T20 World Cup 2026: ಟಿ20 ವಿಶ್ವಕಪ್ನ ಸೂಪರ್-8 ಸುತ್ತಿನ ಮೊದಲ ಪಂದ್ಯವೇ ಮಳೆಗೆ ಆಹುತಿಯಾಗಿದೆ. ಕೊಲಂಬೊದಲ್ಲಿ ನಡೆಯಬೇಕಿದ್ದ ಪಾಕಿಸ್ತಾನ್ ಮತ್ತು ನ್ಯೂಝಿಲೆಂಡ್ ನಡುವಣ ಮ್ಯಾಚ್ ಮಳೆಯಿಂದಾಗಿ ರದ್ದುಗೊಳಿಸಲಾಗಿದೆ. ಈ ಹಿನ್ನಲೆಯಲ್ಲಿ ಮಳೆ ಬಂದರೆ ಸೆಮಿಫೈನಲ್ಗೇರುವುದು ಯಾರು ಎಂಬ ಲೆಕ್ಕಾಚಾರ ಕೂಡ ಶುರುವಾಗಿದೆ. ಅದರಲ್ಲೂ ಎಲ್ಲಾ ಮ್ಯಾಚ್ಗಳು ರದ್ದಾದರೆ ಸೆಮಿಫೈನಲ್ಗೆ ತಂಡಗಳ ಆಯ್ಕೆ ಹೇಗೆ ಎಂಬ ಪ್ರಶ್ನೆ ಮೂಡುವುದು ಸಹಜ. ಈ ಪ್ರಶ್ನೆಗೆ ಇಲ್ಲಿದೆ ಉತ್ತರ…
ಟಿ20 ವಿಶ್ವಕಪ್ನ ಸೂಪರ್- 8 ಹಂತದ ಎಲ್ಲಾ ಪಂದ್ಯಗಳು ಮಳೆಯಿಂದ ರದ್ದಾದರೆ , ಭಾರತ ತಂಡ ಸೆಮಿಫೈನಲ್ಗೆ ಅರ್ಹತೆ ಪಡೆಯುತ್ತದೆ. ಇದಕ್ಕೆ ಮುಖ್ಯ ಕಾರಣ ಐಸಿಸಿ ನಿಯಮಗಳು.
ಸೂಪರ್-8 ಹಂತದ ನಿಯಮಗಳು:
- ಐಸಿಸಿ ನಿಯಮದಂತೆ, ಸೂಪರ್ 8 ಹಂತದ ಪಂದ್ಯಗಳಿಗೆ ಮೀಸಲು ದಿನ ಇರುವುದಿಲ್ಲ. ಒಂದು ವೇಳೆ ಪಂದ್ಯವು ಮಳೆಯಿಂದ ರದ್ದಾದರೆ, ಎರಡೂ ತಂಡಗಳಿಗೆ ತಲಾ 1 ಅಂಕವನ್ನು ನೀಡಲಾಗುತ್ತದೆ.
- ಗ್ರೂಪ್- 1ರ ಎಲ್ಲಾ ಪಂದ್ಯ ರದ್ದಾದರೆ ಭಾರತ ಮತ್ತು ಸೌತ್ ಆಫ್ರಿಕಾ ತಂಡಗಳು ಮುಂದಿನ ಹಂತಕ್ಕೇರಲಿದೆ.
ಏಕೆಂದರೆ ಪಂದ್ಯ ರದ್ದಾದರೆ ಒಂದು ಅಂಕಗಳನ್ನು ನೀಡಲಾಗುತ್ತದೆಯೇ ಹೊರತು ಯಾವುದೇ ನೆಟ್ ರನ್ ರೇಟ್ ಇರುವುದಿಲ್ಲ. ಒಂದು ವೇಳೆ ಗ್ರೂಪ್-1 ರ ಎಲ್ಲಾ ಮ್ಯಾಚ್ಗಳು ರದ್ದಾದರೆ, ಎಲ್ಲಾ ತಂಡಗಳ ಪಾಯಿಂಟ್ಸ್ 3 ಆಗಿರಲಿದೆ. ಇದಾಗ್ಯೂ ವೆಸ್ಟ್ ಇಂಡೀಸ್, ಝಿಂಬಾಬ್ವೆ ಬದಲಿಗೆ ಭಾರತ ಮತ್ತು ಸೌತ್ ಆಫ್ರಿಕಾ ತಂಡಗಳು ಸೆಮಿಫೈನಲ್ಗೆ ಪ್ರವೇಶಿಸುತ್ತದೆ.
ಭಾರತ ಮತ್ತು ಸೌತ್ ಆಫ್ರಿಕಾ ಆಯ್ಕೆ ಯಾಕೆ?
