಿ ಆಡಿದ ಎಲ್ಲಾ 4 ಪಂದ್ಯಗಳನ್ನು ಸೋತವು. ಆದಾಗ್ಯೂ ಐಸಿಸಿ, ಈ ಮೂರು ತಂಡಗಳಿಗೆ ಕೋಟಿ ಮೊತ್ತದ ಬಹುಮಾನ ನೀಡಲಿದೆ.
ಮೂರು ತಂಡಗಳಿಗೆ ಗೆಲುವು ಧಕ್ಕಲಿಲ್ಲ
2026 ರ ಟಿ20 ವಿಶ್ವಕಪ್ನಲ್ಲಿ ಒಂದೇ ಒಂದು ಪಂದ್ಯವನ್ನು ಗೆಲ್ಲದ ತಂಡಗಳು ಓಮನ್, ನಮೀಬಿಯಾ ಮತ್ತು ಕೆನಡಾ. ನಮೀಬಿಯಾ ಟೂರ್ನಮೆಂಟ್ನಲ್ಲಿ ಎ ಗುಂಪಿನ ಭಾಗವಾಗಿತ್ತು, ಭಾರತ, ಪಾಕಿಸ್ತಾನ, ನೆದರ್ಲ್ಯಾಂಡ್ಸ್ ಮತ್ತು ಯುಎಸ್ಎ ವಿರುದ್ಧ ಸೋತಿತು. ಇತ್ತ ಡಿ ಗುಂಪಿನಲ್ಲಿ ಸ್ಥಾನ ಪಡೆದಿದ್ದ ಕೆನಡಾ ಕೂಡ ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್, ಅಫ್ಘಾನಿಸ್ತಾನ ಮತ್ತು ಯುಎಇ ವಿರುದ್ಧ ಸೋತಿತು. ಮತ್ತೊಂದೆಡೆ ಬಿ ಗುಂಪಿನಲ್ಲಿ ಸ್ಥಾನ ಪಡೆದಿದ್ದ ಓಮನ್, ಜಿಂಬಾಬ್ವೆ, ಶ್ರೀಲಂಕಾ, ಆಸ್ಟ್ರೇಲಿಯಾ ಮತ್ತು ಐರ್ಲೆಂಡ್ ವಿರುದ್ಧ ಸೋತಿತು. ಈ ಮೂರು ತಂಡಗಳನ್ನು ಹೊರತುಪಡಿಸಿ ಉಳಿದ 17 ತಂಡಗಳು ಕನಿಷ್ಠ ಒಂದು ಪಂದ್ಯದಲ್ಲಿ ಗೆಲುವು ಸಾಧಿಸುವಲ್ಲಿ ಯಶಸ್ವಿಯಾದವು.
ಸೋತ ತಂಡಗಳಿಗೂ ಬಹುಮಾನ
ಈ ಮೂರು ತಂಡಗಳು ಒಂದು ಪಂದ್ಯವನ್ನು ಗೆದ್ದಿಲ್ಲದಿರಬಹುದು, ಆದಾಗ್ಯೂ ಈ ತಂಡಗಳಿಗೆ ಐಸಿಸಿಯಿಂದ ಬಹುಮಾನದ ಹಣ ಸಿಗುವುದು ಖಚಿತ. ವಾಸ್ತವವಾಗಿ, ಕಳೆದ ಆವೃತ್ತಿಯಲ್ಲಿ, ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯು 9 ರಿಂದ 12 ನೇ ಸ್ಥಾನ ಪಡೆದ ಪ್ರತಿ ತಂಡಕ್ಕೆ ಸುಮಾರು 2.25 ಕೋಟಿ ರೂ. ಬಹುಮಾನ ನೀಡಿತ್ತು. ಹಾಗೆಯೇ 13 ರಿಂದ 20 ನೇ ಸ್ಥಾನ ಪಡೆದ ಪ್ರತಿ ತಂಡಗಳು ಕೂಡ ಸುಮಾರು 2 ಕೋಟಿ ರೂ. ಬಹುಮಾನ ಪಡೆದಿದ್ದವು. ಹೀಗಾಗಿ ಈ ಆವೃತ್ತಿಯಲ್ಲಿ ಕೊನೆಯ 3 ಸ್ಥಾನ ಪಡೆದುಕೊಂಡಿರುವ ಈ ಮೂರು ತಂಡಗಳಿಗೂ ಕನಿಷ್ಠ 2 ಕೋಟಿ ರೂ. ಬಹುಮಾನ ಸಿಗುವುದು ಖಚಿತ.
ಇವು ಪ್ರಮುಖ ಪಂದ್ಯಾವಳಿಗಳಲ್ಲಿ ಭಾಗವಹಿಸುವ ಮೂಲಕ ಅನುಭವವನ್ನು ಪಡೆಯುವ ಅಸೋಸಿಯೇಟ್ ರಾಷ್ಟ್ರಗಳಾಗಿದ್ದು, ಐಸಿಸಿಯಿಂದ ಬರುವ ಈ ಬಹುಮಾನವು ಅವರ ಕ್ರಿಕೆಟ್ ಅಭಿವೃದ್ಧಿಗೆ ಸಹಾಯ ಮಾಡುತ್ತದೆ. ಈ ತಂಡಗಳು ಐಸಿಸಿಯಿಂದ ಸಿಗುವ ಈ ಹಣವನ್ನು ಮುಂದಿನ ಪಂದ್ಯಾವಳಿಗೆ ತಯಾರಿ, ಆಟಗಾರರ ಅಭಿವೃದ್ಧಿ ಮತ್ತು ಕ್ರಿಕೆಟ್ ಮೂಲಸೌಕರ್ಯಕ್ಕಾಗಿ ಖರ್ಚು ಮಾಡಬಹುದು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