ಕಾರವಾರ, (ಫೆಬ್ರವರಿ 22): ಹಲವು ವರ್ಷಗಳಿಂದ ಸೂಪರ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ (super multi specialty hospital)ಬೇಕೆಂಬ ಉತ್ತರ ಕನ್ನಡ (Uttara Kannada) ಜಿಲ್ಲೆಯ ಜನರ ಕನಸು ನನಸಾಗಿದೆ. ಹೌದು….ಮುಂದಿನ ಬಜೆಟ್ನಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಮಂಜೂರು ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ (siddaramaiah) ಘೋಷಣೆ ಮಾಡಿದ್ದಾರೆ. ಈ ಮೂಲಕ ಉತ್ತರ ಕನ್ನಡ ಭಾಗದ ಜನರ ಬಹು ವರ್ಷಗಳ ಬೇಡಿಕೆಯನ್ನು ಸಿದ್ದರಾಮಯ್ಯ ಈಡೇರಿಸಿದ್ದಾರೆ.ಅಪಘಾತಗಳು ಸಂಭವಿಸಿದಾಗ ಈ ಜಿಲ್ಲೆಯಲ್ಲಿ ಉತ್ತಮ ಆಸ್ಪತ್ರೆಗಳಿಲ್ಲದೇ ಹುಬ್ಬಳ್ಳಿಗೆ ಹೋಗಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು. ಈಗ ಸಿಎಂ ಆಸ್ಪತ್ರೆ ಘೋಷಣೆ ಮಾಡಿದ್ದರಿಂದ ಈ ಭಾಗದ ಜನರು ನಿಟ್ಟುಸಿರು ಬಿಡುವಂತಾಗಿದೆ.
ಕಾರವಾರದಲ್ಲಿ ಇಂದು (ಫೆಬ್ರವರಿ 22) 450 ಬೆಡ್ಗಳ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟಿಸಿ ಮಾತನಾಡಿದ ಸಿದ್ದರಾಮಯ್ಯ, ಶಾಸಕ ಸತೀಶ್ ಸೈಲ್ ಮನವಿ ಮೇರೆಗೆ ಮುಂದಿನ ರಾಜ್ಯ ಆಯವ್ಯಯದಲ್ಲಿ (ಬಜೆಟ್) ಕಾರವಾರಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಮಂಜೂರು ಮಾಡುತ್ತೇನೆ ಎಂದು ಅಧಿಕೃತ ಭರವಸೆ ನೀಡಿದರು. ಅಲ್ಲದೇ ನಾನೇ ಬಂದು ಆಸ್ಪತ್ರೆ ಉದ್ಘಾಟನೆಯನ್ನೂ ಮಾಡುತ್ತೇನೆ ಎಂದು ಡಿಕೆಶಿ ಮುಂದೆ ಹೇಳಿದರು.
ಶ್ರೀಮಂತರು ಉತ್ತಮ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗಳಿಗೆ ಹೋಗಬಹುದು. ಆದರೆ ಬಡವರ ಪಾಲಿಗೆ ಸರ್ಕಾರಿ ಆಸ್ಪತ್ರೆಗಳೇ ಗತಿ ಎಂದು ಭಾವುಕರಾಗಿ ನುಡಿದ ಸಿಎಂ, ಸರ್ಕಾರಿ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಲು ತಮ್ಮ ಸರ್ಕಾರ ಬದ್ಧವಾಗಿದೆ. 2016ರಲ್ಲಿ ಕಾರವಾರದ ಮೆಡಿಕಲ್ ಕಾಲೇಜ್ ಉದ್ಘಾಟನೆ ಮಾಡಿದ್ದೆವು. ಇಂದು 200ಕೋಟಿ ರೂ. ವೆಚ್ಚದಲ್ಲಿ 450 ಬೆಡ್ಗಳ ಆಸ್ಪತ್ರೆ ನಿರ್ಮಾಣ ಮಾಡಿದ್ದೇವೆ ಎಂದರು.
ಗ್ಯಾರಂಟಿ ಯೋಜನೆಗಳಿಂದ ಸರ್ಕಾರದಲ್ಲಿ ಹಣವಿಲ್ಲ ಎಂದು ಟೀಕಿಸುತ್ತಿದ್ದ ಬಿಜೆಪಿಗೆ ಸಿಎಂ ಅಂಕಿ-ಅಂಶಗಳ ಮೂಲಕವೇ ತಿರುಗೇಟು ನೀಡಿದ ಸಿದ್ದರಾಮಯ್ಯ, ಸರ್ಕಾರದಲ್ಲಿ ಹಣವಿಲ್ಲದಿದ್ದರೆ 200 ಕೋಟಿ ರೂ. ವೆಚ್ಚದ ಆಸ್ಪತ್ರೆ ಮತ್ತು ಸೇತುವೆಗಳನ್ನು ನಿರ್ಮಿಸಲು ಹೇಗೆ ಸಾಧ್ಯ? ನಾವು ಗ್ಯಾರಂಟಿ ಮತ್ತು ಅಭಿವೃದ್ಧಿ ಎರಡನ್ನೂ ಜೊತೆಜತೆಯಾಗಿ ಕೊಂಡೊಯ್ಯುತ್ತಿದ್ದೇವೆ ಎಂದು ಟಾಂಗ್ ಕೊಟ್ಟರು.
ರಾಜೀನಾಮೆ ಎಚ್ಚರಿಕೆ ನೀಡಿದ ಶಾಸಕ ಸೈಲ್
ಸಿಎಂ ಸಿದ್ದರಾಮಯ್ಯಗೂ ಮುನ್ನ ಮಾತನಾಡಿದ ಶಾಸಕ ಸತೀಶ್ ಸೈಲ್, ಬಜೆಟ್ನಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಘೋಷಿಸುವ ಭರವಸೆ ಇದೆ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಘೋಷಿಸದಿದ್ರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ಆಸ್ಪತ್ರೆ ಘೋಷಿಸದಿದ್ರೆ ಹೇಳಿದಂತೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವೆ ಎಂದು ಸಿಎಂ, ಡಿಸಿಎಂ ಮುಂದೆಯೇ ಎಚ್ಚರಿಕೆ ನೀಡಿದ್ದಾರೆ.