ಐಸಿಸಿ ಟೂರ್ನಿಯ ಎಲ್ಲಾ ಪಂದ್ಯಗಳು ರದ್ದಾಗಿ ಅಂಕಗಳು ಸಮನಾದಾಗ ಸೆಮಿಫೈನಲ್ ಪ್ರವೇಶಿಸುವ ತಂಡವನ್ನು ಆಯ್ಕೆ ಮಾಡಲು ಈ ಕೆಳಗಿನ ಮಾನದಂಡಗಳನ್ನು ಬಳಸುತ್ತದೆ…
- ಹೆಚ್ಚಿನ ಗೆಲುವುಗಳು: ಇಲ್ಲಿ ಎಲ್ಲಾ ತಂಡಗಳ ಗೆಲುವು 0 ಇರುತ್ತವೆ.
- ಉತ್ತಮ ನೆಟ್ ರನ್ ರೇಟ್: ಪಂದ್ಯ ನಡೆಯದ ಕಾರಣ ಎಲ್ಲಾ ತಂಡಗಳ ನೆಟ್ ರನ್ ರೇಟ್ 0.00 ಇರುತ್ತದೆ.
- ಹೆಡ್-ಟು-ಹೆಡ್: ತಂಡಗಳ ನಡುವೆ ಪಂದ್ಯ ಪೂರ್ಣಗೊಳ್ಳದ ಕಾರಣ ಇದು ಅನ್ವಯಿಸುವುದಿಲ್ಲ.
- ಐಸಿಸಿ ಟಿ20 ಶ್ರೇಯಾಂಕ: ಮೇಲಿನ ಯಾವುದೂ ಅನ್ವಯಿಸದಿದ್ದರೆ, ಟೂರ್ನಿ ಆರಂಭಕ್ಕೂ ಮುನ್ನ ಇದ್ದ ಐಸಿಸಿ ಟಿ20 ತಂಡಗಳ ಶ್ರೇಯಾಂಕವನ್ನು ಪರಿಗಣಿಸಲಾಗುತ್ತದೆ.
ಅಂದರೆ ಐಸಿಸಿ ಟಿ20 ತಂಡಗಳ ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲಿರುವ ಟೀಮ್ ಇಂಡಿಯಾ ಗ್ರೂಪ್-1 ರಿಂದ ನೇರವಾಗಿ ಸೆಮಿಫೈನಲ್ಗೆ ಪ್ರವೇಶಿಸುತ್ತದೆ. ಇನ್ನು 5ನೇ ಸ್ಥಾನದಲ್ಲಿರುವ ಸೌತ್ ಆಫ್ರಿಕಾ ತಂಡ 2ನೇ ತಂಡವಾಗಿ ಸೆಮಿಫೈನಲ್ಗೆ ಎಂಟ್ರಿ ಕೊಡಲಿದೆ.
ಇದೇ ನಿಯಮ ಗ್ರೂಪ್-2 ಗೂ ಅನ್ವಯಿಸಲಿದೆ. ಅಂದರೆ ಗ್ರೂಪ್-2 ರ ಎಲ್ಲಾ ಪಂದ್ಯಗಳು ಮಳೆಯಿಂದಾಗಿ ರದ್ದಾದರೆ, ಐಸಿಸಿ ಟಿ20 ತಂಡಗಳ ಶ್ರೇಯಾಂಕದಲ್ಲಿ ಮೇಲಿನ ಸ್ಥಾನಗಳಲ್ಲಿರುವ ತಂಡಗಳು ಸೆಮಿಫೈನಲ್ಗೆ ಪ್ರವೇಶಿಸುತ್ತದೆ. ಅದರಂತೆ ಗ್ರೂಪ್- 2 ನಿಂದ ಟಿ20 ತಂಡಗಳ ರ್ಯಾಂಕಿಂಗ್ನಲ್ಲಿ 2ನೇ ಸ್ಥಾನದಲ್ಲಿರುವ ಇಂಗ್ಲೆಂಡ್ ಹಾಗೂ 4ನೇ ಸ್ಥಾನದಲ್ಲಿರುವ ನ್ಯೂಝಿಲೆಂಡ್ ತಂಡಗಳು ಸೆಮಿಫೈನಲ್ಗೆ ಅರ್ಹತೆ ಪಡೆಯಲಿದೆ.
ಇದನ್ನೂ ಓದಿ: ‘ಪವರ್’ ಇಲ್ಲ… ಬಾಬರ್ ಆಝಂ ಮಾನ ಕಳೆದ ಪಾಕ್ ಕೋಚ್
ಅಂದರೆ ಸೂಪರ್-8 ಸುತ್ತಿನ ಎಲ್ಲಾ ಪಂದ್ಯಗಳು ಮಳೆಯ ಕಾರಣ ರದ್ದಾದರೆ ಭಾರತ, ಸೌತ್ ಆಫ್ರಿಕಾ, ನ್ಯೂಝಿಲೆಂಡ್ ಮತ್ತು ಇಂಗ್ಲೆಂಡ್ ತಂಡಗಳು ಸೆಮಿಫೈನಲ್ಗೆ ಪ್ರವೇಶಿಸುತ್ತದೆ.